Advertisement

ಪತ್ರಿಕೋದ್ಯಮದ ಘನತೆ, ಮೌಲ್ಯ ಕುಸಿಯುತ್ತಿದೆ; ಬನ್ನಂಜೆ ಜನ್ಮಶತಾಬ್ದ

12:22 PM Jan 21, 2017 | Sharanya Alva |

ಉಡುಪಿ:ಪ್ರತಿಕೋದ್ಯಮ ದೇಶದ 4ನೇ ಅಂಗವಾಗಿದ್ದರೂ ಕೂಡ ಇಂದು ಅದು ವ್ಯಾಪಾರಿ ಸಂಸ್ಥೆಯಾಗಿ ಬೆಳೆಯುವ ಮೂಲಕ ತನ್ನ ಘನತೆ ಮತ್ತು ಮೌಲ್ಯಗಳನ್ನು ಕಳೆದುಕೊಳ್ಳುತ್ತಿದೆಯೇ ಎಂಬ ಆತಂಕ ಇದೆ ಎಂದು ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.

Advertisement

ಶನಿವಾರ ಉಡುಪಿಯ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ನಡೆದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪತ್ರಿಕಾರಂಗದ ಇತಿಹಾಸ ಬರೆಯಹೊರಟ ಬನ್ನಂಜೆ ರಾಮಾಚಾರ್ಯ ಅವರ ಜನ್ಮಶತಾಬ್ದ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಪತ್ರಿಕೋದ್ಯಮ ಯಾವತ್ತೂ ತನ್ನ ಘನತೆ ಮತ್ತು ಮೌಲ್ಯ ಕಳೆದುಕೊಳ್ಳುವಂತಾಗಬಾರದು. ಅದಕ್ಕಾಗಿ ನಮಗೆ ಇಂತಹ ಹಿರಿಯರ ಬದುಕಿನ ಮಾರ್ಗದರ್ಶನ ಅಗತ್ಯವಾಗುತ್ತದೆ. ದಾರಿ ತಪ್ಪುವುದು ಸಹಜ ಆದರೂ ಬನ್ನಂಜೆಯಂತಹ ಹಿರಿಯರ ಬದುಕಿನ ಮಾರ್ಗದರ್ಶನದ ಮೂಲಕ ಊರ್ಜಿತಗೊಳ್ಳಬೇಕು ಎಂದು ಸಲಹೆ ನೀಡಿದರು.

ಬನ್ನಂಜೆ ರಾಮಾಚಾರ್ಯ ಜನ್ಮಶತಾಬ್ದ ಸಮಿತಿ ವತಿಯಿಂದ ಆಯೋಜನೆಗೊಂಡಿದ್ದ ಕಾರ್ಯಕ್ರಮ ಮತ್ತು ವಿಚಾರ ಸಂಕಿರಣವನ್ನು ಪರ್ಯಾಯ ಶ್ರೀ ಪೇಜಾವರ ಮಠಾಧೀಶರಾದ ವಿಶ್ವೇಶತೀರ್ಥ ಶ್ರೀಪಾದರು ಉದ್ಘಾಟಿಸಿ ಶುಭ ಹಾರೈಸಿದರು.

ಪತ್ರಿಕೋದ್ಯಮ ಅವರ ಸರ್ವಸ್ವ ಆಗಿತ್ತು: ಏರ್ಯ
ಬನ್ನಂಜೆ ರಾಮಾಚಾರ್ಯರು ನೇರ ನಡೆ, ನುಡಿಗೆ ಹೆಸರಾದವರು. ಅವರು ಪತ್ರಿಕೋದ್ಯಮವನ್ನು ತನ್ನ ಜೀವನದ ಸರ್ವಸ್ವ ಅಂತ ಬದುಕಿದವರು ಎಂದು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಏರ್ಯ ಲಕ್ಷ್ಮೀನಾರಾಯಣ ಆಳ್ವ ಹೇಳಿದರು.

Advertisement

ಆದರೆ ಇಂದು ಪತ್ರಿಕೋದ್ಯಮದಲ್ಲಿ ಮಾತ್ರ ಮೌಲ್ಯ ಕುಸಿಯುತ್ತಿಲ್ಲ, ಸಾರ್ವಜನಿಕ ಬದುಕಿನ ಎಲ್ಲಾ ರಂಗಗಳಲ್ಲಿಯೂ, ಜೀವನದಲ್ಲಿಯೂ ಮೌಲ್ಯಗಳು ಕುಸಿಯುತ್ತಾ ಬರುತ್ತಿರುವುದನ್ನು ನಾವು ಗಮನಿಸುತ್ತಿದ್ದೇವೆ ಎಂದು ನುಡಿದರು.

ಮಾಜಿ ಶಾಸಕ ಯುಆರ್ ಸಭಾಪತಿ ಪ್ರಸ್ತಾವಿಕ ಮಾತನ್ನಾಡಿದರು. ಬನ್ನಂಜೆ ಅವರೊಂದಿಗಿನ ಒಡನಾಟ, ಮಾರ್ಗದರ್ಶನದ ಕುರಿತು ಸಭಾಪತಿ ಮೆಲುಕು ಹಾಕಿದರು. ಸಭೆಯಲ್ಲಿ ರಾಮಾಚಾರ್ಯ ಅವರ ಪುತ್ರ ಸರ್ವಜ್ಞ ರಾಮಾಚಾರ್ಯ, ಬನ್ನಂಜೆ ಜನ್ಮಶತಾಬ್ದ ಸಮಿತಿಯ ಅಧ್ಯಕ್ಷ ರತ್ನಕುಮಾರ್, ಗೌರವಾಧ್ಯಕ್ಷರಾದ ಎಎಸ್ ಎನ್ ಹೆಬ್ಬಾರ್ ಉಪಸ್ಥಿತರಿದ್ದರು.

ಬನ್ನಂಜೆ ಅಭಿಮಾನಿಗಳು, ಶಿಷ್ಯರು ಸಮಾರಂಭಕ್ಕೆ ಆಗಮಿಸಿದ್ದರು. ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿಚಾರಣೆ ಸಂಕಿರಣಕ್ಕೆ ಚಾಲನೆ ನೀಡಲಾಯಿತು.

Photo: ಸತೀಶ್ ಮಲ್ಯ

Advertisement

Udayavani is now on Telegram. Click here to join our channel and stay updated with the latest news.

Next