Advertisement

Crackers;ನಿಷೇಧಿತ ಕೆಂಪು ಪಟಾಕಿ ಮೇಲೆ ಖಾಕಿ ಕೆಂಗಣ್ಣು: ಆನ್‌ಲೈನ್‌ನಲ್ಲಿ ಮಾರಿದರೂ ಕೇಸ್‌

11:02 PM Oct 21, 2024 | Team Udayavani |

ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿ ಹಬ್ಬಕ್ಕೆ ಇನ್ನೇನು ದಿನಗಣನೆ ಬಾಕಿ ಉಳಿದಿದೆ ಎನ್ನುವಾಗಲೇ ಮಾರುಕಟ್ಟೆಗಳಲ್ಲಿ ಪಟಾಕಿಗಳ ಖರೀದಿ ಭರಾಟೆ ಶುರುವಾಗಿದೆ. ರಾಜ್ಯ ಸರಕಾರದ ಆದೇಶ ಹಾಗೂ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ನಿರ್ದೇಶನದನ್ವಯ ರಾಜ್ಯ ಪೊಲೀಸರು ಹಸುರು ಪಟಾಕಿ ಹೊರತುಪಡಿಸಿ ನಿಷೇಧಿತ ಇತರ ಪಟಾಕಿಗಳ ಮಾರಾಟ, ಪೂರೈಕೆ ಮೇಲೆ ರಾಜ್ಯದೆಲ್ಲೆಡೆ ನಿಗಾ ಇರಿಸಿದ್ದಾರೆ.

Advertisement

ಕರ್ನಾಟಕದಲ್ಲಿ ದೊಡ್ಡ ಪ್ರಮಾಣದಲ್ಲಿ ಪಟಾಕಿ ವಹಿವಾಟು ನಡೆಸಲು ವ್ಯಾಪಾರಿಗಳು ಸಜ್ಜಾಗಿದ್ದಾರೆ. ಆನ್‌ಲೈನ್‌ನಲ್ಲಿ ಪಟಾಕಿ ವ್ಯಾಪಾರವೂ ಜೋರಾಗಿವೆ. ಪರಿಸರ ಸ್ನೇಹಿ ಹಸುರು ಪಟಾಕಿ ಮಾತ್ರ ಬಳಸುವಂತೆ ರಾಜ್ಯ ಸರಕಾರವು ಸಾಕಷ್ಟು ಅರಿವು ಮೂಡಿಸುತ್ತಿದ್ದರೂ, ಕೆಂಪು ಪಟಾಕಿಗಳು ಈಗಾಗಲೇ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಇದೀಗ ಪರಿಸರಕ್ಕೆ ಹಾನಿಯುಂಟು ಮಾಡುವ ಪಟಾಕಿ ವ್ಯವಹಾರ, ಮಾರಾಟ, ಖರೀದಿ ಬಗ್ಗೆ ನಿಗಾ ಇಡಲು ಖಾಕಿ ಸಜ್ಜಾಗಿದೆ. ಹೊರ ರಾಜ್ಯಗಳಿಂದ ರಾಜ್ಯಕ್ಕೆ ಪೂರೈಕೆಯಾಗುವ ಪಟಾಕಿಗಳನ್ನು ಕರ್ನಾಟಕದ ಗಡಿ ಪ್ರದೇಶಗಳಲ್ಲಿ ಕೂಲಂಕಷವಾಗಿ ಪರಿಶೀಲನೆ ನಡೆಸಲಾಗುತ್ತಿದೆ. ಹೊರ ರಾಜ್ಯಗಳಿಂದ ರಾಜ್ಯಕ್ಕೆ ಪಟಾಕಿ ಸರಬರಾಜು ಮಾಡುವವರ ವಿರುದ್ಧ ಪೊಲೀಸರು ಇನ್ನಷ್ಟು ಬಿಗಿಯಾಗಿ ಕಣ್ಗಾವಲು ಇರಿಸಲು ಕ್ರಮ ಕೈಗೊಂಡಿದ್ದಾರೆ.

ಕರ್ನಾಟಕದಲ್ಲೇಕಿಲ್ಲ ಪಟಾಕಿ ಉತ್ಪಾದನೆ?
ಹಸುರು ಪಟಾಕಿ ಹೊರತುಪಡಿಸಿ ಇತರ ಪಟಾಕಿಗಳ ಮಾರಾಟ ಮಾಡುವ ಬಗ್ಗೆ ಕೆಎಸ್‌ಪಿಸಿಬಿ ಮೇಲ್ವಿಚಾರಣೆ ಮಾಡುತ್ತಿದೆ. ಪಟಾಕಿ ಉತ್ಪಾದನೆ ಮಾಡುವ ಘಟಕ ಇದ್ದರೆ ಮಾತ್ರ ಅಂತಹ ಕಡೆಗಳಿಗೆ ದಾಳಿ ನಡೆಸಿ ಅವುಗಳನ್ನು ಜಪ್ತಿ ಮಾಡಲು ಕೆಎಸ್‌ಪಿಸಿಬಿಗೆ ಅವಕಾಶಗಳಿವೆ. ಆದರೆ ಕರ್ನಾಟಕದಲ್ಲಿ ಪಟಾಕಿ ಉತ್ಪಾದನ ಘಟಕಗಳಿಲ್ಲ. ಇಲ್ಲಿನ ವಾತಾವರಣದಲ್ಲಿ ತೇವಾಂಶ ಅಧಿಕವಾಗಿರುವ ಹಿನ್ನೆಲೆಯಲ್ಲಿ ಪಟಾಕಿ ಉತ್ಪಾದನೆಗೆ ಕರ್ನಾಟಕ ಸೂಕ್ತವಾಗಿಲ್ಲ. ಇಲ್ಲಿ ಪಟಾಕಿ ಉತ್ಪಾದಿಸಿದರೂ ಅದು ಸಿಡಿಸಲು ಯೋಗ್ಯವಾಗಿರುವುದಿಲ್ಲ. ಈ ಎಲ್ಲ ಕಾರಣಗಳಿಂದ ಹೊರ ರಾಜ್ಯ ಪ್ರಮುಖವಾಗಿ ತಮಿಳುನಾಡಿನಿಂದ ಹೆಚ್ಚಾಗಿ ಕರ್ನಾಟಕಕ್ಕೆ ಪಟಾಕಿಗಳು ಬರುತ್ತಿವೆ.

ಆನ್‌ಲೈನ್‌ನಲ್ಲಿ ಮಾರಿದರೂ ಕ್ರಮ
ಮಾರುಕಟ್ಟೆಗಳಲ್ಲಿ ಕೆಂಪು ಪಟಾಕಿಗಳ ಮಾರಾಟ ಮಾಡುವವರು, ಪಟಾಕಿ ಸಿಡಿಸಿರುವವರ ವಿರುದ್ಧವೂ ಪೊಲೀಸ್‌ ಹದ್ದಿನ ಕಣ್ಣಿಟ್ಟಿದೆ. ಆದರೆ ಆನ್‌ಲೈನ್‌ನಲ್ಲಿ ವಿವಿಧ ಕಂಪೆನಿಗಳು ಕರ್ನಾಟಕದಲ್ಲಿ ನಿಷೇಧಿಸಲಾದ ಪಟಾಕಿಗಳನ್ನು ಮಾರಾಟ ಮಾಡುವ ಆರೋಪಗಳು ಕೇಳಿ ಬಂದಿವೆ. ಇದು ಅಪರಾಧವಾಗಿದ್ದು, ಸೈಬರ್‌ ಕ್ರೈಂ ಠಾಣೆ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಸಿದ್ಧತೆ ಮಾಡಿಕೊಂಡಿದ್ದಾರೆ. ಬೆಂಗಳೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಶಿವಮೊಗ್ಗ, ಬೆಳಗಾವಿ, ಬಳ್ಳಾರಿ, ರಾಯಚೂರು, ಉಡುಪಿ, ಮೈಸೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಪ್ರಮುಖ ನಗರಗಳಲ್ಲಿ ಪೊಲೀಸರ ಕಣ್ತಪ್ಪಿಸಿ ನಿಷೇಧಿತ ಕೆಂಪು ಪಟಾಕಿ ಮಾರಾಟ ಮಾಡಲು ವ್ಯಾಪಾರಿಗಳು ಮುಂದಾಗಿರುವ ಆರೋಪ ಕೇಳಿ ಬಂದಿದೆ.

ತಮಿಳುನಾಡಿನಿಂದ ಅತ್ಯಧಿಕ ಪಟಾಕಿ ರಾಜ್ಯಕ್ಕೆ ರವಾನೆ
ಪಟಾಕಿ ಎಂದರೆ ದೇಶದಲ್ಲೇ ಮೊದಲ ಹೆಸರು ಕೇಳಿಬರುವುದು ಕರ್ನಾಟಕದ ನೆರೆ ರಾಜ್ಯವಾಗಿರುವ ತಮಿಳುನಾಡು. ತಮಿಳುನಾಡಿನಿಂದ ಪ್ರತಿ ವರ್ಷದಂತೆ ಈ ವರ್ಷವೂ ಕರ್ನಾಟಕಕ್ಕೆ ದೊಡ್ಡ ಪ್ರಮಾಣದ ಪಟಾಕಿ ಬರುವ ಸಾಧ್ಯತೆಗಳಿವೆ. ತಮಿಳುನಾಡಿನ ಶಿವಕಾಶಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಅಕ್ರಮವಾಗಿ ನಿಷೇಧಿತ ಕೆಂಪು ಪಟಾಕಿ ತಯಾರಿಸಲಾಗಿವೆ ಎಂದು ತಿಳಿದು ಬಂದಿದೆ. ಇದೇ ಪಟಾಕಿಗಳು ರಿಯಾಯಿತಿ ದರದಲ್ಲಿ ರಾಜ್ಯಕ್ಕೆ ಕಾಲಿಡುವ ಸಾಧ್ಯತೆಗಳಿವೆ. ಏಕೆಂದರೆ ತಮಿಳುನಾಡಿನಿಂದ ಕರ್ನಾಟಕ, ಆಂಧ್ರ, ಕೇರಳಕ್ಕೆ ಹೆಚ್ಚಿನ ಸಾಗಣೆಕೆ ವೆಚ್ಚ ತಗಲುವುದಿಲ್ಲ. ಹೀಗಾಗಿ ಇಲ್ಲಿನ ಪಟಾಕಿಗಳು ನೆರೆ ರಾಜ್ಯಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಬರುತ್ತವೆ ಎನ್ನುತ್ತಾರೆ ಪರಿಸರ ತಜ್ಞರು.

Advertisement

ಹಸುರು ಪಟಾಕಿ ಖಾತ್ರಿ ಮಾಡಿಕೊಳ್ಳುವುದು ಹೇಗೆ?
ಗ್ರಾಹಕರು ತಾವು ಕೊಳ್ಳುವ ಪಟಾಕಿಗಳು ಹಸುರು ಪಟಾಕಿ ಹೌದೇ? ಇಲ್ಲವೇ? ಎಂಬುದನ್ನು ಖಾತರಿಪಡಿಸಿಕೊಳ್ಳಲು ಪಟಾಕಿ ಪ್ಯಾಕ್‌ನ ಮೇಲಿರುವ ಕ್ಯೂಆರ್‌ ಕೋಡ್‌ನ್ನು ಸ್ಕ್ಯಾನ್‌ ಮಾಡುವ ಮೂಲಕ ಅರಿತುಕೊಳ್ಳಬಹುದಾಗಿದೆ.

ದೀಪದಿಂದ ದೀಪ ಹಚ್ಚಿ ದೀಪಾವಳಿ ಆಚರಿಸಬೇಕೇ ಹೊರತು ಪಟಾಕಿ ಹಚ್ಚಿ ಅಲ್ಲ. ಪಟಾಕಿ ಹಚ್ಚಲೇ ಬೇಕು ಎಂದಾದರೆ ಹಸುರು ಪಟಾಕಿ ಮಾತ್ರ ಸಿಡಿಸಿ. 125 ಡೆಸಿಬಲ್‌ಗಿಂತ ಹೆಚ್ಚು ತೀವ್ರತೆಯ ಶಬ್ದ ಮಾಡುವ ಮತ್ತು ಹೆಚ್ಚು ಹೊಗೆ ಹೊರಹೊಮ್ಮುವ ರಾಸಾಯನಿಕಯುಕ್ತ ಪಟಾಕಿ ಸಿಡಿಸಬಾರದು. ನಿಷೇಧಿತ ಪಟಾಕಿ ಮಾರಾಟ ಮಾಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
-ಈಶ್ವರ ಖಂಡ್ರೆ, ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ

ಅವಿನಾಶ್‌ ಮೂಡಂಬಿಕಾನ

Advertisement

Udayavani is now on Telegram. Click here to join our channel and stay updated with the latest news.

Next