Advertisement

ರಿವರ್ಸ್‌ ಗೇರ್‌ನಲ್ಲಿ ಓಡುತ್ತಿವೆಯೇ ಬ್ಯಾಂಕ್‌ ಶಾಖೆಗಳು?

03:00 PM Dec 08, 2017 | |

ತೀರಾ ಇತ್ತೀಚೆಗಿನವರೆಗೆ, ಸುಸ್ತಿಸಾಲ ಬ್ಯಾಂಕುಗಳ ನಿದ್ರೆಯನ್ನು ಕೆಡಿಸುವತನಕ, ಯಾವ ಬ್ಯಾಂಕೂ ನಷ್ಟ ಅನುಭವಿಸುತ್ತಿರುವ ಶಾಖೆಗಳನ್ನು ಮುಚ್ಚುವ, ಸ್ಥಳಾಂತರಿಸುವ  ಮತು ವಿಲೀನ ಮಾಡುವ ಚಿಂತನೆ ಮಾಡಿರಲಿಲ್ಲ. ಸಾಲ ವಸೂಲಿಯಾಗದಿರುವುದು, ಸುಸ್ತಿ ಸಾಲಕ್ಕೆ ಹೊಸ ಸೇರ್ಪಡೆಯಾಗುತ್ತಿರುವುದು ಮತ್ತು ಸಾಲ ನೀಡುವಿಕೆ ಮತ್ತು ಬೇಡಿಕೆಯಲ್ಲಿ ಏರಿಕೆ ಕಾಣದಿರುವುದು ಬ್ಯಾಂಕುಗಳನ್ನು ಈ ಚಿಂತನೆಗೆ ದೂಡಿವೆ.

Advertisement

ಒಂದು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌, ನಷ್ಟ ಅನುಭವಿಸುತ್ತಿರುವ ತನ್ನ ಸುಮಾರು 200-300 ಶಾಖೆಗಳನ್ನು ಮುಂದಿನ ಒಂದು ವರ್ಷದಲ್ಲಿ ಮುಚ್ಚಲು, ವಿಲೀನಗೊಳಿಸಲು ಅಥವಾ ಸ್ಥಳಾಂತರಿಸಲು ನಿರ್ಧರಿಸಿದೆ ಎಂಬ ಸುದ್ದಿ ಓದಿದ್ದೇವೆ. ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ಆರು ಶಾಖೆಗಳನ್ನು ಈಗಾಗಲೇ ಮುಚ್ಚಲಾಗಿದೆಯಂತೆ. ಬ್ಯಾಂಕನ್ನು ಬಲಯುತವಾಗಿ ಮಾಡುವ ಉದ್ದೇಶದಿಂದ ಈ ಬ್ಯಾಂಕ್‌ ಇಂಥ ಕ್ರಮವನ್ನು ತೆಗೆದುಕೊಳ್ಳುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಹಾಗೆಯೇ ಕಳೆದ ಆರು ತಿಂಗಳಲ್ಲಿ ಸುಮಾರು 928 ಎಟಿಎಂಗಳನ್ನು ಕೂಡಾ ಈ ಬ್ಯಾಂಕ್‌ ಮುಚ್ಚಿದೆಯಂತೆ. ಬ್ಯಾಂಕ್‌ ವ್ಯವಹಾರದಲ್ಲಿ ಡಿಜಿಟಲೀ ಕರಣ ಮತ್ತು ಟೆಕ್ನಾಲಜಿಯ ಬಳಕೆ ಹೆಚ್ಚಿದ್ದು, ಬ್ಯಾಂಕಿನ ಈ ಕ್ರಮದ ಹಿಂದಿನ ಕಾರಣವೆಂದು ಸಮಜಾಯಿಸಿ ನೀಡಲಾಗಿದೆ. ಈ ಮುಚ್ಚುವಿಕೆ, ವಿಲೀನ ಮತ್ತು ಸ್ಥಳಾಂತರ ಪ್ರಕ್ರಿಯೆಯನ್ನು  ಚುರುಕು ಗೊಳಿಸಲು, ಬ್ಯಾಂಕ್‌ನ ಹಿರಿಯ ಅಧಿಕಾರಿಗಳ ಸಮಿತಿಯೊಂದನ್ನು ನೇಮಿಸಿದ್ದು, ಅದು ನೀಲ ನಕ್ಷೆಯನ್ನು ತಯಾರಿಸುತ್ತಿದೆಯಂತೆ. ಇದು ಬ್ಯಾಂಕ್‌ನ ಶಾಖೆಗಳನ್ನು ತೆರೆಯುವ, ಸ್ಥಳಾಂತರ ಮಾಡುವ ಮತ್ತು ಮುಚ್ಚುವ ಸ್ವಾತಂತ್ರ್ಯ ನೀಡುವ ರಿಸರ್ವ್‌ ಬ್ಯಾಂಕ್‌ನ Banking Outlet Policy ಗೆ ಅನುಗುಣವಾಗಿದ್ದು, ಯಾವುದೇ ಹೊಸ ನಿರ್ದೇಶನ, ನೀತಿ ನಿಯಮಾವಳಿಯಿಂದ ಪ್ರೇರಕವಾಗಿ ದ್ದಲ್ಲವೆಂದು ಬ್ಯಾಂಕ್‌ ಹೇಳುತ್ತಿದೆ. ಈ ನಿಟ್ಟಿನಲ್ಲಿ ಬ್ಯಾಂಕ್‌ಗೆ ಪೂರ್ಣ ಸ್ವಾತಂರಿಸರ್ವ್‌ ಬ್ಯಾಂಕ್‌ವಿದ್ದು, ಗ್ರಾಮಾಂತರ ಶಾಖೆಗಳನ್ನು ಮುಚ್ಚುವಾಗ ಮತ್ತು ಸೆಮಿ ಅರ್ಬನ್‌ ಪ್ರದೇಶದಲ್ಲಿ ಒಂದೇ ಶಾಖೆ ಇದ್ದು, ಅದನ್ನು ಮುಚ್ಚುವಾಗ ಜಿಲ್ಲಾ ಸಲಹಾ ಸಮಿತಿ ಅಥವಾ ಜಿಲ್ಲಾ ಮಟ್ಟದ ರಿವ್ಯೂ ಕಮಿಟಿಯ ಒಪ್ಪಿಗೆ ಪಡೆಯಬೇಕಾಗುತ್ತದೆ.  

ನೀಡಿದ ಸಾಲ ವಸೂಲಾಗದೇ ಸುಸ್ತಿ ಸಾಲದ ಬವಣೆಯಿಂದ ಹೈರಾಣಾಗಿರುವ ಇನ್ನೂ ಕೆಲವು ಬ್ಯಾಂಕುಗಳು ಮುಂದಿನ ದಿನಗಳಲ್ಲಿ ಈ ಹಾದಿಯನ್ನು ಹಿಡಿದರೆ ಆಶ್ಚರ್ಯವಿಲ್ಲ. 1969ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ರಾಷ್ಟ್ರೀಕರಣದ ಮೂಲಕ ಬ್ಯಾಂಕ್‌ಗಳನ್ನು, ಬ್ಯಾಂಕಿಂಗ್‌ ಸೌಲಭ್ಯಗಳನ್ನು ಅರ್ಥಿಕ ವಾಗಿ ಮತ್ತು ಸಾಮಾಜಿಕವಾಗಿ ಕೆಳಸ್ತರದಲ್ಲಿದ್ದವರ ಮನೆ ಬಾಗಿಲಿಗೆ ತರುವವರೆಗೆ, ಕಮರ್ಷಿಯಲ್‌ ಬ್ಯಾಂಕಿಂಗ್‌ ಲೇಬಲ್‌ ತೆಗೆದು ಸಾಮಾಜಿಕ ಬ್ಯಾಂಕಿಂಗ್‌ ಹಣೆಪಟ್ಟಿ ಹಚ್ಚುವವರೆಗೆ,  ಬ್ಯಾಂಕ್‌ಗಳು ತಮ್ಮ ಶಾಖಾ ವಿಸ್ತರಣೆಯಲ್ಲಿ ಮಡಿವಂತಿಕೆ ತೋರಿಸುತ್ತಿದ್ದವು ಮತ್ತು ಲಾಭವೇ ಏಕ ಮಾತ್ರ ಮಾನದಂಡ ವಾಗಿತ್ತು. ಬ್ಯಾಂಕ್‌ ರಾಷ್ಟ್ರೀಕರಣದ ನಂತರ  ಬ್ಯಾಂಕುಗಳು ಮೈ ಛಳಿ ಬಿಟ್ಟು  ಶಾಖಾ ವಿಸ್ತರಣೆ ಕೈಗೊಂಡವು. ಮೂರು ಗ್ರಾಮಾಂತರ ಶಾಖೆಗಳನ್ನು ತೆರೆದರೆ, ನಗರ ಪಟ್ಟಣಗಳಲ್ಲಿ ಒಂದು  ಶಾಖೆಯನ್ನು ತೆರೆಯಬಹುದು ಎನ್ನುವ  ನಿಯಮದಡಿ ಹಳ್ಳಿ- ಮೂಲೆಗಳಲ್ಲಿ, ಕನಿಷ್ಟ ಮೂಲಭೂತ ಸೌಕರ್ಯಗಳು ಇಲ್ಲದ ಸ್ಥಳಗಳಲ್ಲೂ ಬ್ಯಾಂಕ್‌ ಶಾಖೆಗಳು ತೆರೆಯಲ್ಪಟ್ಟವು. ಸಾಮಾನ್ಯವಾಗಿ ಬ್ಯಾಂಕ್‌ ಶಾಖೆಗಳನ್ನು ತೆರೆಯುವಾಗ  ಕಡ್ಡಾಯವಾಗಿ ಪರಿಗಣಿಸುವ viability, feasibility ಮತ್ತು ಲಾಭ ನಷ್ಟಗಳನ್ನು ಹಿನ್ನೆಲೆಗೆ ದೂಡಿ, ಪ್ರತಿಯೊಬ್ಬರೂ ಬ್ಯಾಂಕಿಂಗ್‌ ಸೇವೆ ಮತ್ತು ಸೌಲಭ್ಯಗಳನ್ನು ಪಡೆಯಬೇಕು ಎನ್ನುವುದು ಮಂತ್ರವಾಗಿತ್ತು.

ತೊಂಬತ್ತರ ದಶಕದಲ್ಲಿ, ಆಗಿನ ಪ್ರಧಾನಿ ನರಸಿಂಹರಾವ್‌ ಮತ್ತು ವಿತ್ತ ಸಚಿವ ಮನಮೋಹನ ಸಿಂಗ್‌ ದೇಶವನ್ನು ಜಾಗತೀಕರಣ, ಉದಾರೀಕರಣ ಮತ್ತು ಅರ್ಥಿಕ ಸುಧಾರಣೆ ಯತ್ತು ಮುಖ ಮಾಡಿಸಿದಾಗ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಭಾರೀ  ಬದಲಾವಣೆ ಎದುರಾಯಿತು. ಅಲ್ಲಿಯವರೆಗೆ ಬ್ಯಾಂಕ್‌ ಶಾಖಾ ವಿಸ್ತರಣೆಗೆ ಇದ್ದ ಕೆಲವು ನಿರ್ಬಂಧಗಳನ್ನು ಸಡಿಲಗೊಳಿಸಿದ್ದು, ಬ್ಯಾಂಕುಗಳು ಈ ಅವಕಾಶವನ್ನು ಬಳಸಿಕೊಂಡು ಲಂಗು ಲಗಾಮು ಇಲ್ಲದೇ ಶಾಖಾ ವಿಸ್ತರಣೆ ಕೈಗೊಂಡವು. ಈ ಧಾವಂತದಲ್ಲಿ ಅವು, ಬ್ಯಾಂಕುಗಳು ಇರುವುದೇ ಲಾಭಗಳಿಸಲು ಎನ್ನುವ ಅರ್ಥಿಕ ಸುಧಾರಣೆಯ ಧ್ಯೇಯ ಮತ್ತು  ಹೊಸ ಅಣತಿಯಂತೆ, ಸಾಮಾಜಿಕ ಬ್ಯಾಂಕಿಂಗ್‌ ನ ಪರಿಕಲ್ಪನೆಯನ್ನು ನೇಪಥ್ಯಕ್ಕೆ ಸರಿಸಿ ಕಮರ್ಶಿಯಲ…  ಬ್ಯಾಂಕಿಂಗ್‌ಗೆ ಒತ್ತು ನೀಡುತ್ತಾ ಬ್ಯಾಂಕ್‌ ಶಾಖೆಗಳ ವಿಸ್ತರಣೆ ಮಾಡಿದವು. ಬ್ಯಾಂಕುಗಳು ಒಂದು ರೀತಿಯಲ್ಲಿ ಪಂಜರದಿಂದ ಹೊರಬಿದ್ದ ಹಕ್ಕಿಯಂತೆ ವರ್ತಿಸಿ, ಅವುಗಳು ನಿಜವಾದ ಅವಶ್ಯಕತೆ ಇರುವ ಪ್ರದೇಶಕ್ಕಿಂತ ಹೆಚ್ಚಾಗಿ, ಹೆಚ್ಚು ಬಿಜಿನೆಸ್‌ ಕುದುರಿಸ ಬಹುದಾದ ಸ್ಥಳಗಳಲ್ಲಿ, ಈಗಾಗಲೇ  ಇರುವ ಶಾಖೆಗಳ ದಟ್ಟನೆಯನ್ನು ನಿರ್ಲಕ್ಷಿಸಿ ಶಾಖೆಗಳನ್ನು ತೆರೆದವು. ಬ್ಯಾಂಕುಗಳಲ್ಲಿ ಒಂದು ಶಾಖೆಯನ್ನು ತೆರೆಯುವುದು ದಿನಬೆಳಗಾಗುವುದ ರೊಳಗಾಗಿ ದಿಢೀರ್‌ ಎಂದು ತೆಗೆದುಕೊಳ್ಳುವ ನಿರ್ಧಾರವಲ್ಲ. ಇದರ ಪ್ರಕ್ರಿಯೆ ಆರಂಭವಾಗುವುದು ಬ್ಯಾಂಕಿನವರು ನಡೆಸುವ ಮಾರುಕಟ್ಟೆ ಸಮೀಕ್ಷೆಯಿಂದ. ಇದರಲ್ಲಿ ಶಾಖೆ ತೆರೆಯಲು ಉದ್ದೇಶಿಸಿರುವ ಪ್ರದೇಶದಲ್ಲಿ ಈಗಾಗಲೇ ಇರುವ ಇತರ ಬ್ಯಾಂಕ್‌ ಶಾಖೆಗಳು, ಅವುಗಳ ಬಿಜಿನೆಸ್‌ ಪ್ರಮಾಣ, ಅಲ್ಲಿನ ಮುಖ್ಯ ಬಿಜಿನೆಸ್‌, ಉದ್ಯಮ, ವ್ಯವಹಾರ, ಶಿಕ್ಷಣ ಸಂಸ್ಥೆಗಳು, ಅಸ್ಪತ್ರೆಗಳು, ಪ್ರವಾಸೋದ್ಯಮ ಮಾಹಿತಿ, ಕೃಷಿ ಪ್ರದೇಶವಾದರೆ ಅದರ ಬಗೆಗೆ ಮಾಹಿತಿ, ಮುಂದಿನ ದಿನಗಳಲ್ಲಿ ಆ ಪ್ರದೇಶದಲ್ಲಿ ಆಗಬಹುದಾದ ಅರ್ಥಿಕ ಚಟುವಟಿಕೆಗಳ ಏರು-ಪೇರುಗಳ ಸಾಧ್ಯತೆ, ಅಕಸ್ಮಾತ್‌ ಬ್ಯಾಂಕ್‌ ಶಾಖೆ ತೆರೆದರೆ ದೊರಕಬಹುದಾದ ಬಿಜಿನೆಸ್‌ ಪ್ರಮಾಣ ಮುಂತಾದವುಗಳು ಈ ಸಮೀಕ್ಷೆಯಲ್ಲಿದ್ದು, ಬ್ಯಾಂಕಿನ ಉನ್ನತ ಅಧಿಕಾರಿಗಳು ಈ ಸಮೀಕ್ಷೆಯನ್ನು ಪರಾಮರ್ಶಿಸಿ  ನಿರ್ಣಯ ತೆಗೆದುಕೊಳ್ಳುತ್ತಾರೆ. ಆದರೆ, ಕೆಲವು  ಪ್ರದೇಶಗಳಲ್ಲಿರುವ ಬ್ಯಾಂಕ್‌ ಶಾಖೆಗಳ ದಟ್ಟನೆಯನ್ನು ನೋಡಿದರೆ, ಈ ಮಾನ ದಂಡವನ್ನು letter and spiritನಲ್ಲಿ ಬಳಸಿದಂತೆ ಕಾಣುವುದಿಲ್ಲ. ಒಂದು ಪ್ರದೇಶದಲ್ಲಿ ಕೆಲವು ಬ್ಯಾಂಕ್‌ ಶಾಖೆಗಳು ಮಾಡುವ ಬಿಜಿನೆಸ್‌ ನೋಡಿ ಅಥವಾ ಕೆಲವು ಪ್ರದೇಶಗಳನ್ನು ನೋಡಿ, ಇಲ್ಲಿ ಕೂಡಾ ನಮ್ಮ ಬ್ಯಾಂಕಿನ ಶಾಖೆ ಇರಲಿ ಎನ್ನುವ ಧೋರಣೆ ಇದ್ದಂತೆ ಕಾಣುತ್ತಿದೆ. ಹಾಗೆಯೇ ಎಟಿಎಂ ವಿಚಾರದಲ್ಲೂ ಇದೇ ಹಾಡು. ಒಂದು ಎಟಿಎಂ break even  ಆಗಲು ತಿಂಗಳಿಗೆ ಕನಿಷ್ಟ 6000 ಹಿಟ್ಸ್‌ ಆಗಬೇಕು ಎನ್ನುವುದನ್ನು ನಿರ್ಲಕ್ಷಿಸಿ ಮನ ಬಂದಂತೆ ಎಟಿಎಂ ಸ್ಥಾಪಿಸಲಾಯಿತು. ಲಾಭ-ನಷ್ಟ ಮತ್ತು ವ್ಯವಹಾರವನ್ನು ಲೆಕ್ಕಿಸದೇ ಹೀಗೆ ಮಾಡಲಾಗುತ್ತಿದೆ ಎಂದು ಕೇಳಿಬರುತ್ತಿತ್ತು. ಬ್ಯಾಂಕು ಗಳ ಇಂದಿನ ಸ್ಥಿತಿ-ಗತಿಗೆ ವ್ಯವಹಾರ ಮತ್ತು ಲಾಭದ  ಮಾನದಂಡವನ್ನು ಬದಿಗೊತ್ತಿ ಒಂದು ಕಿಮಿ ಉದ್ದದ ರಸ್ತೆಯಲ್ಲಿ ಡಝನ್‌ ಬ್ಯಾಂಕ್‌ ಶಾಖೆಗಳು ಇರುವುದೂ ಒಂದು ಕಾರಣ ಎಂದು ವಿತ್ತ ಸಚಿವ ಅರುಣ್‌ ಜೇಟ್ಲಿ ಒಮ್ಮೆ  ಸೂಚ್ಯವಾಗಿ ಮತ್ತು ಅಷ್ಟೇ ಮಾರ್ಮಿಕವಾಗಿ ಹೇಳಿದ್ದರು. ವಿತ್ತ ಸಚಿವರ ಈ ಕಾಮೆಂಟ್ಸ್‌ ನಲ್ಲಿ ಅರ್ಥವಿಲ್ಲದಿಲ್ಲ. ವಿಚಿತ್ರವೆಂದರೆ ಪಟ್ಟಣ ಮತ್ತು ನಗರಗಳಲ್ಲಿ ಶಾಖೆಗಳ ದಟ್ಟಣೆ ಕಂಡುಬಂದರೆ, ಗ್ರಾಮಾಂತರ ಪ್ರದೇಶಗಳಲ್ಲಿ, ಕೊರತೆಯ ಪರಿಸ್ಥಿತಿ. ಐದು ಸಾವಿರಕ್ಕೂ ಮೇಲ್ಪಟ್ಟು ಜನಸಂಖ್ಯೆ ಇರುವ ಪ್ರತಿ ಹಳ್ಳಿಯ ಲ್ಲಿಯೂ ಮಾರ್ಚ್‌ 31,  2017ರೊಳಗೆ ಬ್ಯಾಂಕ್‌ ಶಾಖೆಗಳನ್ನು ತೆರೆಯಬೇಕು ಎನ್ನುವ ರಿಸರ್ವ್‌ ಬ್ಯಾಂಕ್‌ನ ಸುತ್ತೋಲೆ  ಮತ್ತು ನಿರ್ದೇಶನದ ಹೊರತಾಗಿಯೂ, ಎಷ್ಟೋ ಹಳ್ಳಿಗಳಲ್ಲಿ ಬ್ಯಾಂಕಿಂಗ್‌ ಸೌಲಭ್ಯಕ್ಕಾಗಿ ಹತ್ತಾರು ಕಿಮಿ ನಡೆದಾಡಬೇಕಾದ ಪರಿಸ್ಥಿತಿ ಇನ್ನೂ ಇದೆ.

 ಈ ಸ್ಥಿತಿಗೆ ಬ್ಯಾಂಕುಗಳಷ್ಟೇ ಸರ್ಕಾರದ ಗೊಂದಲಮಯ ನೀತಿಯೂ ಕಾರಣ. ಬ್ಯಾಂಕುಗಳ ರಾಷ್ಟ್ರೀಕರಣದವರೆಗೆ ಅವು ಪಕ್ಕಾ ಕಮರ್ಶಿಲ್‌ ಆಗಿದ್ದು, ಬ್ಯಾಂಕುಗಳು  ಇರುವುದೇ ಲಾಭಗಳಿಸಲು ಎನ್ನುವುದು ಮುಖ್ಯ ಧ್ಯೇಯವಾಗಿತ್ತು. ರಾಷ್ಟ್ರೀಕರಣ ಈ ಧ್ಯೇಯದಲ್ಲಿ ಲಾಭವನ್ನು ಹಿನ್ನೆಲೆಗೆ ತಳ್ಳಿ ಸಾಮಾಜಿಕ ಬ್ಯಾಂಕನ್ನು ಮುನ್ನೆಲೆಗೆ ತಂದಿತು. ತೊಂಬತ್ತರ ದಶಕದವರೆಗೆ ಇದು ಮುಂದು ವರೆದಿದ್ದು, ಅರ್ಥಿಕ ಸುಧಾರಣೆ ಇದಕ್ಕೆ ಬ್ರೇಕ್‌ ಹಾಕಿ, ಬ್ಯಾಂಕುಗಳು ಇರುವುದು ಲಾಭಗಳಿಸಲು, ಅದು ಸಾಧ್ಯವಾಗದಿದ್ದರೆ ಬ್ಯಾಂಕನ್ನು ಮುಚ್ಚಬೇಕು ಎನ್ನುವ ಮಾಜಿ  ಹಣಕಾಸು ಕಾರ್ಯದರ್ಶಿ ಯೊಬ್ಬರ ಅಭಿಪ್ರಾಯ ತೂಕ ಕಂಡುಕೊಂಡಿತು. ಆದರೂ ತೀರಾ ಇತ್ತೀಚೆಗಿನವರೆಗೆ, ಸುಸ್ತಿಸಾಲ ಬ್ಯಾಂಕುಗಳ ನಿದ್ರೆಯನ್ನು ಕೆಡಿಸು ವತನಕ, ಯಾವ ಬ್ಯಾಂಕೂ ನಷ್ಟ ಅನುಭವಿಸುತ್ತಿರುವ ಶಾಖೆಗಳನ್ನು ಮುಚ್ಚುವ, ಸ್ಥಳಾಂತರಿಸುವ  ಮತು ವಿಲೀನ ಮಾಡುವ ಚಿಂತನೆ ಮಾಡಿರಲಿಲ್ಲ. ಸಾಲ ವಸೂಲಿಯಾಗದಿರುವುದು, ಸುಸ್ತಿ ಸಾಲಕ್ಕೆ ಹೊಸ ಸೇರ್ಪಡೆಯಾಗುತ್ತಿರುವುದು ಮತ್ತು ಸಾಲ ನೀಡುವಿಕೆ ಮತ್ತು ಬೇಡಿಕೆಯಲ್ಲಿ ಏರಿಕೆ ಕಾಣದಿರುವುದು ಬ್ಯಾಂಕುಗಳನ್ನು ಈ ಚಿಂತನೆಗೆ ದೂಡಿವೆ. ಸುಸ್ತಿ ಸಾಲದ ವಸೂಲಿ ಯಲ್ಲಿ ಬ್ಯಾಂಕುಗಳು ತೆಗೆದುಕೊಳ್ಳುತ್ತಿರುವ ಕ್ರಮಗಳು ನಿರೀಕ್ಷಿತ ಫಲ ಕೊಡದಿರುವುದು, ಬ್ಯಾಂಕುಗಳು ತಮ್ಮ ನಿರ್ವಹಣಾ ವೆಚ್ಚವನ್ನು ಕಡಿತಮಾಡುವ ಅನಿವಾರ್ಯತೆ ಕಾಣುತ್ತಿದ್ದು, ಇದರ ಮೊದಲ ಹೆಜ್ಜೆಯಾಗಿ ಶಾಖೆಗಳ ಸಂಖ್ಯೆಯನ್ನು  ಕಡಿತ ಮಾಡುತ್ತಿವೆ ಎಂದು ವಿಶ್ಲೇಷಕರು ಭಾಷ್ಯ ಬರೆಯುತ್ತಿದ್ದಾರೆ. ಬ್ಯಾಂಕುಗಳು ಶಾಖಾ ವಿಸ್ತರಣೆ ದೃಷ್ಟಿಯಲ್ಲಿ ಸದಾ ಟಾಪ್‌ ಗೇರ್‌ನಲ್ಲಿ ಇರುತ್ತಿದ್ದು, ಈ ಹೊಸ  ಬೆಳವಣಿಗೆಯನ್ನು ರಿವರ್ಸ ಗೇರ್‌ ಎಂದು ಅರ್ಥಿಕ ತಜ್ಞರು ಬಣ್ಣಿಸುತ್ತಿ¨ªಾರೆ.

Advertisement

ರಮಾನಂದ ಶರ್ಮಾ

Advertisement

Udayavani is now on Telegram. Click here to join our channel and stay updated with the latest news.

Next