Advertisement

ಕೇಂದ್ರ ಸರ್ಕಾರದಿಂದ ಬ್ಯಾಂಕ್‌ ವಿರೋಧಿ ನೀತಿ

03:09 PM Aug 23, 2017 | Team Udayavani |

ಚಿತ್ರದುರ್ಗ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಬ್ಯಾಂಕ್‌ ನೌಕರರು ಹಾಗೂ ಸಿಬ್ಬಂದಿ, ಬ್ಯಾಂಕ್‌ ನೌಕರರ ಸಂಘಟನೆಗಳ ಒಕ್ಕೂಟ ಮತ್ತು ಕೆನರಾ ಬ್ಯಾಂಕ್‌ ಸ್ಟಾಪ್‌ ಫೆಡರೇಶನ್‌ ನೇತೃತ್ವದಲ್ಲಿ ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

Advertisement

ಬ್ಯಾಂಕ್‌ಗಳ ನೌಕರರು/ಅಧಿಕಾರಿಗಳು ಭಾರತಿಯ ಸ್ಟೇಟ್‌ ಬ್ಯಾಂಕ್‌ (ಹಳೆ ಮೈಸೂರು ಬ್ಯಾಂಕ್‌) ಅವರಣದಲ್ಲಿ  ಸಮಾವೇಶಗೊಂಡು ಕೇಂದ್ರ ಸರ್ಕಾರದ ಬ್ಯಾಂಕ್‌ ವಿರೋಧಿ  ನೀತಿಗೆ ಆಕ್ರೋಶ ವ್ಯಕ್ತಪಡಿಸಿದರು. ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳನ್ನು ಸರ್ಕಾರದ ಜನಪ್ರಿಯ ಸ್ಕೀಮ್‌ಗಳ ಮಾರ್ಕೆಟಿಂಗ್‌ ಅಫಿಸುಗಳನ್ನಾಗಿ ಮಾಡಿದೆ ಎಂದು ದೂರಿದರು. ಜನ್‌ಧನ್‌ ಯೋಜನೆ, ಪ್ರಧಾನಮಂತ್ರಿ ಸುರಕ್ಷ ಬಿಮಾ ಯೋಜನೆ, ಜೀವನ್‌ ಜ್ಯೋತಿ ಬೀಮಾ ಯೋಜನೆ, ಮುದ್ರಾ ಯೋಜನೆ, ಸುಕನ್ಯಾ ಸಮೃದ್ಧಿ ಯೋಜನೆ, ಆವಾಸ್‌ ಯೋಜನೆ, ಅಟಲ್‌ ಪಿಂಚಣಿ ಯೋಜನೆ, ನೋಟುಗಳ ರದ್ದತಿ, ಡಿಜಿಟಲ್‌ ಇಂಡಿಯಾ ಕಾರ್ಯಕ್ರಮ, ಆಧಾರ್‌ ಕಾರ್ಡ ಜೋಡಣೆ, ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳನ್ನು ವಿಲೀನಗೊಳಿಸುವುದು ಹಾಗೂ ದೊಡ್ಡ ಬಂಡವಾಳಗಾರರಿಗೆ ಹೊಸದಾಗಿ ಬ್ಯಾಂಕುಗಳನ್ನು ಸ್ಥಾಪಿಸಲು ಪರವಾನಗಿ ಸೇರಿದಂತೆ ಒಂದಾದ ಮೇಲೆ ಇನ್ನೊಂದರಂತೆ ತಪ್ಪು ಮಾಡಿ ಬ್ಯಾಂಕುಗಳನ್ನು ಹಾಗೂ ಬ್ಯಾಂಕ್‌ ನೌಕರರನ್ನು ಸರ್ಕಾರ ಶೋಷಣೆ ಮಾಡುತ್ತಿದೆ ಎಂದು ಆರೋಪಿಸಿದರು. ಬ್ಯಾಂಕ್‌ಗಳಿಗೆ ಅಗತ್ಯವಿರುವ ಬಂಡವಾಳವನ್ನು ಬಜೆಟ್‌ ನಲ್ಲಿ ಘೋಷಿಸಿದ್ದರೂ ಅದನ್ನು ಬಿಡುಗಡೆ ಮಾಡದೆ ಸತಾಯಿಸುತ್ತಿರುವ ಕೇಂದ್ರ ಸರ್ಕಾರ ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳನ್ನು ಉಸಿರುಗಟ್ಟಿ ಸಾಯಿಸಿದೆ. ಬ್ಯಾಂಕ್‌ಗಳನ್ನು ದೊಡ್ಡ ಬಂಡವಾಳದಾರರ ತೆಕ್ಕೆಗೆ ಒಪ್ಪಿಸಲು ನಿರಂತರವಾಗಿ ಪ್ರಯತ್ನ ಮಾಡುತ್ತಲೇ ಇದೆ. ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳು ತನ್ನದೇ ಕೂಸು ಎಂಬುದನ್ನೇ ಕೇಂದ್ರ ಸರ್ಕಾರ ಮರೆತಿದೆ ಎಂದು ಕಿಡಿ ಕಾರಿದರು. 

10 ಬ್ಯಾಂಕುಗಳಲ್ಲಿ ಟ್ರೈ ಪಾಟೈìಟ್‌ (ಮೂರು ಪಕ್ಷಗಳನ್ನೊಳಗೊಂಡ) ಒಪ್ಪಂದವನ್ನು ಹೇರಿ ಅದಕ್ಕೆ ನೌಕರರು ಸಹಿ ಮಾಡಿದರೆ ಮಾತ್ರ ಬ್ಯಾಂಕುಗಳಿಗೆ ಬಂಡವಾಳ ಎಂಬ ಶರತ್ತನ್ನು ಹಾಕಿತು. ಆದರೂ ಕೇಂದ್ರ ಸರ್ಕಾರ ಅಗತ್ಯವಿರುವ ಬಂಡವಾಳ ನೀಡಿಲ್ಲ. ನೌಕರರಿಗೆ ಎಲ್‌ಎಫ್‌ಸಿ ಸೇರಿದಂತೆ ಹಲವು ಸೌಲಭ್ಯಗಳನ್ನು ಕಿತ್ತುಕೊಳ್ಳಲು ಬ್ಯಾಂಕ್‌ ಆಡಳಿತಗಳು ಪ್ರಯತ್ನಿಸುತ್ತಿವೆ ಎಂದು  ದೂರಿದರು. ಬ್ಯಾಂಕುಗಳಲ್ಲಿ ಎನ್‌ಪಿಎ ಸಾಲದ
ಮಟ್ಟ ತೀವ್ರಗತಿಯಲ್ಲಿ ಏರುತ್ತಿದ್ದು ಬ್ಯಾಂಕುಗಳ ಉಳಿಯುವಿಕೆಗೆ ಸವಾಲಾಗಿ ನಿಂತಿದೆ.  ಸುಸ್ತಿದಾರರ ವಿರುದ್ದ ಕ್ರಿಮಿನಲ್‌ ಕೇಸ್‌ ಜೊತೆಗೆ ಕಠಿಣ ಕ್ರಮ ಕೈಗೊಳ್ಳುವ ಬದಲು ಸರ್ಕಾರ ತೋರಿಕೆಯ ಹಲ್ಲಿಲ್ಲದ ಕಾನೂನುಗಳನ್ನು ತರುತ್ತಿದೆ. ಜನರ ಉಪಯೋಗಕ್ಕಾಗಿ ಇರುವ ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳು ದೇಶದ ಆಸ್ತಿ. ಠೇವಣಿ ಮೇಲಿನ ಬಡ್ಡಿದರವನ್ನು ಕಳೆದ ಮೂರೂವರೆ ವರ್ಷಗಳ ಅವಧಿಯಲ್ಲಿ ಸುಮಾರು ಶೇ.4ರಷ್ಟು ಇಳಿಸಿದ ಕೇಂದ್ರ ಸರ್ಕಾರ, ಬಂಡವಾಳಶಾಹಿಗಳಿಗೆ ಕಡಿಮೆ ಬಡ್ಡಿಯಲ್ಲಿ ಸಬ್ಸಿಡಿ ಸಮೇತ ಬ್ಯಾಂಕುಗಳಿಂದ ಸಾಲ ಕೊಡಿಸುತ್ತಿದೆ. ಇಷ್ಟಾದರೂ ದೊಡ್ಡ ಮೊತ್ತದ ಸಾಲ ಪಡೆದ ಬಂಡವಾಳಗಾರರು ಪಡೆದ ಸಾಲವನ್ನು ಉದ್ದೇಶಪೂರ್ವಕವಾಗಿ ವಾಪಸ್‌ ಮಾಡದೆ ಬ್ಯಾಂಕುಗಳಿಗೆ ಪಂಗನಾಮ ಹಾಕುತ್ತಾ ಅದೇ ದುಡ್ಡಿನಲ್ಲಿ ತಮ್ಮದೇ ಆದ ಹೊಸ ಬ್ಯಾಂಕುಗಳನ್ನು ತೆರೆಯುತ್ತಿರುವುದು ದುರಂತ ಎಂದರು.

ನೋಟು ಚಲಾವಣೆ ರದ್ದತಿ ಸಮಯದಲ್ಲಿ ಬ್ಯಾಂಕುಗಳಿಗೆ ಆದ ಖರ್ಚನ್ನು ಸರ್ಕಾರವೇ ಭರಿಸಬೇಕು. ಗ್ರಾಚ್ಯುಟಿ ಮಿತಿ ತೆಗೆದು ಹಾಕಬೇಕು. ಬ್ಯಾಂಕಿನ ವರ್ಕಮನ್‌ ಹಾಗೂ ಆಫಿಸರ್‌ ಡೈರೆಕ್ಟರ್‌ ಹುದ್ದೆಗಳಿಗೆ ಗುಪ್ತ ಮತದಾನದ ಮೂಲಕ ಮಾತ್ರ ನೇಮಕ ಮಾಡಬೇಕು ಎಂದು ಆಗ್ರಹಿಸಿದರು.

ಜೆ.ಎಸ್‌. ವಿಶ್ವನಾಥ್‌, ಭಾರತಿಯ ಸ್ಟೇಟ್‌ ಬ್ಯಾಂಕ್‌ನ ಸದಾಶಿವಪ್ಪ, ಶಿವರಾಜ್‌, ಪ್ರಶಾಂತ್‌, ವೀರೇಶ್‌, ನಿರಂಜನ್‌ಕುಮಾರ್‌, ದಿಲೀಪ್‌ ಕುಮಾರ್‌, ಈಶ್ವರಪ್ಪ, ಅರುಣ, ಶ್ರೀನಿವಾಸ ಶೆಟ್ಟಿ, ಸುಜಾತಾ ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next