ನಂಜನಗೂಡು: ಬಣ್ಣಾರಿ ಅಮ್ಮನ್ ಶುಗರ್ ಕಾರ್ಖಾನೆಯಲ್ಲಿರುವ ದಿಸ್ಟಲರೀಸ್ ಘಟಕದಿಂದ ಬರುವ ವಿಷಾಯುಕ್ತ ಅನಿಲ ಹಾಗೂ ತ್ಯಾಜ್ಯದಿಂದ ಸುತ್ತಮುತ್ತಲಿನ ಗ್ರಾಮಗಳ ಪರಿಸರ ಹಾನಿಗೊಳಗಾಗಿದ್ದು, ಅದನ್ನು ತಪ್ಪಿಸುವಂತೆ ಒತ್ತಾಯಿಸಿ ತಾಲೂಕು ರೈತಸಂಘ ಹಸಿರುಸೇನೆ ನೂರಾರು ರೈತರು ಸ್ಥಳೀಯರ ನೆರವಿನಿಂದೊಂದಿಗೆ ಶುಕ್ರವಾರ ಪ್ರತಿಭಟನೆ ನಡೆಸಿದರು.
ತಾಲೂಕಿನ ಅಳಗಂಚಿ ಗ್ರಾಮದಲ್ಲಿರುವ ಬಣ್ಣಾರಿ ಅಮ್ಮನ್ ಶುಗರ್ ಕಾರ್ಖಾನೆ ಮುಖ್ಯದ್ವಾರದಲ್ಲೇ ಜಮಾಯಿಸಿದ ರೈತರು ಸುತ್ತಮುತ್ತಲಿನ ಗ್ರಾಮಸ್ಥರೊಟ್ಟಿಗೆ ಕಾರ್ಖಾನೆ ವಿರುದ್ಧ ದಿಕ್ಕಾರ ಘೋಷಣೆ ಮೊಳಗಿಸಿದರು. ರೈತ ಸಂಘದ ಅಧ್ಯಕ್ಷ ವಿದ್ಯಾಸಾಗರ್ ಮಾತನಾಡಿ, ಕಾರ್ಖಾನೆಯಲ್ಲಿ ಶುಗರ್ ತಯಾರಿಕೆಗೆ ಸ್ಥಳೀಯರ ವಿರೋಧವಿಲ್ಲ.
ಆದರೆ, ಇತ್ತೀಚಿನ 10 ವರ್ಷಗಳಿಂದ ಮದ್ಯ ತಯಾರಿಕಾ ಘಟಕ ತೆರೆಯಲಾಗಿದ್ದು, ಅದರಿಂದ ಹೊರಬರುವ ರಾಸಾಯನಿಕ ತ್ಯಾಜ್ಯದಿಂದ ಕೃಷಿ ಚುಟವಟಿಕೆಗಳಿಗೆ ಮಾರಕವಾಗುತ್ತಿದೆ. ಇದರ ಜತೆಗೆ ಡಿಸ್ಟಲರಿ ಘಟಕದ ಸಾಮರ್ಥ್ಯವನ್ನು ಹೆಚ್ಚಿಸಲು ಸ್ಥಳೀಯರ ವಿರೋಧದ ನಡುವೆಯೂ ಜಿಲ್ಲಾಡಳಿತ ಅನುಮತಿ ನೀಡುವ ಮೂಲಕ ಉದ್ಧಟತನ ಮೆರೆದಿದೆ. ಇದರಿಂದ ಅಂತರ್ಜಲ ಕಲುಷಿತಗೊಂಡು ಸ್ಥಳೀಯರು ರೋಗ ರುಜಿನಗಳಿಗೆ ತುತ್ತಾಗುತ್ತಿದ್ದಾರೆ. ಇದನ್ನು ತಪ್ಪಿಸುವಂತೆ ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ತಹಶೀಲ್ದಾರ್ ಎಂ. ದಯಾನಂದ್ ಹಾಗೂ ಪರಿಸರಾಧಿಕಾರಿ ರವಿಚಂದ್ರ ಮಾತನಾಡಿ, ಮುಂದಿನ ವಾರ ಸುತ್ತಮುತ್ತಲಿನ ಗ್ರಾಮಗಳ ಬೋರ್‌ವೆಲ್ ನೀರಿನ ಪರೀಕ್ಷೆ ನಡೆಸಲಾಗುವುದು. ವರದಿಯಲ್ಲಿ ಅಂತರ್ಜಲ ಕಲುಷಿತಗೊಂಡಿ ರುವುದು ಕಂಡುಬಂದಲ್ಲಿ ಕ್ರಮ ಕೈಗೊಳ್ಳು ವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.
ಇದಕ್ಕೂ ಮುನ್ನ ರೈತರು ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಆಗಮಿಸಿದ ಗುಂಪೊಂದು ಕಾರ್ಖಾನೆಯಿಂದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಯಾವುದೇ ಸಮಸ್ಯೆಯಿಲ್ಲ ಎಂದು ಗ್ರಾಮಸ್ಥರೇ ಹೇಳುತ್ತಿದ್ದಾರೆ. ಹಾಗಾಗಿ ಹೊರಗಿನಿಂದ ಬಂದು ಪ್ರತಿಭಟನೆ ನಡೆಸುವ ಅಗತ್ಯವಿಲ್ಲ ಎಂದು ಪ್ರತಿಭಟನಕಾರರ ವಿರುದ್ಧ ತಿರುಗಿಬಿದ್ದರು. ಇದರಿಂದ ರೈತರು ಹಾಗೂ ಗುಂಪಿನ ಸದಸ್ಯರೊಂದಿಗೆ ಮಾತಿನ ವಾಗ್ವಾದ ತಾರಕ್ಕೇರಿತು.
ಬಳಿಕ ಆಗಮಿಸಿದ ಪಿಎಸ್‌ಐ ಸತೀಶ್ ಪರಿಸ್ಥಿತಿ ಶಾಂತಗೊಳಿಸಲು ಮುಂದಾದರು. ಕಾರ್ಖಾನೆ ಆಡಳಿತ ಮಂಡಳಿ ಆಮಿಷ ಕೊಟ್ಟು ಪ್ರತಿಭಟನೆ ಮಾಡುವರ ಹಕ್ಕನ್ನು ಕಿತ್ತುಕೊಳ್ಳಲು ಬಂದಿದ್ದಾರೆ. ಇದು ಪ್ರಜಾಪ್ರಭುತ್ವ ವಿರೋಧಿ ನೀತಿ. ಹಾಗಾಗಿ ಗುಂಪಿನ ಸದಸ್ಯರ ವಿರುದ್ಧ ಹಾಗೂ ಕಾರ್ಖಾನೆ ಮಂಡಳಿ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಮೇಲಧಿಕಾರಿಗಳ ಗಮನಕ್ಕೆ ತಂದು ಗುಂಪಿನ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳು ವುದಾಗಿ ಭರವಸೆ ಯನ್ನು ಪಿಎಸ್‌ಐ ಸತೀಶ್ ನೀಡಿದರು.
ನಂತರ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದು ಪ್ರತಿಭಟನೆಯನ್ನು ಮುಂದುವರಿಸಿದರು. ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಅಶ್ವತ್ಥ್ ನಾರಾಯಣ ರಾಜೇಅರಸ್, ಶಿರಮಳ್ಳಿ ಸಿದ್ದಪ್ಪ, ಬೊಕ್ಕಹಳ್ಳಿ ನಂಜುಂಡಸ್ವಾಮಿ, ರಾಜೇಂದ್ರ, ಗುರುಲಿಂಗೇಗೌಡ, ಪುಟ್ಟ ಸುಬ್ಬೇಗೌಡ, ಸತೀಶ್‌ರಾವ್, ವೆಂಕಟೇಗೌಡ, ರಮೇಶ್ ಹಲವರು ಹಾಜರಿದ್ದರು.