Advertisement

ಮುಂಗಡ ದರಕ್ಕೆ ಒಪ್ಪದ ಬನ್ನಾರಿ ಕಾರ್ಖಾನೆ

12:11 PM Oct 11, 2017 | Team Udayavani |

ಮೈಸೂರು: ಕಬ್ಬು ಬೆಳೆಗಾರರಿಗೆ ಸ್ವಯಂಪ್ರೇರಣೆಯಿಂದ ಮುಂಗಡ ದರ ನೀಡಬೇಕು, ಈ ಸಂಬಂಧ ಮೂರು ದಿನಗಳೊಳಗೆ ಆಡಳಿತ ಮಂಡಳಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳಬೇಕು. ಕಾರ್ಖಾನೆ ವ್ಯಾಪ್ತಿಯನ್ನು ಮೀರಿ ಹೊರ ಜಿಲ್ಲೆಯ ಕಬ್ಬನ್ನು ತಂದು ಅರೆಯಬಾರದು ಎಂದು ಜಿಲ್ಲಾಧಿಕಾರಿ ಡಿ. ರಂದೀಪ್‌ ಬನ್ನಾರಿ ಅಮ್ಮನ್‌ ಸಕ್ಕರೆ ಕಾರ್ಖಾನೆ ಆಡಳಿತ ವರ್ಗಕ್ಕೆ ಸೂಚಿಸಿದರು.

Advertisement

ರೈತರ ದೂರಿನ ಹಿನ್ನೆಲೆಯಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರೈತ ಪ್ರತಿನಿಧಿಗಳು ಹಾಗೂ ಸಕ್ಕರೆ ಕಾರ್ಖಾನೆ ಅಧಿಕಾರಿಗಳ ಸಭೆ ನಡೆಸಿದರು. ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ಮಾತನಾಡಿ, ಬನ್ನಾರಿ ಅಮ್ಮನ್‌ ಸಕ್ಕರೆ ಕಾರ್ಖಾನೆ ಕಬ್ಬು ಅರೆಯಲು ಆರಂಭಿಸಿ ಎರಡು ತಿಂಗಳಾಗಿದೆ,

ಆದರೂ ಇನ್ನೂ ಕಬ್ಬು ದರ ನಿಗದಿಯಾಗಿಲ್ಲ. ಬೆಳಗಾವಿ ಜಿಲ್ಲೆಯ ಬಹುತೇಕ ಸಕ್ಕರೆ ಕಾರ್ಖಾನೆಗಳು ಸ್ವಯಂಪ್ರೇರಣೆಯಿಂದ ಕಬ್ಬಿಗೆ ಮುಂಗಡ ದರ ನೀಡಿರುವಂತೆ ಇಲ್ಲಿಯೂ ನೀಡಬೇಕು. ಜತೆಗೆ ಬೆಳಗಾವಿ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಶೇ.11 ಸಕ್ಕರೆ ಇಳುವರಿಗೆ ಪ್ರತಿ ಟನ್‌ ಕಬ್ಬಿಗೆ 3600 ರೂ. ದರ ನೀಡುತ್ತಿವೆ, ಬನ್ನಾರಿ ಸಕ್ಕರೆ ಕಾರ್ಖಾನೆಯವರು ಶೇ.10 ಇಳುವರಿಗೆ 3300 ರೂ. ನೀಡಲಿ ಎಂದು ಒತ್ತಾಯಿಸಿದರು.

ಇಳುವರಿ ಕಡಿಮೆ: ಇದಕ್ಕೆ ಪ್ರತಿಕ್ರಿಯಿಸಿದ ಬನ್ನಾರಿ ಸಕ್ಕರೆ ಕಾರ್ಖಾನೆಯ ಪ್ರಧಾನ ವ್ಯವಸ್ಥಾಪಕ ವೇಲುಸ್ವಾಮಿ, ಕಾರ್ಖಾನೆಯಲ್ಲಿ ಪ್ರತಿ ಟನ್‌ ಕಬ್ಬಿಗೆ 8.85 ಇಳುವರಿ ಬರುತ್ತಿದೆ, ಹೀಗಾಗಿ ಹೆಚ್ಚಿನ ದರ ನೀಡಲು ಸಾಧ್ಯವಿಲ್ಲ ಎಂದು ಜಿಲ್ಲಾಧಿಕಾರಿಯವರಿಗೆ ತಿಳಿಸಿದರು.

ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ರೈತ ಮುಖಂಡರು, 2003ರಲ್ಲಿ ಭೀಕರ ಬರದ ಸಂದರ್ಭದಲ್ಲೂ 10.5 ರಿಂದ 11ರಷ್ಟು ಇಳುವರಿ ಬಂದಿತ್ತು. ಆದರೆ, ಸರ್ಕಾರ ಸಕ್ಕರೆ ಇಳುವರಿ ಆಧಾರದ ಮೇಲೆ ರೈತರಿಗೆ ದರ ಪಾವತಿ ಮಾಡಿ ಅಂದಾಗ ಇಳುವರಿ ಕಡಿಮೆ ತೋರಿಸುತ್ತಿದ್ದಾರೆ. ಆಲೆಮನೆಗಳಲ್ಲಿ ಹೆಚ್ಚಿನ ಇಳುವರಿ ಬರುವಾಗ ಸಕ್ಕರೆ ಕಾರ್ಖಾನೆಯಲ್ಲೇಕೆ ಇಳುವರಿ ಕಡಿಮೆಯಾಗುತ್ತದೆ ಎಂದು ಪ್ರಶ್ನಿಸಿದರು.

Advertisement

ತಜ್ಞರ ಸಮಿತಿ: ಮೈಸೂರು ಜಿಲ್ಲೆಯಲ್ಲಿ ಕಬ್ಬು ಕಡಿಮೆಯಾಗಿದೆ. ಬನ್ನಾರಿ ಕಾರ್ಖಾನೆಯವರು ಶೇ.75ರಷ್ಟು ಹೊರ ಜಿಲ್ಲೆಗಳಿಂದ ಕಬ್ಬು ತಂದು ಅರೆಯುತ್ತಿದ್ದಾರೆ. ಇಳುವರಿಯನ್ನೂ ಅವರೇ ನಿಗದಿಮಾಡುತ್ತಾ ಕಬ್ಬು ಬೆಳೆಗಾರರನ್ನು ಬಲಿಪಶು ಮಾಡುತ್ತಿದ್ದಾರೆ. ಇಳುವರಿ ಪರಿಶೀಲನೆಗೆ ತಜ್ಞರ ಸಮಿತಿ ರಚನೆ ಮಾಡುವಂತೆ ಕುರುಬೂರು ಶಾಂತಕುಮಾರ್‌ ಒತ್ತಾಯಿಸಿದರು.

ವ್ಯವಸ್ಥಾಪಕ ಕೇಂದ್ರ ಸರ್ಕಾರದ ಆದೇಶದಂತೆ ಪ್ರಸ್ತುತ 9.5 ಇಳುವರಿಗೆ ಪ್ರತಿ ಟನ್‌ ಕಬ್ಬಿಗೆ 2550 ರೂ. ನೀಡಲಾಗುತ್ತಿದೆ. ಕಳೆದ ವರ್ಷ ಎಫ್ಆರ್‌ಪಿ ದರ 2365 ರೂ. ನೀಡಿದ್ದೇವೆ. ಜತೆಗೆ ಸಕ್ಕರೆ ಸಚಿವರ ಸೂಚನೆ ಮೇರೆಗೆ ಪ್ರತಿ ಟನ್‌ಗೆ 200 ರೂ. ಹೆಚ್ಚುವರಿ ಹಣ ನೀಡಿದ್ದೇವೆ ಎಂದರು.

ಆಕ್ರೋಶ: ಕಾರ್ಖಾನೆಯವರ ವಾದವನ್ನು ಒಪ್ಪದ ರೈತ ಮುಖಂಡರು ನಾಳೆಯಿಂದ ನಾವು ಕಬ್ಬು ಕಟಾವು ಮಾಡಲ್ಲ, ಕಾರ್ಖಾನೆ ಹೇಗೆ ನಡೆಸುತ್ತಾರೋ ನೋಡೋಣ? ಬನ್ನಾರಿ ಅಮ್ಮನ್‌ ಸಕ್ಕರೆ ಕಾರ್ಖಾನೆಯವರು ಈಸ್ಟ್‌ ಇಂಡಿಯಾ ಕಂಪನಿಯವರಂತೆ ರೈತರನ್ನು ಒಡೆದು ಆಳುತ್ತಿದ್ದಾರೆ. ಕಾರ್ಖಾನೆ ವ್ಯಾಪ್ತಿಯ ಹೊರಗಿನಿಂದ ಕಬ್ಬು ಬಾರದಂತೆ ನಾಳೆಯಿಂದ ತಡೆಯುತ್ತೇವೆ, ಇವರಿಂದ ಹೇಗೆ ವಸೂಲು ಮಾಡಬೇಕು ನಮಗೆ ಗೊತ್ತಿದೆ. ಕಾನೂನು-ಸುವ್ಯವಸ್ಥೆ ಹಾಳಾದರೆ ಕಾರ್ಖಾನೆಯವರೇ ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಮಿತಿ ರಚನೆ: ಮಧ್ಯಪ್ರವೇಶಿಸಿದ ಜಿಲ್ಲಾಧಿಕಾರಿ, ಸಕ್ಕರೆ ಇಳುವರಿ ಪರಿಶೀಲನೆಗಾಗಿ ಆಹಾರ ಇಲಾಖೆ ಉಪ ನಿರ್ದೇಶಕರು, ಕೃಷಿ ಇಲಾಖೆ ಜಂಟಿ ನಿರ್ದೇಶಕರು, ರೈತ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿ ರಚಿಸಲಾಗುವುದು, ಈ ಸಮಿತಿ ಕಳೆದ ವರ್ಷದ ಉಪ ಉತ್ಪನ್ನಗಳ ಲಾಭಾಂಶವನ್ನೂ ಪರಿಶೀಲಿಸಲಿದೆ. ಜತೆಗೆ ಇಳುವರಿ ಪರಿಶೀಲನೆ ಸಂಬಂಧ ಸರ್ಕಾರಕ್ಕೂ ಪತ್ರ ಬರೆಯಲಾಗುವುದು. ಮುಖ್ಯಮಂತ್ರಿಗಳ ಗಮನಕ್ಕೂ ತರಲಾಗುವುದು ಎಂದರು.

ಆಹಾರ ಇಲಾಖೆ ಉಪ ನಿರ್ದೇಶಕ ಡಾ.ಕಾ.ರಾಮೇಶ್ವರಪ್ಪ, ಜಂಟಿ ಕೃಷಿ ನಿರ್ದೇಶಕ ಸೋಮಸುಂದ್ರು, ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್‌, ರೈತಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್‌, ಪ್ರಧಾನ ಕಾರ್ಯದರ್ಶಿ ಹೊಟಕೋಟೆ ಬಸವರಾಜು ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next