ಬೆಂಗಳೂರು: ಬ್ಯಾಂಕಿಂಗ್ ನೇಮಕಾತಿಯಲ್ಲಿ ಪ್ರಾದೇಶಿಕ ಭಾಷೆಗಳಲ್ಲಿಯೇ ಪರೀಕ್ಷೆ ನಡೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿಗೆ ಪತ್ರ ಬರೆದಿದ್ದಾರೆ.
ಐಬಿಪಿಎಸ್ ನಡೆಸುವ ಬ್ಯಾಂಕಿಂಗ್ ಪರೀಕ್ಷೆಯಲ್ಲಿ ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ಪರೀಕ್ಷೆ ಬರೆಯಲು ಅವಕಾಶ ಇರುವುದರಿಂದ ಪ್ರಾದೇಶಿಕ ಭಾಷೆಯ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ. ಅಲ್ಲದೇ, ಬ್ಯಾಂಕಿಂಗ್ ಸೇವೆಗೆ ಸೇರುವ ಉದ್ಯೋಗಿಗಳು ಗ್ರಾಮೀಣ ಭಾಗದಲ್ಲಿ ಕಾರ್ಯ ನಿರ್ವಹಿಸಬೇಕಿರುವುದರಿಂದ ಪ್ರಾದೇಶಿಕ ಭಾಷೆ ಗೊತ್ತಿಲ್ಲದಿರುವುದರಿಂದ ಸಾರ್ವಜನಿಕರೊಂದಿಗೆ ವ್ಯವಹರಿಸಲು ತೊಂದರೆಯಾಗುತ್ತದೆ. ಇದರಿಂದ ಬ್ಯಾಂಕ್ ವ್ಯವಹಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರದಲ್ಲಿ ತಿಳಿಸಿದ್ದಾರೆ.
ಈಗಾಗಲೇ ಐಬಿಪಿಎಸ್ ನಡೆಸುತ್ತಿರುವ ಪರೀಕ್ಷೆಗಳಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳು ಕನಿಷ್ಠ 8ನೇ ತರಗತಿ ವರೆಗೂ ಸಂವಿಧಾನ ಮಾನ್ಯತೆ ನೀಡಿರುವ ಕನ್ನಡ ಭಾಷೆಯಲ್ಲಿ ಅಧ್ಯಯನ ಮಾಡಿರಬೇಕು. ಒಂದು ವೇಳೆ ಕನ್ನಡ ಭಾಷೆ ಬಾರದ ಅಭ್ಯರ್ಥಿ ಆಯ್ಕೆಯಾದರೆ, ಕನ್ನಡದಲ್ಲಿ ವ್ಯವಹರಿಸಲು ಗರಿಷ್ಠ 6 ತಿಂಗಳು ಸಮಯ ನೀಡಬೇಕು. ಆರು ತಿಂಗಳಲ್ಲಿ ಭಾಷೆ ಕಲಿಯದಿದ್ದರೆ, ಮತ್ತೆ ಸಮಯಾವಕಾಶ ನೀಡಲು ಆರ್‌ಆರ್‌ಬಿ ಮಂಡಳಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಯಾವುದೇ ಕಾರಣಕ್ಕೂ ಸಮಯವನ್ನು ವಿಸ್ತರಣೆ ಮಾಡಲು ಅವಕಾಶ ಕಲ್ಪಿಸಬಾರದು ಎಂದು ಮುಖ್ಯಮಂತ್ರಿ ಪತ್ರದಲ್ಲಿ ಆಗ್ರಹಿಸಿದ್ದಾರೆ.
ಸೆಪ್ಟಂಬರ್ ತಿಂಗಳಿನಲ್ಲಿ ಐಬಿಪಿಎಸ್ ನಡೆಸುತ್ತಿರುವ ಬ್ಯಾಂಕಿಂಗ್ ಪರೀಕ್ಷೆಯಲ್ಲಿ ನಿಯಮಗಳನ್ನು ತಿದ್ದುಪಡಿ ಮಾಡಿ, ಕರ್ನಾಟಕದಲ್ಲಿ ಆಯ್ಕೆಯಾಗಲು ಅಭ್ಯರ್ಥಿ ಕನಿಷ್ಠ ಎಸ್‌ಎಸ್‌ಎಲ್‌ಸಿ ಕನ್ನಡ ಮಾಧ್ಯಮದಲ್ಲಿ ಪಾಸಾಗಿರಬೇಕು. ಅದರಂತೆ ಎಲ್ಲ ಸಂವಿಧಾನ ಮಾನ್ಯತೆ ಪಡೆದ 22 ಭಾಷೆಗಳಿಗೂ ಅನ್ವಯ ಆಗುವಂತೆ ಶೀಘ್ರವೇ ನೇಮಕಾತಿ ನಿಯಮಗಳಿಗೆ ತಿದ್ದುಪಡಿ ಮಾಡುವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿರುವ ಕೇಂದ್ರ ಅಬಕಾರಿ ಸೇವೆ, ರೈಲ್ವೆ ಇಲಾಖೆ ಸೇರಿದಂತೆ ಅನೇಕ ಇಲಾಖೆಗಳಲ್ಲಿ ನೇಮಕಾತಿ ನಡೆಸುತ್ತವೆ. ಅವುಗಳಲ್ಲಿಯೂ ಪ್ರಾದೇಶಿಕ ಭಾಷೆಯ ಮೇಲೆ ಹಿಡಿತ ಇರುವವರಿಗೆ ನೇಮಕಾತಿಯಲ್ಲಿ ಅವಕಾಶ ದೊರೆಯುವಂತೆ ಸೂಚಿಸಬೇಕು. ಸಂವಿಧಾನದ 8 ನೇ ಪರಿಚ್ಛೇದದಲ್ಲಿ ಸೂಚಿಸಿರುವಂತೆ 22 ಪ್ರಾದೇಶಿಕ ಭಾಷೆಗಳಿಗೂ ಸಮಾನ ಪ್ರಾತಿನಿಧ್ಯ ನೀಡಬೇಕು ಎಂದು ಸೂಚಿಸಲಾಗಿದೆ. ಒಕ್ಕೂಟ ವ್ಯವಸ್ಥೆಯನ್ನು ಬಲ ಪಡಿಸಲು ಪ್ರಾದೇಶಿಕ ಭಾಷೆಗಳಿಗೆ ಮನ್ನಣೆ ನೀಡುವುದು ಪ್ರತಿಯೊಂದು ಸರ್ಕಾರದ ಕರ್ತವ್ಯವಾಗಿದೆ. ಅಲ್ಲದೇ ಪ್ರತಿ ರಾಜ್ಯವೂ ತನ್ನ ಪ್ರಜೆಗಳಿಗೆ ನ್ಯಾಯ ಕೊಡಿಸುವ ಹಕ್ಕು ಹೊಂದಿದೆ. ಹೀಗಾಗಿ ತಕ್ಷಣವೇ ಐಬಿಪಿಎಸ್ ಪರೀಕ್ಷೆ ನಡೆಸಲು ನಿಯಮಗಳಿಗೆ ಸೂಕ್ತ ತಿದ್ದುಪಡಿ ತರುವಂತೆ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.