ಹೊಸದಿಲ್ಲಿ : ಸಾರ್ವಜನಿಕ ರಂಗದ ಬ್ಯಾಂಕುಗಳು ಇಂದು ಮಂಗಳವಾರ ತಮ್ಮ ಒಂದು ದಿನದ ದೇಶವ್ಯಾಪಿ ಮುಷ್ಕರವನ್ನು ನಡೆಸುತ್ತಿದ್ದಾರೆ. ಹಾಗಾಗಿ ಬ್ಯಾಂಕಿಂಗ್ ಸೇವೆ ದೇಶಾದ್ಯಂತ ಬಾಧಿತವಾಗಿದೆ. ಬ್ಯಾಂಕ್ ಶಾಖೆಗಳು ಒಂದೋ ಮುಚ್ಚಿವೆ ಇಲ್ಲ ತಮ್ಮ ದೈನಂದಿನ ಸೇವಾ ಕಾರ್ಯಗಳನ್ನು ನಿರ್ವಹಿಸುತ್ತಿಲ್ಲ.
ಬ್ಯಾಂಕುಗಳ ಹೆಚ್ಚುತ್ತಿರುವ ವಸೂಲಾಗದ ಸಾಲಗಳ ಬೃಹತ್ ಮೊತ್ತಕ್ಕೆ ಉನ್ನತ ಕಾರ್ಯನಿರ್ವಹಣಾಧಿಕಾರಿಗಳನ್ನು ಉತ್ತರದಾಯಿ ಮಾಡಬೇಕು ಎನ್ನುವುದು ಸೇರಿದಂತೆ ಇತರ ಹಲವು ಬೇಡಿಕೆಗಳನ್ನು ಆಗ್ರಹಿಸಿ ಸಾರ್ವಜನಿಕ ರಂಗದ ಬ್ಯಾಂಕುಗಳ ನೌಕರರು, ಅಧಿಕಾರಿಗಳು ಇಂದು ಮುಷ್ಕರ ನಡೆಸುತ್ತಿದ್ದಾರೆ.
ಮುಷ್ಕರಿದಿಂದಾಗಿ ಶಾಖೆಗಳಲ್ಲಿ ಮಾಡಲಾಗುವ ನಗದು ಠೇವಣಿ, ನಗದು ಹಿಂಪಡೆಯುವಿಕೆ, ಚೆಕ್ ವಟಾವಣೆಯೇ ಮುಂತಾದ ಪ್ರಮುಖ ಸೇವೆಗಳು ತೀವ್ರವಾಗಿ ಬಾಧಿತವಾಗಿವೆ. ಬ್ಯಾಂಕ್ ಯೂನಿಯನ್‌ಗಳ ಸಂಯುಕ್ತ ವೇದಿಕೆ (ಯುಎಫ್ಬಿಯು) ಇಂದಿನ ಮುಷ್ಕರಕ್ಕೆ ಕರೆ ನೀಡಿದೆ.
ಯುಎಫ್ಬಿಯು ಅಡಿಯಲ್ಲಿ 9 ಬ್ಯಾಂಕ್ ಯೂನಿಯನ್‌ಗಳು ಇವೆ. ಆದರೆ ಭಾರತೀಯ ಮಜ್ದೂರ್ ಸಂಘಕ್ಕೆ ಸಂಯೋಜಿತವಾಗಿರುವ ನ್ಯಾಶನಲ್ ಆರ್ಗನೈಸೇಶನ್ ಆಫ್ ಬ್ಯಾಂಕ್ ವರ್ಕರ್ ಮತ್ತು ನ್ಯಾಶನಲ್ ಆರ್ಗನೈಸೇಶನ್ ಆಫ್ ಬ್ಯಾಂಕ್ ಆಫೀಸರ್ – ಇವೆರಡು ಇಂದಿನ ಮುಷ್ಕರದಲ್ಲಿ ಭಾಗಿಯಾಗುತ್ತಿಲ್ಲ.
ಕೇಂದ್ರ ಸರಕಾರದ ಕಾರ್ಮಿಕ ಕಾನೂನು ಸುಧಾರಣೆ ಹಾಗೂ ಬ್ಯಾಂಕಿಂಗ್ ವಲಯದಲ್ಲಿನ ಖಾಯಂ ಉದ್ಯೋಗಗಳ ಹೊರ ಗುತ್ತಿಗೆ ಕ್ರಮವನ್ನು ಬ್ಯಾಂಕ್ ಯೂನಿಯನ್‌ಗಳು ವಿರೋಧಿಸುತ್ತಿವೆ.