ರಾಮನಗರ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಶಕ್ತಿ ಗ್ಯಾರಂಟಿ ಅನುಷ್ಠಾನ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕರು ಹಾಗೂ ಸಂಸದರ ಭಾವಚಿತ್ರ ಹಾಕಿಲ್ಲ ಎಂದು ಸ್ಥಳೀಯ ಕಾಂಗ್ರೆಸ್ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ ಘಟನೆ, ರಾಮನಗರ ಬಸ್ ನಿಲ್ದಾಣದಲ್ಲಿ ಭಾನುವಾರ ನಡೆದಿದೆ.
ಜಿಲ್ಲಾಮಟ್ಟದ ಶಕ್ತಿ ಗ್ಯಾರಂಟಿಗೆ ಚಾಲನೆ ನೀಡುವ ಕಾರ್ಯಕ್ರಮವನ್ನು ಜಿಲ್ಲಾ ಕೇಂದ್ರ ಬಸ್ ನಿಲ್ದಾಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ವೇದಿಕೆಯಲ್ಲಿ ಅಳವಡಿಸಿದ್ದ ಬ್ಯಾನರ್ ನಲ್ಲಿ ಸಿಎಂ, ಡಿಸಿಎಂ ಮತ್ತು ಸಾರಿಗೆ ಸಚಿವರ ಪೊಟೋಗಳನ್ನು ಮಾತ್ರ ಅಳವಡಿಸಲಾಗಿತ್ತು. ಸ್ಥಳೀಯ ಶಾಸಕರು ಮತ್ತು ಸಂಸದರ ಭಾವಚಿತ್ರ ಹಾಕಿಲ್ಲ ಎಂದುಕಾಂಗ್ರೆಸ್ ಮುಖಂಡರಾದ ಮಾಜಿ ಶಾಸಕ ಕೆ.ರಾಜು, ಕಾಂಗ್ರೆಸ್ ಮುಖಂಡರಾದ ಕೆ.ರಮೇಶ್, ವಿ.ಎಚ್.ರಾಜು, ಅನಿಲ್ ಜೋಗಿಂದರ್, ಪುಟ್ಟರಾಜು, ಶಿಶಳವಲಿಂಗಯ್ಯ, ಶಿವಶಂಕರ್, ಪಾರ್ವತಮ್ಮ, ಜಯಮ್ಮ, ಉಮಾಶಂಕರ್, ಬಸವನಪುರ ನರಸಿಂಹ ಮೂರ್ತಿ, ರೈತ ಸಂಘದ ತುಂಬೇನಹಳ್ಳಿ ಶಿವಕುಮಾರ್ ಮತ್ತಿತರರು ಅಧಿಕಾರಿಗಳಿಗೆ ತರಾಟೆ ತೆಗೆದು ಕೊಂಡರು. ಭಾವಚಿತ್ರ ಇರುವ ಬ್ಯಾನರ್ ಹಾಕಿ ಕಾರ್ಯಕ್ರಮ ನಡೆಸುವಂತೆ ಪಟ್ಟು ಹಿಡಿದರು.
ಬ್ಯಾನರ್ ಬದಲಾವಣೆ: ಕಾಂಗ್ರೆಸ್ ಮುಖಂಡರ ಗದ್ದಲದಿಂದಾಗಿ ಬ್ಯಾನರ್ ಬದಲಾಯಿಸಿ ಸಂಸದರು ಮತ್ತು ಜಿಲ್ಲೆಯ ನಾಲ್ಕು ಜನ ಶಾಸಕರ ಭಾವಚಿತ್ರವಿರುವ ಬ್ಯಾನರ್ ಅಳವಡಿಸಿ ಕಾರ್ಯಕ್ರಮ ತಡವಾಗಿ ಆರಂಭಿಸಲಾಯಿತು.