ಹೊಸದಿಲ್ಲಿ: ಬ್ಯಾಂಕ್‌ಗಳು ಇನ್ನು ಗ್ರಾಹಕರ ಜೇಬಿಗೆ ಭಾರವಾಗಲಿವೆ. ಕಾರಣ ಜಿಎಸ್‌ಟಿ! ಡೆಬಿಟ್ ಕಾರ್ಡ್, ಗೃಹ ಸಾಲ ಸಂಸ್ಕರಣಾ ಶುಲ್ಕ, ಲಾಕರ್ ಬಾಡಿಗೆ, ಚೆಕ್ ಬುಕ್, ನಗದು ನಿರ್ವಹಣೆ ಶುಲ್ಕ ಮತ್ತು ಎಸ್‌ಎಂಎಸ್ ಅಲರ್ಟ್ ಗಳಿಗೆ ಇನ್ನು ಜಿಎಸ್‌ಟಿ ಅನ್ವಯವಾಗಲಿದ್ದು, ಬ್ಯಾಂಕಿಂಗ್ ಸೇವೆಗಳು ದುಬಾರಿಯಾಗಲಿವೆ. ಈ ನಿಟ್ಟಿನಲ್ಲಿ ದೇಶದ ಅತಿದೊಡ್ಡ ಬ್ಯಾಂಕ್ ಎನಿಸಿರುವ ಎಸ್‌ಬಿಐ ಗ್ರಾಹಕರಿಗೆ ವಿಧಿಸುವ ವಿವಿಧ ಶುಲ್ಕಗಳ ಪರಿಷ್ಕರಣೆ ಮಾಡಿದೆ. ಅದರಂತೆ ಗ್ರಾಹಕರು ತಮ್ಮ ಉಳಿತಾಯ ಖಾತೆಯಲ್ಲಿ ಮಾಸಿಕ ಸರಾಸರಿ ಬ್ಯಾಲೆನ್ಸ್ (ಎಂಎಬಿ) ಇರುವಂತೆ ನೋಡಿಕೊಳ್ಳಲು ವಿಫಲರಾದರೆ 100 ರೂ.ವರೆಗೆ ದಂಡ (+ಶೇ. 18 ಜಿಎಸ್‌ಟಿ) ವಿಧಿಸುವುದಾಗಿ ಎಸ್‌ಬಿಐ ಹೇಳಿದೆ.
ಎಟಿಎಂ ವಿತ್‌ಡ್ರಾಗೂ ದಂಡ: ಪ್ರಸ್ತುತ ಮೆಟ್ರೋ ನಗರಗಳಲ್ಲಿ ತಿಂಗಳಿಗೆ 8 ಬಾರಿ, ಇತರ ನಗರ, ಪಟ್ಟಣ ಮತ್ತು ಗ್ರಾಮೀಣ ಖಾತೆದಾರರು 10 ಬಾರಿ ಎಟಿಎಂ ವಹಿವಾಟು ನಡೆಸಲು ಅವಕಾಶವಿದ್ದು, ನಿಗದಿತ ಅವಕಾಶಗಳನ್ನು ಮೀರಿ ವಹಿವಾಟು ನಡೆಸಿದರೆ ಎಸ್‌ಬಿಐ ವಿಧಿಸುತ್ತಿದ್ದ ಶುಲ್ಕವೂ ಹೆಚ್ಚಾಗಿದೆ. ಅದರಂತೆ ಪ್ರತಿ ಹೆಚ್ಚುವರಿ ವಹಿವಾಟಿಗೆ 20 ರೂ. (ತೆರಿಗೆ ಹೊರತುಪಡಿಸಿ) ಶುಲ್ಕ ವಿಧಿಸಲಾಗುತ್ತದೆ. ಇನ್ನು ಮೂಲ ಉಳಿತಾಯ ಖಾತೆ ಹೊಂದಿರುವ ಗ್ರಾಹಕರು ಎಟಿಎಂ ಮೂಲಕ ಕೇವಲ ನಾಲ್ಕು ಬಾರಿ ವಿತ್‌ಡ್ರಾ ಮಾಡಲು ಅವಕಾಶವಿದ್ದು, ಆ ನಂತರ ಎಸ್‌ಬಿಐ ಶಾಖೆಯಲ್ಲಿ ಹಣ ವಿತ್‌ಡ್ರಾ ಮಾಡಿದರೆ ಒಂದು ಬಾರಿಗೆ 50 ರೂ. (ತೆರಿಗೆ ಹೊರತುಪಡಿಸಿ), ಇತರ ಬ್ಯಾಂಕ್ ಎಟಿಎಂನಲ್ಲಿ ವಿತ್‌ಡ್ರಾ ಮಾಡಿದಾಗ ಪ್ರತಿ ಬಾರಿ 20 ರೂ. ಮತ್ತು ಎಸ್‌ಬಿಐ ಎಟಿಎಂನಲ್ಲಿ ಹಣ ಬಿಡಿಸಿದರೆ ಒಮ್ಮೆಗೆ 10 ರೂ. ದಂಡವನ್ನು ಖಾತೆಯಿಂದ ಮುರಿದುಕೊಳ್ಳಲಾಗುತ್ತದೆ.
1,000 ರೂ.ವರೆಗಿನ ಐಎಂಪಿಎಸ್ ಫ್ರೀ!: ಇನ್ನು ನೆಟ್ ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ ಬಳಸಿ ಐಎಂಪಿಎಸ್ ವಿಧಾನದ ಮೂಲಕ ಮಾಡುವ ಹಣ ವರ್ಗಾವಣೆಗೂ ಎಸ್‌ಬಿಐ ಶುಲ್ಕ ವಿಧಿಸಲಿದೆ. ಆದರೆ ಸಣ್ಣ ಪ್ರಮಾಣದ ವಹಿವಾಟುಗಳನ್ನು ಉತ್ತೇಜಿಸುವ ದೃಷ್ಟಿಯಿಂದ 1,000 ರೂ.ವರೆಗಿನ ತ್ವರಿತ ಹಣ ವರ್ಗಾವಣೆಗೆ (ಐಎಂಪಿಎಸ್) ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದು ಬ್ಯಾಂಕ್ ತನ್ನ ವೆಬ್‌ಸೈಟ್‌ನಲ್ಲಿ ಹೇಳಿಕೊಂಡಿದೆ. ಇದೇ ವೇಳೆ 1,000ದಿಂದ 1 ಲಕ್ಷ ರೂ.ವರೆಗಿನ ಹಣ ವರ್ಗಾವಣೆಗೆ 5 ರೂ. (+ ಶೇ.18 ಜಿಎಸ್‌ಟಿ), 1ರಿಂದ 2 ಲಕ್ಷ ರೂ.ವರೆಗಿನ ಹಣ ವರ್ಗಾವಣೆಗೆ 15 ರೂ. (+ ಶೇ.18 ಜಿಎಸ್‌ಟಿ) ಶುಲ್ಕವನ್ನು ಎಸ್‌ಬಿಐ ವಿಧಿಸಲಿದೆ.
ಸಂತೋಷದಿಂದ ಸ್ನಾನ ಮಾಡಿ!: ಕಡೆಗೂ ಗ್ರಾಹಕರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ! ಜಿಎಸ್‌ಟಿಯಿಂದಾಗಿ ತೆರಿಗೆ ಪ್ರಯೋಜನ ಪಡೆದ ದಿನಬಳಕೆ ವಸ್ತುಗಳ ಉತ್ಪಾದಕ (ಎಫ್ಎಂಸಿಜಿ) ಕಂಪೆನಿಗಳು ಸ್ನಾನದ ಸಾಬೂನಿನ ಬೆಲೆ ಇಳಿಸಿವೆ. ಎಫ್ಎಂಸಿಜಿ ಕಂಪೆನಿಗಳು ಈ ಹಿಂದೆ ಶೇ. 24ರಿಂದ ಶೇ. 25ರಷ್ಟು ತೆರಿಗೆ ಪಾವತಿಸುತ್ತಿದ್ದು, ಜಿಎಸ್‌ಟಿ ಜಾರಿಯಿಂದಾಗಿ ತೆರಿಗೆ ಪ್ರಮಾಣ ಶೇ. 18ಕ್ಕೆ ಕುಸಿದಿದೆ. ಹೀಗಾಗಿ ಪತಂಜಲಿ, ಐಟಿಸಿ, ಇಮಾಮಿ ಸಹಿತ ಎಲ್ಲ ಎಫ್ಎಂಸಿಜಿ ಕಂಪೆನಿಗಳು ಸೋಪ್ ದರ ಇಳಿಸಿವೆ. ಪರಿಣಾಮ ಎಲ್ಲ ಬ್ರಾಂಡ್‌ಗಳ ಸಾಬೂನು ಬೆಲೆಯಲ್ಲಿ 5ರಿಂದ 8 ರೂ. ಇಳಿಕೆಯಾಗುವ ಸಾಧ್ಯತೆಯಿದೆ. ಇದರೊಂದಿಗೆ ಶಾಂಪೂ, ತಲೆಕೂದಲೆಣ್ಣೆ ಮತ್ತು ಟೂತ್ ಪೇಸ್ಟ್ ದರ ಕೂಡ ಇಳಿಯಲಿದೆ.
ಚುರುಕಾಗಿ ಕೆಲಸ ಮಾಡಿ: ಬರುವ ಆ. 15ರ ವೇಳೆಗೆ ಎಲ್ಲ ವ್ಯವಹಾರಗಳೂ ಜಿಎಸ್‌ಟಿ ಅಡಿಯಲ್ಲಿ ನೋಂದಣಿ ಮಾಡಿಕೊಳ್ಳುವುದನ್ನು ಖಚಿತಪಡಿಸುವ ನಿಟ್ಟಿನಲ್ಲಿ ಎಲ್ಲ ಮುಖ್ಯ ಕಾರ್ಯದರ್ಶಿ ಚುರುಕಾಗಿ ಕಾರ್ಯ ನಿರ್ವಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ಆದೇಶಿಸಿದ್ದಾರೆ ಎಂದು ಪ್ರಧಾನಿಮಂತ್ರಿ ಕಾರ್ಯಾಲಯ ತಿಳಿಸಿದೆ.