Advertisement

ಬನ್ನೀ, ತಪ್ಪದೇ ತಿನ್ನಿ ತುಪ್ಪದ ಮೈಸೂರ್‌ ಪಾಕ್‌

01:06 PM Nov 20, 2017 | |

ಮಿಠಾಯಿ ಸೂರ್ಯನಾರಾಯಣ ರಾವ್‌ ಹೋಟೆಲ್‌ನ ತಿನಿಸುಗಳು ಬೇಗ ಹಾಳಾಗುತ್ತವೆ ಅನ್ನೋ ತಲೆಬೇನೆ ಬೇಡ.  ಮೈಸೂರ್‌ಪಾಕ್‌ 20ದಿನ ಇಟ್ಟರೂ ಕೆಡುವುದಿಲ್ಲ, ಮಿಕ್ಚರ್‌, ಅವಲಕ್ಕಿಗಳನ್ನು ವಾರಗಟ್ಟಲೆ ಇಟ್ಟುಕೊಂಡು ಸವಿಯಬಹುದು.  

Advertisement

ರೌಂಡ್‌- ಸಂಜೆ ತುಪ್ಪದ ಅವಲಕ್ಕಿ,  ಬಿಸಿಬಿಸಿ ಈರುಳ್ಳಿ, ಆಲೂಗಡ್ಡೆ ಬೊಂಡ, ವಡೆ ಟ್ರೇ ಮುಟ್ಟಿದರೆ ಬಿಸಿ ಬಿಸಿ. ಕೆಂಪೇರಿದ ಮೈಸೂರ್‌ ಪಾಕು.  ಘಮ್ಮೆನ್ನುವ ತುಪ್ಪ,  ನೋಡುವಷ್ಟರಲ್ಲಿ, ಬಾಯಲ್ಲಿ ನೀರು.  ಅಷ್ಟರಲ್ಲಿ ಮುತ್ತುಗದ ಎಲೆ, ಅದರ ಮೇಲೆ ಆಗತಾನೇ ಬಾಣಲೆಯಿಂದ ಎದ್ದು ಬಂದ ಮೈಸೂರ್‌ ಪಾಕು ಹಾಕುತ್ತಾರೆ.   ಹಾಗೇ ಮುರಿದು ಒಂದು ಪೀಸನ್ನು ಬಾಯಿಗೆ ಹಾಕಿಕೊಂಡರೆ,  ಕ್ಷಣಾರ್ಧದಲ್ಲಿ ಮತ್ತೂಂದು ಪೀಸ್‌ ಬೇಕು ಅನ್ನುತ್ತದೆ ಮನಸ್ಸು. ಮತ್ತೂಂದು ಆಯ್ತು,  ಮಗದೊಂದು, ಅದೂ ಆಯ್ತು ಇನ್ನೊಂದು ಹೀಗೆ ನಡೆಯುತ್ತಲೇ ಇರುತ್ತದೆ.  

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ವಿಜಯಪುರದ ಗಂಗಮ್ಮ ತಾಯಿ ದೇವಾಲಯದ ಬಳಿ ಇರುವ ಮಿಠಾಯಿ ಸೂರ್ಯನಾರಾಯಣ ರಾವ್‌ ಸ್ವೀಟ್‌ ಸ್ಟಾಲ್‌ ಹೊಕ್ಕರೆ ಆನಂತರದಲ್ಲಿ ಮನಸ್ಸು ನೀವು ಹೇಳಿದಂತೆ ಕೇಳ್ಳೋಲ್ಲ. ನಾಲಿಗೆ ಹೇಳಿದಂತೆ ಮಾಡುತ್ತದೆ.  ಹೋಟೆಲ್‌ ಹೆಸರಲ್ಲಿ ಮಿಠಾಯಿ ಇದೆ.  ಇದು ಫೇಮಸ್ಸಾಗಿರುವುದು ಮೈಸೂರ್‌ಪಾಕ್‌, ಅವಲಕ್ಕಿ, ಮಿಕ್ಚರ್‌ಗೆ. 

 ಅರೆ, ಮೈಸೂರು ಪಾಕ್‌ ಎರಡು ಪೀಸ್‌ ಮೇಲೆ ಇನ್ನೊಂದು ತಿನ್ನೋಕ್ಕಾಗಲ್ವಲ್ಲಾ? ಅನ್ನೋ ಮಾತು ಇಲ್ಲಿ ನಡೆಯೋಲ್ಲ. ಯಾವುದೇ ಕಾರಣಕ್ಕೂ ಯಗಟು ಬರುವುದಿಲ್ಲ. ಇಲ್ಲಿ ಮೈಸೂರ್‌ಪಾಕ್‌ ತಯಾರಿಸಲು ಶುದ್ಧ ತುಪ್ಪ. ಅಷ್ಟೇ ಪರಿಶುದ್ಧವಾದ ಕಡಲೇ ಹಿಟ್ಟು ಬಳಸುತ್ತಾರೆ. ಯಾವುದೂ ಮಿಷನ್‌ ಮೇಡಲ್ಲ;  ಮ್ಯಾನ್‌ ಮೇಡ್‌.  ಕಡಲೆ ಬೇಳೆಯನ್ನು ತಂದು, ಬಿಸಿಲಿಗೆ ಹಾಕಿ, ನಂತರ ಮೈಸೂರು ಪಾಕಿಗೆ ಹೊಂದುವಂತೆ ತರಿ ತರಿಯಾಗಿ ನುಣ್ಣಗೆ ಪುಡಿ ಮಾಡಿಸಿ,  ತಯಾರಿಸಿದ್ದರಿಂದಲೇ ಈ ಹೋಟೆಲ್‌ನ ಮೈಸೂರು ಪಾಕನ್ನು ಮಧ್ಯ ರಾತ್ರಿ ನೆನಪಿಸಿಕೊಂಡರೂ ನಾಲಿಗೆಯೆ ಮೇಲೆ ನೀರು ಹಾಜರಾಗಿಬಿಡುವುದು. 

ನಿಜವಾಗಲೂ ತುಪ್ಪ ಹಾಕ್ತಾರಾ?
 ಈ ಡೌಟೇ ಬೇಡ.  ಮೈಸೂರ್‌ ಪಾಕ್‌ ತುಂಬಿಕೊಟ್ಟಿದ್ದ ಡಬ್ಬಿಯನ್ನು ಮಾರನೆ ದಿನ ತೆರೆದುನೋಡಿ.  ಪಾಕ್‌ನ ಪೀಸುಗಳ ಕೆಳಗೆ ಕೆರೆಯಂತೆ ನಿಂತಿರುತ್ತದೆ ತುಪ್ಪ.  ಹಾಗೇ ಇನ್ನೊಂದು ಗಮನಿಸಿ, ಈ ಮೈಸೂರ್‌ ಪಾಕ್‌ ಹೇಮಮಾಲಿನಿ  ಕೆನ್ನೆ ರೀತಿ ಇರೋಲ್ಲ. ಕಾರಣ-ಇದಕ್ಕೆ ಮೈದಾ ಹಿಟ್ಟು ಬೆರೆಸೋದು ಇರಲಿ, ಸೋಕಿಸುವುದೂ ಇಲ್ಲ. ಇಂತಿಪ್ಪ ಮೈಸೂರ್‌ಪಾಕನ್ನು ಒಂದು ಸಲ ತಿಂದರೆ ಮುಗೀತು.  ಮನಸ್ಸು ಪದೇ ಪದೇ ಮಕ್ಕಳು ಜಾತ್ರೆಯಲ್ಲಿ ಪೀಪಿಗೆ ಹಠಮಾಡುವ ಗಲಾಟೆ ಮಾಡುತ್ತದೆ. 

Advertisement

 ರುಚಿಯ ಗುಟ್ಟೇನು?
ಹೀಗಂತ ಮಾಲೀಕ ತ್ರಯರಲ್ಲಿ ಒಬ್ಬರಾದ ರಾಘವೇಂದ್ರರಾವ್‌ರನ್ನು ಕೇಳಿದಾಗ-“ನಮ್ಮ ತಾತನ ಕಾಲದಿಂದಲೇ ಇದೇ ರುಚಿ. ಈಗಲೂ ಹಾಗೇ ಮಾಡ್ತಾ ಇದ್ದೀವಿ. ಬರೀ ಬ್ಯೂಸಿನೆಸ್‌ ಅಂತ ನೋಡಿದರೆ ರುಚಿಕಡೆ ಗಮನ ಇರೋಲ್ಲ. ಅದಕ್ಕೇ ನಮ್ಮ ಮುತ್ತಾತನ ಕಾಲದ ರುಚಿಯನ್ನು ಹಿಡಿದಿಟ್ಟುಕೊಂಡಿದ್ದೀವಿ. ಕಾಲ ಬದಲಾದರೂ ಗುಣಮಟ್ಟದಲ್ಲಿ ರಾಜಿ ಆಗಿಲ್ಲ’ ಅಂದರು.  ಈ ಹೋಟೆಲ್‌ನ ವಯಸ್ಸು ನೂರು ( ಆರಂಭವಾಗಿದ್ದು 1910ರಲ್ಲಿ) ವರ್ಷದಾಟಿದೆ. ಮಿಠಾಯಿ ರಾಮಕೃಷ್ಣಪ್ಪ ಅನ್ನೋರು ಮೊದಲು ಪ್ರಾರಂಭಿಸಿದ್ದು.  ಅವರು ಪೊಲೀಸ್‌ ಇಲಾಖೆಯಲ್ಲಿ ಕೆಲಸ ಮಾಡುತ್ತಲೇ ಮೈಸೂರ್‌ ಪಾಕ್‌ ತಯಾರಿಸುತ್ತಿದ್ದರು. ಆಗ ವಡಿಗೇನಹಳ್ಳಿಯ (ಈಗ ಅದು ವಿಜಯಪುರ)ಪಕ್ಕ ವೆಂಕಟಾಪುರದ ಬಳಿ ಮಿಲಿಟರಿ ಸೇನೆ ಇತ್ತಂತೆ.  ಅವರೆಲ್ಲರ ನಾಲಿಗೆಯನ್ನು ಸಿಹಿ ಮಾಡಿ, ರುಚಿಯ ಕಿಚ್ಚು ಹಚ್ಚಿದ್ದು ಇದೇ ರಾಮಕೃಷ್ಣಪ್ಪ.  ಸೇನೆ ಯುದ್ಧದಲ್ಲಿ ಸೋಲುತ್ತಿತ್ತೋ ಇಲ್ಲವೋ, ಆದರೆ ಸೇನಾಧಿಕಾರಿಗಳಂತೂ ರಾಮಕೃಷ್ಣಪ್ಪರ ಮೈಸೂರು ಪಾಕ್‌, ಅವಲಕ್ಕಿಯ ರುಚಿಗೆ ಶರಣಾಗಿ ಪದೇ ಪದೆ ಬಂದು ತಿಂದು ಹೋಗುತ್ತಿದ್ದರಂತೆ.  ಆಮೇಲಾಮೇಲೆ ಕಲಾಪಕ್ಕೆಂದು ಚಿಕ್ಕಬಳ್ಳಾಪುರದಿಂದ ಕೋಲಾರಕ್ಕೆ ಹೋಗುತ್ತಿದ್ದ ವಕೀಲರು, ಗುಂಡಪ್ಪ ಹೋಟೆಲ್‌ನ ಮಸಾಲೆ ದೋಸೆ ಜೊತೆಗೆ ಮೈಸೂರು ಪಾಕಲ್ಲಿ ನಾಲಿಗೆ ಅದ್ದಿ ಹೋಗುವುದು ರೂಢಿಯಾಯಿತು. ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆಗಳ ಮೂಗಿಗೆಲ್ಲಾ ಮೈಸೂರ್‌ಪಾಕ್‌ನ ಪರಿಮಳ ಹರಡುತ್ತಾ ಹೋಯಿತು. ರಾಮಕೃಷ್ಣಪ್ಪನವರ ನಂತರ, ಮಿಠಾಯಿ ಸೂರ್ಯನಾರಾಯಣರಾವ್‌, ಮಿಠಾಯಿ ಅಶ್ವತ್ಥ್ನಾರಾಯಣರಾವ್‌ ಈ ಹೋಟ್‌ಲ್‌ ಅನ್ನು ಮುಂದುವರಿಸಿಕೊಂಡು ಬಂದರು. ಈಗ ಅವರ ಮಗ ರಾಘವೇಂದ್ರರಾವ್‌,  ಚಿಕ್ಕಪ್ಪ ಮಂಜನಾಥ್‌, ರವಿಕುಮಾರ್‌ ಕೈ ಸೇರಿದೆ.  ಸುತ್ತಮುತ್ತಲಿನ ಊರಿಗಳಿಗೆಲ್ಲಾ ಹಿಹಿರಿಯ ಹೋಟೆಲ್‌ ಅಂದರೆ ಇದೇ.  ಒಂದರ್ಥದಲ್ಲಿ ಇಡೀ ತಾಲೂಕಿನ ನಾಲಿಗೆಗೆ ಮೈಸೂರು ಪಾಕ್‌ ಸಿಹಿಯನ್ನು ಮೆತ್ತಿದವರೇ ಈ ಮಿಠಾಯಿ ಸೂರ್ಯನಾರಾಯಣರಾವ್‌ ಕುಟುಂಬದವರು. 

 ಈ ಸ್ವೀಟ್‌ಸ್ಟಾಲ್‌ಗೆ ಬಂದು ಬರೀ ಮೈಸೂರ್‌ ಪಾಕ್‌ ಸವಿದರೆ ಸಾಲದು. ಇಲ್ಲಿ ಸಿಗುವ ಗೋಡಂಬಿ ಸಹಿತ ತುಪ್ಪದ ಅವಲಕ್ಕಿಯ ಸ್ವಾದ ತಿಂದವನೇ ಬಲ್ಲ. ಓಂಪುಡಿ, ಖಾರಾಬೂಂದಿ, ಬೆಣ್ಣೆ ಮುರುಕು ಹಾಗೇನೇ ಬೆಲ್ಲದ ಟಂಗಮ ಮರೆಯದೆ ತಿನ್ನಲೇಬೇಕಾದ ಖಾದ್ಯಗಳು.  “ನಮ್ಮ ಮೈಸೂರ್‌ಪಾಕ್‌ ರುಚಿ ಯಡಿಯೂರಪ್ಪರಿಂದ ಮೋದಿ ವರೆವಿಗೂ, ದೇಶದಿಂದ ವಿದೇಶಕ್ಕೂ ಹಾರಿದೆ. ಮೊನ್ನೆ ತಾನೇ ಜಪಾನ್‌ನಿಂದ ಹೀರಾ ಎಂಬಾಕೆ ಬಂದಿದ್ದರು. ಮೈಸೂರ್‌ ಪಾಕ್‌ ರುಚಿಗೆ ಮಾರುಹೋಗಿ, ನಾಲ್ಕೈದು ಕೆ.ಜಿ ಮೈಸೂರ್‌ಪಾಕ್‌ ತಗೊಂಡು ಹೋಗಿದ್ದಾರೆ ಅಂತ ನೆನಪು ಚಪ್ಪರಿಸಿಕೊಳ್ಳುತ್ತಾರೆ ಮಂಜುನಾಥ್‌.  ಸಂಜೆಯಾದರೆ ಚಕ್ಕೆ ಮಗ್ಗು ಸೇರಿಸಿ ತಯಾರಿಸಿದ ಬಿಸಿ ಬಿಸಿ ಆಲೂಗಡ್ಡೆ, ಈರುಳ್ಳಿ ಬೋಂಡ ತಿನ್ನದೇ ಇದ್ದರೆ ನಿಮ್ಮ ನಾಲಿಗೆ ಪಾವನವಾಗದು.  ಬೋಂಡದ ಜೊತೆ ಸಂಜೆಯ ಚಳಿ ಇದ್ದರೆ ನಿಮಗದು ಬೋನಸ್ಸೇ.  ಎಲ್ಲ ತಿಂಡಿಗಳೂ ಕ್ಷಣಾರ್ಧದಲ್ಲಿ ಖಾಲಿಯಾಗುವುದೇ ಇಲ್ಲಿನ ರುಚಿಯ ದ್ಯೋತಕ. 

ಮತ್ತೂಂದು ವಿಶೇಷ ಹೇಳಲೇಬೇಕು. ಮಿಠಾಯಿ ಸೂರ್ಯನಾರಾಯಣ ರಾವ್‌ ಹೋಟೆಲ್‌ನ ತಿನಿಸುಗಳು ಬೇಗ ಹಾಳಾಗುತ್ತವೆ ಅನ್ನೋ ತಲೆಬೇನೆ ಬೇಡ.  ಮೈಸೂರ್‌ಪಾಕ್‌ 20ದಿನ ಇಟ್ಟರೂ ಕೆಡುವುದಿಲ್ಲ, ಮಿಕ್ಚರ್‌, ಅವಲಕ್ಕಿಗಳನ್ನು ವಾರಗಟ್ಟಲೆ ಇಟ್ಟುಕೊಂಡು ಸವಿಯಬಹುದು.  ಹೀಗಾಗಿ, ಒಂದು ಸಲ ಇಲ್ಲಿನ ತಿನಿಸುಗಳನ್ನು ಸವಿದರೆ, ಆ ರುಚಿ ಮತ್ತೆ ಮತ್ತೆ ಹಳೆ ಗೆಳತಿಯ ನೆನಪಿನಂತೆ ನಿಮ್ಮನ್ನು ಕಾಡದೆ ಬಿಡುವುದಿಲ್ಲ !

ಕಟ್ಟೆ ಗುರುರಾಜ್‌

Advertisement

Udayavani is now on Telegram. Click here to join our channel and stay updated with the latest news.

Next