Advertisement

ಗ್ರಾಮೀಣ ಭಾಗದಲ್ಲಿ ಅಂಚೆ ಕಚೇರಿಯೇ ಬ್ಯಾಂಕ್‌!

01:48 AM Jan 07, 2021 | Team Udayavani |

ಮಂಗಳೂರು: ಗ್ರಾಮೀಣ ಭಾಗದಲ್ಲಿರುವವರು ಇತರರ ಬ್ಯಾಂಕ್‌ ಖಾತೆಗೆ ಹಣ ಕಳುಹಿಸಬೇಕಾದರೆ, ತಮ್ಮ ಊರಿನಿಂದ ಕಿಲೋಮೀಟರ್‌ ದೂರದಲ್ಲಿರುವ ಬ್ಯಾಂಕ್‌ಗೆ ಹೋಗಿ ಹಣ ಪಾವತಿ ಮಾಡುವ ಪರಿಸ್ಥಿತಿಯಿದೆ. ಆದರೆ, ಇನ್ನು ಮುಂದೆ ಇಂತಹ ಸಮಸ್ಯೆಯಿಲ್ಲ; ಯಾಕೆಂದರೆ ಇನ್ನು ಅವರು ಅಂಚೆ ಕಚೇರಿಯ ಮೂಲಕವೇ ದೇಶದ ಯಾವುದೇ ಭಾಗದಲ್ಲಿರುವ ವ್ಯಕ್ತಿಯ ಬ್ಯಾಂಕ್‌ ಖಾತೆಗೇ ನೇರವಾಗಿ ಹಣ ವರ್ಗಾವಣೆ ಮಾಡಲು ಅವಕಾಶವಿದೆ!

Advertisement

ಭಾರತೀಯ ಅಂಚೆ ಇಲಾಖೆಯು ಇಂಡಿಯಾ ಪೋಸ್ಟ್‌ ಪೇಮೆಂಟ್ಸ್‌ ಬ್ಯಾಂಕ್‌ ಮೂಲಕ ಯಾವುದೇ ಬ್ಯಾಂಕ್‌ ಖಾತೆಗೆ ಹಣ ವರ್ಗಾವಣೆ ಮಾಡುವ ಮಹತ್ವದ ಕಾರ್ಯಕ್ಕೆ ಮುಂದಾಗಿದೆ. ಹೀಗಾಗಿ ಗ್ರಾಮೀಣ ಭಾಗದಲ್ಲಿರುವ ಅಂಚೆ ಕಚೇರಿಯು ಬ್ಯಾಂಕ್‌ ಆಗಿ ಕೆಲಸ ಮಾಡಲಿದೆ.

ಡಿಜಿಟಲ್‌ ವ್ಯವಹಾರಕ್ಕೆ ಒಗ್ಗಿಕೊಳ್ಳದ ಕೆಲವು ಗ್ರಾಮೀಣ ಭಾಗದ ಜನರಿಗೆ ಈ ಯೋಜನೆ ಉಪಯೋಗವಾಗಲಿದೆ. ಬ್ಯಾಂಕ್‌-ಅಂಚೆ ಕಚೇರಿಯಲ್ಲಿ ಖಾತೆ ಹೊಂದಿಲ್ಲವಾದರೂ ಅವರು ಮೊಬೈಲ್‌ ಸಂಖ್ಯೆಯ ಮೂಲಕವೇ ಅಂಚೆ ಇಲಾಖೆ/ಪೋಸ್ಟ್‌ ಮ್ಯಾನ್‌ ಮೂಲಕ ಹಣ ವರ್ಗಾವಣೆ ಮಾಡಬಹುದು. ಇದಕ್ಕಾಗಿ ಯಾವುದೇ ಅರ್ಜಿ ಫಾರಂ ತುಂಬಿಸಬೇಕಾಗಿಲ್ಲ. ಹೊರರಾಜ್ಯದಿಂದ ಕೆಲಸಕ್ಕಾಗಿ ಬಂದವರು ಅಥವಾ ಹೋದವರು ತಮ್ಮ ಮನೆಗೆ/ಇತರರಿಗೆ ಹತ್ತಿರದ ಅಂಚೆ ಇಲಾಖೆಯಿಂದಲೇ ಹಣ ಕಳುಹಿಸಬಹುದು. ಈ ಮೂಲಕ ಹಣ ಪಾವತಿಗಾಗಿ ಕಿಲೋಮೀಟರ್‌ ನಡೆದು, ಬ್ಯಾಂಕ್‌ಗಳಲ್ಲಿ ಕ್ಯೂ ನಿಲ್ಲಬೇಕಿಲ್ಲ. ದೇಶದ ಯಾವುದೇ ಬ್ಯಾಂಕಿಗೆ ಹಣ ವರ್ಗಾವಣೆ ಮಾಡಲು ಸಾಧ್ಯ. ಒಂದು ನಿಮಿಷದಲ್ಲಿ ಹಣ ವರ್ಗಾವಣೆ ಆಗಲಿದ್ದು ಹಣ ಕಳುಹಿಸಿದ ಪ್ರತೀ ವ್ಯವಹಾರವು ಎಸ್‌ಎಂಎಸ್‌ ಮೂಲಕ ದೃಢೀಕರಣವಾಗುತ್ತದೆ.

1 ಲಕ್ಷ ರೂ. ವರೆಗೂ ಅವಕಾಶ!
ಕೇವಲ ಮೊಬೈಲ್‌ ಸಂಖ್ಯೆ ನೀಡಿ ಒಂದು ಸಲಕ್ಕೆ ಗರಿಷ್ಠ 5,000 ರೂ. ಹಾಗೂ ತಿಂಗಳಿಗೆ ಗರಿಷ್ಠ 25 ಸಾವಿರ ರೂ. ಹಣ ಕಳುಹಿಸಲು ಅವಕಾಶವಿದೆ. ಒಂದು ವೇಳೆ ಆಧಾರ್‌ ಹಾಗೂ ಪಾನ್‌ ಸಂಖ್ಯೆ ನೀಡಿದರೆ ಸಾಕು ಒಂದು ಸಲಕ್ಕೆ 49,999 ರೂ. ಹಾಗೂ ತಿಂಗಳಿಗೆ 1 ಲಕ್ಷ ರೂ. ಹಣವನ್ನು ಕಳುಹಿಸಲು ಅವಕಾಶವಿದೆ. 5,000 ರೂ. ಪಾವತಿಸುವುದಾದರೆ 50 ರೂ. ಶುಲ್ಕವಿರಲಿದೆ. ಅಂದರೆ ಕೇವಲ ಶೇ.1ರಷ್ಟು ಶುಲ್ಕ. ಕನಿಷ್ಠ ಶುಲ್ಕ 10 ರೂ. ಇರಲಿದೆ. ಸುರಕ್ಷಿತ, ಕ್ಷಿಪ್ರ ಹಣ ವರ್ಗಾವಣೆ ಇಲ್ಲಿರಲಿದೆ.

ಯಾರಿಗೆ ಲಾಭ?
ಅಂಚೆ ಕಚೇರಿ-ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿಲ್ಲದವರಿಗೆ, ಉದ್ಯೋಗಕ್ಕಾಗಿ ಊರಿನಿಂದ ಊರಿಗೆ ಸಂಚರಿಸುತ್ತಿರುವವರಿಗೆ, ಕಾರ್ಮಿಕರು, ಹೊರ ಜಿಲ್ಲೆ-ರಾಜ್ಯದಲ್ಲಿರುವ ವಿದ್ಯಾರ್ಥಿಗಳ ಪೋಷಕರಿಗೆ, ಕಿರಾಣಿ ಅಂಗಡಿ ವರ್ತಕರಿಗೆ, ಸಾಮಾಗ್ರಿಗಳ ಸರಬರಾಜಿಗಾಗಿ ಮಾಡಬೇಕಾದ ಪಾವತಿಗಳಿಗೆ ಈ ವ್ಯವಸ್ಥೆ ವರದಾನವಾಗಲಿದೆ. ಅಂಚೆ ಕಚೇರಿ ಪ್ರತೀ ಶನಿವಾರ ತೆರೆದಿರುವುದರಿಂದ ಗ್ರಾಹಕರಿಗೆ ಅನುಕೂಲವಾಗಲಿದೆ.

Advertisement

“ಒಂದು ನಿಮಿಷದಲ್ಲಿ ಹಣ ವರ್ಗಾವಣೆ’
ದೇಶದ ಯಾವುದೇ ಬ್ಯಾಂಕಿನ ಖಾತೆಗೆ ಹಣ ಕಳುಹಿಸಲು ಅಂಚೆ ಕಚೇರಿಯು ಇದೀಗ ಮಹತ್ತರ ಕಾರ್ಯಕ್ಕೆ ಮುಂದಾಗಿದೆ. ಮನೆಗೆ ಬರುವ ಪೋಸ್ಟ್‌ಮ್ಯಾನ್‌ ಅಥವಾ ಅಂಚೆ ಕಚೇರಿಯಲ್ಲಿ ಹಣ ನೀಡಿ, ಖಾತೆದಾರನ ಅಕೌಂಟ್‌ ನಂಬರ್‌, ಐಎಫ್‌ಎಸ್‌ಸಿ ಕೋಡ್‌ ಮಾತ್ರ ನೀಡಿದರೆ ಒಂದು ನಿಮಿಷದಲ್ಲಿ ಹಣ ವರ್ಗಾವಣೆ ಆಗುತ್ತದೆ. ಹಣ ಕಳುಹಿಸುವವರ ಮೊಬೈಲ್‌ಗೆ ಈ ಬಗ್ಗೆ ವ್ಯವಹಾರವು ಎಸ್‌ಎಂಎಸ್‌ ಮೂಲಕ ದೃಢೀಕರಣವಾಗುತ್ತದೆ.
-ಶ್ರೀಹರ್ಷ, ಹಿರಿಯ ಅಂಚೆ ಅಧೀಕ್ಷಕರು, ಮಂಗಳೂರು

ಇಲಾಖಾ ಅಂಚೆ ಕಚೇರಿಗಳು -ಶಾಖಾ ಅಂಚೆ ಕಚೇರಿ
ಕರ್ನಾಟಕ ವೃತ್ತ: 1701 ಶಾಖಾ ಅಂಚೆ ಕಚೇರಿ: 7933
ಮಂಗಳೂರು ವಿಭಾಗ: 53 ಶಾಖಾ ಅಂಚೆ ಕಚೇರಿ: 96
ಪುತ್ತೂರು ವಿಭಾಗ: 72 ಶಾಖಾ ಅಂಚೆ ಕಚೇರಿ: 321
ಉಡುಪಿ ವಿಭಾಗ: 62 ಶಾಖಾ ಅಂಚೆ ಕಚೇರಿ: 200

Advertisement

Udayavani is now on Telegram. Click here to join our channel and stay updated with the latest news.

Next