Advertisement

ಕೋಟಿ ಭಾರತೀಯರ ಬ್ಯಾಂಕ್‌ ಖಾತೆ ಕಳವು; ಖಾತೆ ವಿವರದ ಬೆಲೆ ಬರೀ 10 ಪೈಸೆ

03:50 AM Apr 15, 2017 | |

ಹೊಸದಿಲ್ಲಿ: ಕೋಟಿ ಕೋಟಿ ಭಾರತೀಯರ ಬ್ಯಾಂಕ್‌ ಖಾತೆಗಳ ವಿವರ ಚಿಲ್ಲರೆ ಕಾಸಿಗೆ ಮಾರಾಟಕ್ಕಿದೆ! ನಮ್ಮೆಲ್ಲರ ಖಾತೆ ವಿವರಗಳನ್ನು ಮಾರಿಕೊಳ್ಳುತ್ತಿರುವುದು ಬೇರಾರೂ ಅಲ್ಲ, ಸ್ವತಃ ಬ್ಯಾಂಕ್‌ಗಳ ಸಿಬಂದಿ. ಅದೂ ಒಂದು ಖಾತೆ ವಿವರಕ್ಕೆ ಕೇವಲ 10 ಅಥವಾ 20 ಪೈಸೆ ಪಡೆದು!

Advertisement

ಮಹಿಳೆಯೊಬ್ಬರ ಕ್ರೆಡಿಟ್‌ ಕಾರ್ಡ್‌ನಿಂದ ಲಕ್ಷಾಂತರ ರೂ. ಮಾಯವಾದ ಬಗ್ಗೆ ತನಿಖೆ ನಡೆಸುವ ವೇಳೆ ಆರೋಪಿಯೊಬ್ಬನಿಂದ ಈ ಆಘಾತಕಾರಿ ಅಂಶ ಕೇಳಿದ ದಿಲ್ಲಿ ಪೊಲೀಸರೇ ಒಂದು ಕ್ಷಣ ಅವಕ್ಕಾಗಿದ್ದಾರೆ. ದಕ್ಷಿಣ ದಿಲ್ಲಿಯ ಗ್ರೇಟರ್‌ ಕೈಲಾಶ್‌ ಪ್ರದೇಶದ ನಿವಾಸಿ, 80 ವರ್ಷದ ಮಹಿಳೆಯೊಬ್ಬರು, “ಸಿಟಿ ಬ್ಯಾಂಕ್‌ ಪ್ರತಿನಿಧಿ ಎಂದು ಹೇಳಿಕೊಂಡು ಕರೆ ಮಾಡಿದ ವ್ಯಕ್ತಿಯೊಬ್ಬ ನನ್ನಿಂದ ಒಟಿಪಿ ಪಡೆದುಕೊಂಡಿದ್ದ. ಅನಂತರ ನನ್ನ ಕ್ರೆಡಿಟ್‌ ಕಾರ್ಡ್‌ನಿಂದ 1.46 ಲಕ್ಷ ರೂ. ಬಳಸಲಾಗಿದೆ’ ಎಂದು ಪೊಲೀಸರಿಗೆ ದೂರು ನೀಡಿದ್ದರು. ಪ್ರಕ ರಣದ ಬೆನ್ನುಹತ್ತಿದ ಪೊಲೀಸರು, ಬ್ಯಾಂಕ್‌ ಒಳಗಿನ ಸಿಬಂದಿ, ಕಾಲ್‌ ಸೆಂಟರ್‌, ಅಧಿಕೃತ ಸಂಸ್ಥೆಗಳ ಮೂಲಕ ಗ್ರಾಹಕರ ಬ್ಯಾಂಕ್‌ ಖಾತೆಗಳ ವಿವರ ಪಡೆದು ವಂಚಕರಿಗೆ ಮಾರಾಟ ಮಾಡುತ್ತಿದ್ದ ಜಾಲ ವೊಂದನ್ನು ಪತ್ತೆಹಚ್ಚಿದ್ದಾರೆ.

“ಪ್ರಸ್ತುತ ಪ್ರಕರಣದ ಪ್ರಮುಖ ಆರೋಪಿ ನೀಡಿರುವ ಮಾಹಿತಿಯಂತೆ ಕಳವಾಗಿರುವ ಒಂದು ಕೋಟಿ ಖಾತೆಗಳ ವಿವರವನ್ನು ಹಿಂಪಡೆಯುವುದೇ ಪೊಲೀಸರಿಗೆ ದೊಡ್ಡ ಸವಾಲಾಗಿದೆ’ ಎಂದು ದಿಲ್ಲಿ ಆಗ್ನೇಯ ವಿಭಾಗದ ಡಿಸಿಪಿ ರೋಮಿ ಬಾನಿಯಾ ಹೇಳಿದ್ದಾರೆ.

ಏನೆಲ್ಲ ಮಾಹಿತಿ ಕಳವು?: ವಿವಿಧ ರೀತಿಯ ಖಾತೆಗಳಿಗೆ ಸಂಬಂಧಿಸಿದ 20 ಗಿಗಾಬೈಟ್ಸ್‌ಗಿಂತಲೂ ಹೆಚ್ಚು ಮಾಹಿತಿ ಕಳವಾಗಿದೆ ಎಂದು ಅಂದಾಜಿಸಲಾಗಿದ್ದು, ಇಲ್ಲಿ ಗ್ರಾಹಕರ ಬ್ಯಾಂಕ್‌ ಖಾತೆ ಸಂಖ್ಯೆ, ಕ್ರೆಡಿಟ್‌ ಅಥವಾ ಡೆಬಿಟ್‌ ಕಾರ್ಡ್‌ ಸಂಖ್ಯೆ, ಕಾರ್ಡ್‌ದಾರರ ಹೆಸರು, ಜನ್ಮ ದಿನಾಂಕ ಮತ್ತು ಮೊಬೈಲ್‌ ಸಂಖ್ಯೆ ಸಹಿತ ಹಲವು ಮಹತ್ವದ ವಿವರಗಳು ವಂಚನೆ ಜಾಲದ ಕೈ ಸೇರಿವೆ. ಮುಖ್ಯವಾಗಿ ಹಿರಿಯ ನಾಗರಿಕರಿಗೆ ಸೇರಿದ ಖಾತೆಗಳ ವಿವರವೇ ದೊಡ್ಡ ಮಟ್ಟದಲ್ಲಿ ಕಳವಾಗಿರುವುದಾಗಿ ಪೊಲೀಸ್‌ ಮೂಲಗಳು ತಿಳಿಸಿವೆ.

ಇ-ವ್ಯಾಲೆಟ್‌ಗಳಿಗೆ ಹಣ?: ಪ್ರಕರಣ ಸಂಬಂಧ ದಿಲ್ಲಿ ಪೊಲೀಸರು ಪಶ್ಚಿಮ ದಿಲ್ಲಿಯ ಗಣೇಶ್‌ ನಗರದಲ್ಲಿ ಪೂರಣ್‌ ಗುಪ್ತ (33)ನನ್ನು ಬಂಧಿಸಿದ್ದು, ಈತ ಬ್ಯಾಂಕ್‌ ಸಿಬಂದಿ ನೆರವಿನಿಂದ ಸಂಗ್ರಹಿಸಿದ ಖಾತೆಗಳ ವಿವರವನ್ನು ನಕಲಿ ಕಾಲ್‌ ಸೆಂಟರ್‌ ಜಾಲವೊಂದಕ್ಕೆ ನೀಡುತ್ತಿದ್ದ. ಮಾಹಿತಿ ಪಡೆದು ಗ್ರಾಹಕರಿಗೆ ಕರೆ ಮಾಡುತ್ತಿದ್ದ ನಕಲಿ ಕಾಲ್‌ ಸೆಂಟರ್‌ ಪ್ರತಿನಿಧಿಗಳು, ಒನ್‌ ಟೈಮ್‌ ಪಾಸ್ವರ್ಡ್‌ (ಒಟಿಪಿ) ಪಡೆಯಲು ಯತ್ನಿಸುತ್ತಿದ್ದರು. ಗ್ರಾಹಕರು ಯಾಮಾರಿ ಒಟಿಪಿ ಕೊಟ್ಟರೆ ಅವರ ಖಾತೆಯಲ್ಲಿದ್ದ ಹಣ ಲೂಟಿಯಾಗಿರುತ್ತಿತ್ತು.

Advertisement

“ಗ್ರಾಹಕರ ಖಾತೆಯಿಂದ ಹೀಗೆ ಕೊಳ್ಳೆ ಹೊಡೆದ ಹಣವನ್ನು ಪೇಯು ಮನಿ, ಪೇಟಿಎಂ, ಓಲಾಕ್ಯಾಬ್ಸ್, ಮೊಬಿಕ್ವಿಕ್‌ ಮತ್ತು ವೊಡಾಫೋನ್‌ ಬಿಲ್‌ ಪೇ ರೀತಿಯ ಆನ್‌ಲೈನ್‌ ಇ-ವ್ಯಾಲೆಟ್‌ಗಳಿಗೆ ವರ್ಗಾವಣೆ ಮಾಡಲಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆ ತನಿಖಾಧಿಕಾರಿಗಳು ಸಂಬಂಧಿಸಿದ ಸಂಸ್ಥೆಗಳಿಗೆ ಪತ್ರ ರವಾನಿಸಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಹಿರಿಯ ನಾಗರಿಕರನ್ನೇ ಟಾರ್ಗೆಟ್‌ ಮಾಡಿಕೊಂಡಿದ್ದ ನಕಲಿ ಕಾಲ್‌ ಸೆಂಟರ್‌ ಒಂದರ ಮಾಲೀಕ, ಆಶಿಶ್‌ ಕುಮಾರ್‌ ಝಾ ಎಂಬಾತನನ್ನು ಇದೇ ತಿಂಗಳ ಆರಂಭದಲ್ಲಿ ದಿಲ್ಲಿ ಪೊಲೀಸರು ಬಂಧಿಸಿದ್ದರು. ಬ್ಯಾಂಕ್‌ ಖಾತೆಗಳ ವಿವರ ಎಲ್ಲಿಂದ ಸಿಗುತ್ತಿದೆ ಎಂದು ಪ್ರಶ್ನಿಸಿದಾಗ ಆತ ಆತ ಪೂರಣ್‌ ಗುಪ್ತಾನ ಹೆಸರು ಹೇಳಿದ್ದ.

Advertisement

Udayavani is now on Telegram. Click here to join our channel and stay updated with the latest news.

Next