Advertisement

“ಉದಯವಾಣಿ’ಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ

12:15 AM Dec 14, 2020 | sudhir |

ಉಡುಪಿ: ಉದಯವಾಣಿಗೂ “ಬನ್ನಂಜೆ’ ಎಂಬ ಮೂರಕ್ಷರಕ್ಕೂ ಅವಿನಾಭಾವ ಸಂಬಂಧವಿದೆ. ಬನ್ನಂಜೆ ಸಹೋದರರಾದ ರಾಮಾಚಾರ್ಯ ಮತ್ತು ಗೋವಿಂದಾಚಾರ್ಯರು ಉದಯವಾಣಿ ಆರಂಭದಿಂದಲೂ (1970) ದಶಕಗಳ ಕಾಲ ಸೇವೆ ಸಲ್ಲಿಸಿದವರು.

Advertisement

ಬನ್ನಂಜೆ ರಾಮಾಚಾರ್ಯರು ಸಂಪಾದಕೀಯ ವಿಭಾಗದಲ್ಲಿ ಮುಖ್ಯಸ್ಥರಾಗಿದ್ದರೆ, ಬನ್ನಂಜೆ ಗೋವಿಂದಾಚಾರ್ಯರು ಸಾಪ್ತಾಹಿಕ ವಿಭಾಗದ ಮುಖ್ಯಸ್ಥರಾಗಿದ್ದರು.

ಕನ್ನಡದ ಭಾಷಾ ಶುದ್ಧತೆಗಾಗಿಯೇ “ಉದಯವಾಣಿ’ ಆರಂಭಗೊಂಡಿತ್ತು. ಸಾರ್ವಜನಿಕರು ಭಾಷಾ ಶುದ್ಧಿಯನ್ನು ಉಳಿಸಿಕೊಳ್ಳಬೇಕೆಂಬ ಹಂಬಲ ಪೈ ಬಳಗದ ಟಿ. ಮೋಹನದಾಸ ಪೈ ಮತ್ತು ಟಿ. ಸತೀಶ್‌ ಪೈ ಅವರಿಗೆ ಇತ್ತು ಎಂದು ಸ್ವತಃ ಗೋವಿಂದಾಚಾರ್ಯರೇ ಹೇಳುತ್ತಿದ್ದರು. ಗೋವಿಂದಾಚಾರ್ಯರ ಭಾಷಾಶುದ್ಧಿಯ ಕೊಡುಗೆ ಕುರಿತು ರಾಜ್ಯದಲ್ಲಿಯೇ ಮನೆಮಾತಾಗಿತ್ತು.

1970ರಲ್ಲಿಯೇ ಅಣ್ಣ ರಾಮಾಚಾರ್ಯರ ಜತೆ ಸಂಪಾದಕೀಯ ಬಳಗವನ್ನು ಸೇರಿಕೊಂಡ ಗೋವಿಂದಾಚಾರ್ಯರು ಸುಮಾರು
ಎರಡು ದಶಕಗಳ ಕಾಲ ಮುಖ್ಯ ಉಪ ಸಂಪಾದಕರಾಗಿ, ಸಾಪ್ತಾಹಿಕ ಸಂಪಾದಕರಾಗಿ ಪತ್ರಿಕೆಯ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಪರಿಶ್ರಮಪಟ್ಟಿದ್ದರು.

1970ರಿಂದಲೇ ಸತ್ವಪೂರ್ಣ, ಸಾಹಿತ್ಯ ಸಮೃದ್ಧಿಗಾಗಿ ಆರಂಭವಾದ ವಾರ್ಷಿಕ ವಿಶೇ ಷಾಂಕಗಳನ್ನು ಹೊರತರುವಾಗ ಮೊದಲ ಕೆಲವು ವರ್ಷ ಕರಡು ತಿದ್ದುವಲ್ಲಿಯೂ ವಿನ್ಯಾಸದಲ್ಲಿಯೂ ತೊಡಗಿಸಿಕೊಂಡಿದ್ದರು.

Advertisement

“ಡಾ| ಟಿಎಂಎ ಪೈ ಅವರೂ ಸೇರಿದಂತೆ ಉದಯವಾಣಿಯನ್ನು ಸ್ಥಾಪಿಸಿದ ಟಿ. ಮೋಹನದಾಸ ಪೈ, ಟಿ. ಸತೀಶ್‌ ಪೈ ಅವರು
ಅಷ್ಟೂ ಸ್ವಾತಂತ್ರ್ಯ ಕೊಟ್ಟಿದ್ದರು. ಸಂಪಾದಕೀಯ ವಿಷಯದಲ್ಲಿ ಪೈಗಳು ಮಧ್ಯ ಪ್ರವೇಶ ಮಾಡುತ್ತಿರಲಿಲ್ಲ. ಮೋಹನದಾಸ ಪೈ, ಸತೀಶ್‌ ಪೈಯವರು ಉದಯವಾಣಿಯನ್ನು ಬೆಳೆಸುವಲ್ಲಿ ಪಟ್ಟ ಪರಿಶ್ರಮ ಅಪಾರ. ನನಗೆ ಸಮಯ ನಿಗದಿ ಇದ್ದಿರಲಿಲ್ಲ. ಆದರೆ ಅಗತ್ಯವಿದ್ದಾಗ ರಾತ್ರಿ ಕೆಲಸ ಮಾಡಿದ್ದೂ ಇದೆ’ ಎಂಬುದಾಗಿ ಬನ್ನಂಜೆ ಹೇಳುತ್ತಿದ್ದರು.

“ಅವರು ಸಾಪ್ತಾಹಿಕ ಪುರವಣಿಯನ್ನು ಸಮೃದ್ಧಗೊಳಿಸಿದ್ದಷ್ಟೇ ಅಲ್ಲ. ಸಿನೆಮಾ ಸುದ್ದಿಗಳನ್ನೂ ಬರೆದಿದ್ದರು. ಆರಂಭದ ವರ್ಷಗಳಲ್ಲಿ ವರದಿಗಾರರು ಕಳುಹಿಸಿದ ವರದಿಗಳನ್ನು ರೋಚಕವಾಗಿ ಬರೆಯುತ್ತಿದ್ದರು. ರೋಚಕ ಶಬ್ದಗಳನ್ನು ಅಶ್ಲೀಲವಾಗದ ಹಾಗೆ ಸಿನೆಮಾ ಸುದ್ದಿಗಳನ್ನೂ ಬರೆದಿದ್ದರು ಎಂಬುದಾಗಿ ಸಹೋದ್ಯೋಗಿಯಾಗಿದ್ದ ನಿವೃತ್ತ ಸಂಪಾದಕ ಎನ್‌. ಗುರುರಾಜ್‌ ಅವರು ನೆನಪಿಸಿಕೊಳ್ಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next