ನವದೆಹಲಿ: ಹಲವು ಬ್ಯಾಂಕ್ ಒಕ್ಕೂಟಗಳು ಮಾರ್ಚ್ ತಿಂಗಳಿನಲ್ಲಿ ಎರಡು ದಿನಗಳ ಮುಷ್ಕರಕ್ಕೆ ಕರೆ ಕೊಟ್ಟಿರುವ ಹಿನ್ನೆಲೆಯಲ್ಲಿ ಬ್ಯಾಂಕಿಂಗ್ ಸೇವೆಗಳು ವ್ಯತ್ಯಯವಾಗಲಿದೆ ಎಂದು ಸಾರ್ವಜನಿಕ ವಲಯದ ಕೆನರಾ ಬ್ಯಾಂಕ್ ಗುರುವಾರ(ಮಾರ್ಚ್ 04) ತಿಳಿಸಿದೆ.
ಇದನ್ನೂ ಓದಿ:ಕಲಾಪದಲ್ಲಿ ‘ಒಂದು ದೇಶ- ಒಂದು ಚುನಾವಣೆ ಚರ್ಚೆ’: ಡಿ ಕೆ ಶಿವಕುಮಾರ್ ಆಕ್ರೋಶ
ಸರಕಾರಿ ಸ್ವಾಮ್ಯದ ಬ್ಯಾಂಕ್ ಗಳ ಖಾಸಗೀಕರಣ ವಿರೋಧಿಸಿ ಮಾರ್ಚ್ 15 ಮತ್ತು 16ರಂದು ಬ್ಯಾಂಕ್ ಒಕ್ಕೂಟ ಮುಷ್ಕರಕ್ಕೆ ಕರೆ ನೀಡಿದೆ. ಭಾರತೀಯ ಬ್ಯಾಂಕ್ ಗಳ ಅಸೋಸಿಯೇಶನ್ (ಐಬಿಎ) ನಮಗೆ ಬ್ಯಾಂಕ್ ಯೂನಿಯನ್ ಗಳ ಸಂಘಟನೆ ಮಾರ್ಚ್ 15 ಮತ್ತು 16ರಂದು ಮುಷ್ಕರಕ್ಕೆ ಕರೆ ನೀಡಿರುವುದಾಗಿ ಮಾಹಿತಿ ನೀಡಿದ್ದು, ಇದೊಂದು ಇಂಡಸ್ಟ್ರಿ ಮಟ್ಟದ ಸಮಸ್ಯೆಯಾಗಿರುವುದಾಗಿ ವಿವರಿಸಿದೆ.
ಎರಡು ದಿನಗಳ ಬ್ಯಾಂಕ್ ಮುಷ್ಕರ ಹಾಗೂ ಎರಡನೇ ಶನಿವಾರ(ಮಾರ್ಚ್ 13), ಭಾನುವಾರ(ಮಾ.14) ಸೇರಿ ಒಟ್ಟು ನಾಲ್ಕು ದಿನಗಳ ಕಾಲ ಬ್ಯಾಂಕಿಂಗ್ ಸೇವೆಯಲ್ಲಿ ಗ್ರಾಹಕರಿಗೆ ಅನನುಕೂಲವಾಗಿದೆ.
ಮುಷ್ಕರದ ಸಂದರ್ಭದಲ್ಲಿ ಬ್ಯಾಂಕ್ ನ ಶಾಖೆಗಳು ಮತ್ತು ಕಚೇರಿಗಳು ಕಾರ್ಯನಿರ್ವಹಿಸುವ ಕುರಿತು ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಕೆನರಾ ಬ್ಯಾಂಕ್ ತಿಳಿಸಿದೆ. ಒಂದು ವೇಳೆ ಮುಷ್ಕರ ಕಾರ್ಯಗತಗೊಂಡರೆ ಬ್ಯಾಂಕ್ ವ್ಯವಹಾರದ ಸೇವೆಗಳ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಿದೆ.
ಆಲ್ ಇಂಡಿಯಾ ಬ್ಯಾಂಕ್ ಎಂಪ್ಲಾಯೀಸ್ ಅಸೋಸಿಯೇಶನ್, ಆಲ್ ಇಂಡಿಯಾ ಬ್ಯಾಂಕ್ ಆಫೀಸರ್ಸ್ಸ್ ಕಾನ್ಫಡರೇಶನ್, ಆಲ್ ಇಂಡಿಯಾ ಬ್ಯಾಂಕ್ ಆಫೀಸರ್ಸ್ಸ್ ಅಸೋಸಿಯೇಶನ್ ಸೇರಿದಂತೆ ಹಲವು ಯೂನಿಯನ್ ಗಳು ಎರಡು ದಿನಗಳ ಮುಷ್ಕರಕ್ಕೆ ಕರೆ ನೀಡಿವೆ.