ಬೆಂಗಳೂರು: ಶೈಕ್ಷಣಿಕ ಹಾಗೂ ಆಡಳಿತಾತ್ಮಕವಾಗಿ ಗುಣಮಟ್ಟ ಸುಧಾರಿಸುವ ದೃಷ್ಟಿಯಿಂದ ರಾಜ್ಯ ಸರ್ಕಾರವು ಬೆಂಗಳೂರು ವಿಶ್ವವಿದ್ಯಾಲಯವನ್ನು ತ್ರಿಭಾಗ ಮಾಡಿರುವುದರಿಂದ ಮೂಲ ವಿವಿಗಳಿಗೆ ಆರ್ಥಿಕ ಹೊರೆ ಉಂಟಾಗುವ ಸಾಧ್ಯತೆಗಳಿವೆ ಎಂದು ತಜ್ಞರ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರು ವಿಶ್ವವಿದ್ಯಾಲಯವನ್ನು ಮೂರು ಭಾಗ ಮಾಡಿ, ಬೆಂಗಳೂರು ಉತ್ತರ ಹಾಗೂ ಬೆಂಗಳೂರು ಕೇಂದ್ರ ವಿವಿಯನ್ನು ಹೊಸದಾಗಿ ರಚನೆ ಮಾಡಲಾಗಿದೆ. ಆದರೆ, ಈ ಎರಡು ಹೊಸ ವಿಶ್ವವಿದ್ಯಾಲಯಕ್ಕೆ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಯಾವುದೇ ಅನುದಾನ ಘೋಷಣೆ ಮಾಡಿಲ್ಲ. ಬದಲಾಗಿ ಬೆಂಗಳೂರು ವಿಶ್ವವಿದ್ಯಾಲಯದಿಂದಲೇ ಅನುದಾನ ನೀಡುವಂತೆ ಆದೇಶ ಮಾಡಿದೆ.
ಬೆಂವಿವಿ ವ್ಯಾಪ್ತಿಯ ಸುಮಾರು 650 ಕಾಲೇಜುಗಳನ್ನು ಮೂರು ವಿವಿಗಳಿಗೂ ಸಮಾನವಾಗಿ ಹಂಚಿಕೆ ಮಾಡಲಾಗಿದೆ. ಹೀಗಾಗಿ ಬೆಂವಿವಿಗೆ ಕಾಲೇಜು ಮಾನ್ಯತೆಯಿಂದ ಬರುವ ಆದಾಯದ ಪ್ರಮಾಣವೂ ಕಡಿಮೆಯಾಗಲಿದೆ. ಬೆಂವಿವಿಯ ಇನ್ನೊಂದು ಆದಾಯದ ಮೂಲ ಯೂನಿವರ್ಸಿಟಿ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್ ಅನ್ನು (ಯುವಿಸಿಇ) ಜ್ಞಾನಭಾರತಿ ಆವರಣಕ್ಕೆ ವರ್ಗಾಯಿಸುವ ಸಂಬಂಧ ಸರ್ಕಾರ ಸೂಚನೆ ನೀಡಿದ್ದರೂ, ಇನ್ನು ಅಂತಿಮವಾಗಿಲ್ಲ.
ಕೆ.ಆರ್. ವೃತ್ತದಲ್ಲೇ ಕಾಲೇಜನ್ನು ಉಳಿಸಿಕೊಳ್ಳಬೇಕು ಎಂಬ ಹೋರಾಟವೂ ನಡೆಯುತ್ತಿದೆ. ಹೀಗಾಗಿ ಸದ್ಯ ಇದು ಇತ್ಯರ್ಥವಾಗದ ಸಮಸ್ಯೆಯಾಗಿದೆ. ಕಾಲೇಜುಗಳ ಸಂಖ್ಯೆ ಕಡಿಮೆಯಾಗುವುದರಿಂದ ಜ್ಞಾನಭಾರತಿಯಲ್ಲಿರುವ ಬೆಂವಿವಿ ಆರ್ಥಿಕ ಮುಗ್ಗಟ್ಟು ಎದುರಿಸುವ ಸಾಧ್ಯತೆಗಳು ದಟ್ಟವಾಗಿದೆ. ಬೆಂ ಕೇಂದ್ರ ಮತ್ತು ಬೆಂ ಉತ್ತರ ವಿವಿಗೆ ತಲಾ 3 ಕೋಟಿ ರೂ.ಗಳನ್ನು ಈಗಾಗಲೇ ಬೆಂವಿವಿಯಿಂದ ನೀಡಲಾಗಿದೆ.
ಅದರೆ ಜತೆಗೆ ಬೆಂ ಕೇಂದ್ರ ವಿವಿಗೆ 10 ಕೋಟಿ ರೂ. ಹಾಗೂ ಬೆಂಉತ್ತರ ವಿವಿಗೆ 15 ಕೋಟಿ ರೂ.ಗಳನ್ನು ಬೆಂವಿವಿ ಬೊಕ್ಕಸದಿಂದಲೇ ನೀಡುವಂತೆ ಆದೇಶಿಸಲಾಗಿದೆ. ಸರ್ಕಾರ ಸೂಚಿಸಿರುವಷ್ಟು ಅನುದಾನ ವಿವಿಯೂ ನೀಡಬೇಕಾಗುತ್ತದೆ. ಅದರಂತೆ ಈಗಾಗಲೇ ತಲಾ ಮೂರು ಕೋಟಿ ರೂ. ನೀಡಿದ್ದೇವೆ. ಶೀಘ್ರವೇ ಇನ್ನೆರಡು ಕೋಟಿ ಬಿಡುಗಡೆ ಮಾಡಲಿದ್ದೇವೆ. ಸರ್ಕಾರದ ಆದೇಶದಂತೆ ಹಂತ ಹಂತವಾಗಿ ಹಣ ಬಿಡುಗಡೆ ಮಾಡಲಾಗುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಯಾವ ಮಾನದಂಡದಲ್ಲಿ ತ್ರಿಭಜನೆ
ತ್ರಿಭಜನೆಯ ನಂತರ ಬೆಂವಿವಿಗೆ ಆದಾಯದ ಮೂಲಗಳು ಯಾವುದು ಎಂಬುದನ್ನು ಇನ್ನಷ್ಟೇ ತೀರ್ಮಾನಿಸಬೇಕಾಗಿದೆ. ಬೆಂವಿವಿಯಲ್ಲಿರುವ ಹಣಕಾಸಿನ ಪರಿಸ್ಥಿತಿಯ ಆಧಾರದಲ್ಲಿ ಹೊಸ ವಿವಿಗೆ ಅನುದಾನ ನೀಡುವ ಬಗ್ಗೆ ಸರ್ಕಾರ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಬೇಕಿತ್ತು. ಆದಾಯದ ಕೊರತೆ ಇದ್ದಾಗ ಹೆಚ್ಚುವರಿ ಹಂಚಿಕೆ ಸಾಧ್ಯವಾಗುವುದಿಲ್ಲ. ಸರ್ಕಾರ ಯಾವ ಮಾನದಂಡದಲ್ಲಿ ತ್ರಿಭಜನೆಗೆ ಆದೇಶ ನೀಡಿದೆ ಎಂಬುದನ್ನು ಈ ಹಂತದಲ್ಲಿ ಪರಿಶೀಲಿಸಬೇಕಾಗುತ್ತದೆ ಎಂದು ಹಂಗಾಮಿ ಕುಲಪತಿ ಡಾ.ಎಂ.ಮುನಿರಾಜು ಹೇಳಿದರು.