Advertisement
ಕೋಲ್ಕತಾ ಮೂಲದ ಅಮಿತಾಭ್ ದಾಸ್‌ಗುಪ್ತಾ ಅವರು ರಾಷ್ಟ್ರೀಯ ಗ್ರಾಹಕರ ವಿವಾದ ಪರಿಹಾರ ಮಂಡಳಿಯ ಆದೇಶವೊಂದರ ವಿರುದ್ಧ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌ನ ನ್ಯಾಯಪೀಠ ಈ ವರ್ಷದ ಫೆಬ್ರವರಿಯಲ್ಲಿ ಗ್ರಾಹಕರ ಹಿತಾಸಕ್ತಿಯ ರಕ್ಷಣೆಗಾಗಿ ಲಾಕರ್ ನಿರ್ವಹಣೆಯ ಕುರಿತಂತೆ ಆರು ತಿಂಗಳುಗಳ ಒಳಗಾಗಿ ಸ್ಪಷ್ಟ ನಿಯಮಾವಳಿ ರೂಪಿಸುವಂತೆ ಆರ್‌ಬಿಐಗೆ ನಿರ್ದೇಶ ನೀಡಿತ್ತಲ್ಲದೆ ಈ ಮಾರ್ಗಸೂಚಿಗೆ ಎಲ್ಲ ಬ್ಯಾಂಕ್‌ಗಳು ಬದ್ಧವಾಗಿರಬೇಕು ಎಂದು ಆದೇಶಿಸಿತ್ತು. ಇದಕ್ಕೆ ಪೂರಕವಾಗಿ ಆರ್‌ಬಿಐ ಈ ಅಧಿಸೂಚನೆಯನ್ನು ಹೊರಡಿಸಿದೆ. ಈ ಹೊಸ ಮಾರ್ಗಸೂಚಿಯು 2022ರ ಜನವರಿ 1ರಿಂದ ಅನ್ವಯವಾಗಲಿದೆ.
Related Articles
Advertisement
ಸಿಸಿಟಿವಿ ಕಡ್ಡಾಯ :
ಬ್ಯಾಂಕ್‌ಗಳಲ್ಲಿರುವ ಲಾಕರ್ ಪ್ರದೇಶವು ಎಲ್ಲ ಸಮಯದಲ್ಲೂ ಸುರಕ್ಷಿತವಾಗಿರಬೇಕು. ಇದಕ್ಕಾಗಿ ಸಿಸಿಟಿವಿ ಅಳವಡಿಸಿಕೊಂಡು 180 ದಿನಗಳ ರೆಕಾರ್ಡಿಂಗ್ ದಾಖಲೆಯನ್ನಿಟ್ಟುಕೊಂಡಿರಬೇಕು. ಅಪಾಯ ಸೂಚಿಸುವ ನಿಯಂತ್ರಣ ವ್ಯವಸ್ಥೆ, ಲಾಕರ್ ರೂಮ್ ಪ್ರವೇಶದ ಡಿಜಿಟಲ್ ದಾಖಲೆ ಸೃಷ್ಟಿಸುವ ಟೈಮ್ ಲಾಗ್ ಅನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಲಾಕರ್‌ಗಳು, ಲಾಕರ್ ಮಾಲಕತ್ವವನ್ನು ಗುರುತಿಸಲು ಅನುಕೂಲವಾಗುವಂತೆ ಬ್ಯಾಂಕ್‌ಗಳು ಗುರುತಿನ ಕೋಡ್ ಅನ್ನು ಎಲ್ಲ ಲಾಕರ್ ಕೀಗಳ ಮೇಲೆ ಕೆತ್ತಲ್ಪಟ್ಟಿದೆ ಎನ್ನುವುದನ್ನು ಖಚಿತಪಡಿಸಿಕೊಂಡಿರಬೇಕು. ಒಂದು ವೇಳೆ ಎಲೆಕ್ಟ್ರಾನಿಕ್ ವ್ಯವಸ್ಥೆ ಮೂಲಕ ನಿಯಂತ್ರಿಸುತ್ತಿದ್ದರೆ ಹ್ಯಾಕಿಂಗ್ ಆಗದಂತೆ ಭದ್ರತೆ ವ್ಯವಸ್ಥೆಯನ್ನು ಹೊಂದಿರಬೇಕಾಗುತ್ತದೆ.
ಹೊಸ ನಿಯಮ ಹೇಗಿರಲಿದೆ? :
2022ರ ಜನವರಿ 1ರಿಂದ ಹೊಸ ನಿಯಮಾವಳಿ ಜಾರಿಯಾಗಲಿದ್ದು, ಸುರಕ್ಷಿತ ಠೇವಣಿ ಲಾಕರ್ ಹೊಂದಿರುವವರು ಹೊಸ ಲಾಕರ್ ಒಪ್ಪಂದಕ್ಕೆ ಬ್ಯಾಂಕಿನೊಂದಿಗೆ ಸಹಿ ಹಾಕಬೇಕಾಗುತ್ತದೆ. ಐಬಿಎ ರೂಪಿಸಿಸಲಿರುವ ಹೊಸ ಮಾದರಿಯ ಲಾಕರ್ ಒಪ್ಪಂದವನ್ನು ಬ್ಯಾಂಕ್‌ಗಳು ಅನುಸರಿಸಲಿವೆ. ಈ ಒಪ್ಪಂದವು ಆರ್‌ಬಿಐನ ಪರಿಷ್ಕೃತ ನಿಯಮಾವಳಿ ಮತ್ತು ಸುಪ್ರೀಂ ಕೋರ್ಟ್‌ನ
ನಿರ್ದೇಶನಗಳಿಗೆ ಅನುಸಾರವಾಗಿರಬೇಕು. ಅಷ್ಟು ಮಾತ್ರವಲ್ಲದೆ ಈ ಒಪ್ಪಂದದಲ್ಲಿ ಗ್ರಾಹಕರಿಗೆ ನ್ಯಾಯಸಮ್ಮತವಲ್ಲದ ಯಾವುದೇ ನಿಯಮ ಅಥವಾ ಷರತ್ತುಗಳು ಇರಕೂಡದು. ಅಷ್ಟು ಮಾತ್ರವಲ್ಲದೆ ಬ್ಯಾಂಕ್‌ಗಳು ಲಾಕರ್‌ನ ಪ್ರವೇಶ ಮತ್ತು ಕಾರ್ಯಾಚರಣೆಯ ಬಗ್ಗೆ ಗ್ರಾಹಕರ ಮೊಬೈಲ್‌ಗೆ ಎಸ್‌ಎಂಎಸ್, ನೋಂದಾಯಿತ ಇ-ಮೇಲ್ ಐಡಿಗೆ ಎಚ್ಚರಿಕೆ ಸಂದೇಶ ಹಾಗೂ ನಿರ್ವಹಣೆಯ ಕುರಿತಾಗಿನ ಪ್ರತಿಯೊಂದೂ ಮಾಹಿತಿಗಳನ್ನು ಗ್ರಾಹಕರಿಗೆ ತಿಳಿಸುವ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕು.
ಲಾಕರ್ ಹಂಚಿಕೆಯಲ್ಲಿ ಪಾರದರ್ಶಕತೆ :
ಲಾಕರ್‌ಗಳ ಹಂಚಿಕೆ ವಿಚಾರದಲ್ಲಿ ಪಾರದರ್ಶಕತೆಯನ್ನು ಗ್ರಾಹಕರಿಗೆ ಖಚಿತಪಡಿಸಬೇಕು. ಗಣಕೀಕೃತ ವ್ಯವಸ್ಥೆಯಲ್ಲಿ ಈ ಕಾರ್ಯಗಳ ನಿರ್ವಹಣೆಯಾಗಬೇಕು. ಸಾಮಾನ್ಯವಾಗಿ ಲಾಕರ್ ಹಂಚಿಕೆಗೆ ಎಲ್ಲ ಅರ್ಜಿಗಳನ್ನೂ ಬ್ಯಾಂಕ್‌ಗಳು ಅಂಗೀಕರಿಸುತ್ತವೆ. ಒಂದು ವೇಳೆ ಲಭ್ಯವಿಲ್ಲದೇ ಇದ್ದರೆ ಕಾಯಲು ಸೂಚಿಸುತ್ತವೆ. ಲಾಕರ್ ಬಾಡಿಗೆಯನ್ನು ವಾರ್ಷಿಕವಾಗಿ ಮರುಪಾವತಿಸಲು ನಿಗದಿ ಅವಧಿಗೆ ನಿರ್ದಿಷ್ಟ ಠೇವಣಿಯನ್ನು ಬ್ಯಾಂಕ್‌ಗಳು ಹಿಂದಿನಂತೆ ಪಡೆಯುವುದನ್ನು ಮುಂದುವರಿಸಬಹುದು. ಲಾಕರ್ ಬಾಡಿಗೆಯನ್ನು ತ್ವರಿತವಾಗಿ ಪಾವತಿಸುವುದಕ್ಕಾಗಿ ಬ್ಯಾಂಕ್‌ಗಳು ಒಂದು ನಿರ್ದಿಷ್ಟ ಮೊತ್ತದ ಠೇವಣಿಯನ್ನಿಡಲು ಸೂಚಿಸುತ್ತದೆ. ಇದು ಮೂರು ವರ್ಷಗಳ ಬಾಡಿಗೆಯನ್ನು ಹೊಂದಿರುತ್ತದೆ.
ಖಾತೆದಾರ ಸಾವನ್ನಪ್ಪಿದರೆ? :
ಖಾತೆದಾರ ಸಾವನ್ನಪ್ಪಿದ ಸಂದರ್ಭದಲ್ಲಿ ಆತ ಸೂಚಿಸಿದ್ದವರಿಗೆ ಅಥವಾ ಆತನ ಮರಣ ಪ್ರಮಾಣಪತ್ರವನ್ನು ಪರಿಶೀಲಿಸಿ ಅರ್ಹರನ್ನು ಗುರುತಿಸಿದ ಬಳಿಕ ನಾಮಿನಿಗೆ ಲಾಕರ್ ಪ್ರವೇಶಕ್ಕೆ ಅನುಮತಿ ನೀಡಲು ಬ್ಯಾಂಕ್‌ಗಳು ಕ್ರಮಕೈಗೊಳ್ಳುತ್ತವೆ. ಒಂದು ವೇಳೆ ಲಾಕರ್ ಜಂಟಿ ಸಹಿ ಹೊಂದಿದ್ದರೆ ಆಗ ಅದರಲ್ಲಿ ಬದುಕುಳಿದವರು ಮತ್ತು ನಾಮಿನಿ ಜಂಟಿಯಾಗಿ ಲಾಕರ್ ಪ್ರವೇಶ ಮಾಡಬಹುದಾಗಿದೆ.