Advertisement

ಹೆಬ್ಬಾಳಕರ ಕುಟುಂಬ ರಾಜಕಾರಣದ ವಿರುದ್ಧ ಬ್ಯಾನರ್‌: ಮುಗಿಬಿದ್ದ ಕಾಂಗ್ರೆಸ್‌

06:08 PM Mar 15, 2024 | Team Udayavani |

ಉದಯವಾಣಿ ಸಮಾಚಾರ
ಬೆಳಗಾವಿ: ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಬೆಳಗಾವಿಯಲ್ಲಿ ಕುಟುಂಬ ರಾಜಕಾರಣ ಯುದ್ಧ ಶುರುವಾಗಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್‌ ಮಧ್ಯೆ ಕುಟುಂಬ ರಾಜಕಾರಣ ವಾಕ್ಸಮರ ಜೋರಾಗಿದೆ.

Advertisement

ಬೆಳಗಾವಿ ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ನಿಂದ ಮೃಣಾಲ್‌ ಹೆಬ್ಬಾಳಕರ್‌ ಗೆ ಟಿಕೆಟ್‌ ನೀಡಲು ತಯಾರಿ ಶುರುವಾದ
ಬೆನ್ನಲ್ಲೇ ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಲ ಅಧ್ಯಕ್ಷ ಧನಂಜಯ ಜಾಧವ ಅವರು ಹೆಬ್ಟಾಳಕರ ಕುಟುಂಬ
ರಾಜಕಾರಣದ ವಿರುದ್ಧ ಹರಿಹಾಯ್ದ ಬ್ಯಾನರ್‌ ಅಳವಡಿಸಿದ್ದಾರೆ.

ಲಕ್ಷ್ಮೀ ಹೆಬ್ಬಾಳಕರ ಸಚಿವರಾದರೆ, ಸಹೋದರ ಚನ್ನರಾಜ ಹಟ್ಟಿಹೊಳಿ ವಿಧಾನ ಪರಿಷತ್‌ ಸದಸ್ಯರಾಗಿದ್ದಾರೆ. ಈಗ ಅವರ ಮಗ ಮೃಣಾಲ್‌ ಸಂಸದರಾಗಬೇಕೆಂದರೆ ಉಳಿದ ಕಾಂಗ್ರೆಸ್‌ ಕಾರ್ಯಕರ್ತರು ಭಜನೆ ಮಾಡಬೇಕಾ ಎಂದು ಪ್ರಶ್ನಿಸುವ ಬ್ಯಾನರ್‌ ಧನಂಜಯ ಜಾಧವ ಅಳವಡಿಸಿದ್ದು ಕಾಂಗ್ರೆಸ್‌ನ ಕೆಂಗಣ್ಣಿಗೆ ಗುರಿಯಾಗಿದೆ.

ಈ ಬಗ್ಗೆ ತೀಕ್ಷಣವಾಗಿ ಪ್ರತಿಕ್ರಿಯಿಸಿರುವ ತಾಪಂ ಮಾಜಿ ಅಧ್ಯಕ್ಷ, ಕಾಂಗ್ರೆಸ್‌ ಮುಖಂಡ ಶಂಕರಗೌಡ ಪಾಟೀಲ, ಬಿಜೆಪಿಯವರು
ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವುದೆಂದರೆ ಭೂತದ ಬಾಯಲ್ಲಿ ಭಗವದ್ಗೀತೆ ಉಲಿದಂತೆ.

ಹಳ್ಳಿಯಿಂದ ದಿಲ್ಲಿವರೆಗೂ ಕುಟುಂಬ ರಾಜಕಾರಣವನ್ನೇ ಮಾಡಿಕೊಂಡು ಬರುತ್ತಿರುವ ಬಿಜೆಪಿಯವರಿಗೆ ಈ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ. ಯಡಿಯೂರಪ್ಪ, ಈಶ್ವರಪ್ಪ, ಬೊಮ್ಮಾಯಿ, ಉದಾಸಿ, ಸಿ.ಎಂ. ಸಿದ್ದೇಶ್ವರ, ಕತ್ತಿ, ಜಾರಕಿಹೊಳಿ, ಜೊಲ್ಲೆ ಅವರದ್ದು ಕುಟುಂಬ ರಾಜಕಾರಣವಲ್ಲವೇ? ಕುಟುಂಬ ರಾಜಕಾರಣವನ್ನೇ ಹೊದ್ದು ಮಲಗಿರುವ ಜೆಡಿಎಸ್‌ ಜತೆ ಚುನಾವಣೆ
ಎದುರಿಸುತ್ತಿರುವ ಬಿಜೆಪಿಯವರು ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುತ್ತಿದ್ದಾರೆ. ಕೇವಲ ಅಪ್ಪ, ಅಮ್ಮ, ಅಣ್ಣನ ಹೆಸರಲ್ಲಿ, ಕುಟುಂಬದವರ ಹೆಸರಿನ ಮೇಲೆ ಬೇರೆ ಬೇರೆ ಹುದ್ದೆಗಳನ್ನು ಪಡೆಯುವ ಸಾವಿರಾರು ಉದಾಹರಣೆಗಳು ಬಿಜೆಪಿಯ ರಾಷ್ಟ್ರ ರಾಜಕಾರಣದಲ್ಲಿರುವಾಗ ಇಂತಹ ಬ್ಯಾನರ್‌, ಫ್ಲೆಕ್ಸ್‌ ಅಳವಡಿಸಿ ಬಿಜೆಪಿ ಅಪಹಾಸ್ಯಕ್ಕೀಡಾಗುತ್ತಿದೆ ಎಂದು
ವ್ಯಂಗ್ಯವಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next