ನನ್ನ ವಿದ್ಯಾಭ್ಯಾಸವೆಲ್ಲ ಧಾರವಾಡದಲ್ಲಿ ಆದರೂ, ಬಹುತೇಕ ರಜಾದಿನಗಳನ್ನು ನಾನು ಕಳೆದಿದ್ದು ತಾಯಿಯ ತವರು ಮನೆಯಾದ ಬೆಂಗಳೂರಿನಲ್ಲಿ… ಚಾಮರಾಜಪೇಟೆಯ ಮೂರನೆಯ ಮುಖ್ಯ ರಸ್ತೆಯಲ್ಲಿ ನನ್ನ ತಾತನ ಮನೆ… ಮನೆಯ ಹಿಂಭಾಗದಲ್ಲಿ ಮೂರು ತಿರುವುಗಳನ್ನು ದಾಟಿದರೆ ಒಂದು ಪುಟ್ಟ ಆಟದ ಮೈದಾನ. ಅಲ್ಲಿಯೇ ಒಂದು ಪುಟ್ಟ ಮಸೀದಿ. ನಾನು ಗಾಳಿ ಪಟಗಳನ್ನು ಹಾರಿಸಿದ್ದು, ಸೈಕಲ್ ಓಡಿಸಲು ಕಲಿತಿದ್ದು, ಲಗೋರಿ ಆಡಿದ್ದು… ದೊಡ್ಡವರು ಕ್ರಿಕೆಟ್ ಆಡುತ್ತಿದ್ದರೆ ಅವರು ಹೊಡೆದ ಚೆಂಡುಗಳನ್ನು ಹಿಡಿದು ತಂದು ಅವರಿಗೆ ಕೊಡುವುದು… ಹೀಗೆ ನನ್ನ ಬಾಲ್ಯದ ಅನೇಕ ಅವಿಸ್ಮರಣೀಯ ಕ್ಷಣಗಳನ್ನು ಬೆಂಗಳೂರಿನ ಈ ಮೈದಾನದಲ್ಲಿಯೇ ಕಳೆದಿದ್ದೇನೆ.
ಮೈದಾನದ ಒಂದು ತುದಿಗೆ ಒಂದು ಪುಟ್ಟ ಕಿರಾಣಿ ಅಂಗಡಿಯಿತ್ತು. ಅಂಗಡಿಯ ಮಾಲೀಕ, ದಿನವೂ ತನ್ನ ಅಂಗಡಿಯ ಮುಂದೆ ಕಾಳು- ಕಡ್ಡಿಗಳನ್ನು ಹಾಕಿದರೆ ಅವುಗಳನ್ನು ತಿನ್ನಲು ಗುಬ್ಬಚ್ಚಿಯ ಗುಂಪು ಬಂದು ಸೇರುತ್ತಿತ್ತು. ಅದನ್ನು ನೋಡುವುದೇ ನಮಗೆ ಒಂದು ಸಡಗರ. ಅವುಗಳ ಚಿಲಿಪಿಲಿ ನಾದ ಅಪ್ಸರೆಯ ಕಾಲಿಗೆ ಕಟ್ಟಿದ ನೂಪುರದಂತೆ ನಮಗೆ ಭಾಸವಾಗುತ್ತಿತ್ತು. ಬಹಳ ಖುಷಿ ಪಡುತ್ತಿದ್ದೆವಾಗ.
ನಂತರದ ದಿನಗಳಲ್ಲಿ ಧಾರವಾಡದಲ್ಲಿ ಕಾಲೇಜು ಓದುತ್ತಿದ್ದಾಗ ಮನೆಯ ನನ್ನ ರೂಮಿನಲ್ಲಿ ಒಂದು ಗುಬ್ಬಚ್ಚಿ ಮೊಟ್ಟೆ ಇಟ್ಟಿತ್ತು. ಅದನ್ನು ನೋಡುವುದೇ ಒಂದು ಸಡಗರ… ನಂತರ ಮೊಟ್ಟೆಯಿಂದ ಮರಿ ಹೊರಗೆ ಬಂದಾಗ ಅದು ಆಯತಪ್ಪಿ ತನ್ನ ಗೂಡಿನಿಂದ ಕೆಳಗೆ ಬಿತ್ತು… ಆಗ ಅದನ್ನು ಜತನದಿಂದ ಮತ್ತೆ ಗೂಡಿಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ!
ಬರೋಬ್ಬರಿ ಹದಿನೇಳು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು, ಸಂಸಾರ ಸಮೇತನಾಗಿ ನೆಲೆಸಿದಾಗ ಅದೊಮ್ಮೆ ಚಾಮರಾಜಪೇಟೆಯ ಮೈದಾನಕ್ಕೆ ಹೋದೆ. ಮೈದಾನ, ಪೂರ್ತಿಯಾಗಿ ಬದಲಾಗಿ ಹೋಗಿತ್ತು. ಅಲ್ಲಿದ್ದ ಮಸೀದಿ ಮಾತ್ರ ಹಾಗೆಯೇ ಇತ್ತು. ಗುಬ್ಬಚ್ಚಿಗಳಿಗೆ ಕಾಳು ಹಾಕುವ ಅಂಗಡಿ ಮತ್ತು ಅದರ ಮಾಲೀಕ ಇಬ್ಬರೂ ನಾಪತ್ತೆಯಾಗಿದ್ದರು. ಹೀಗಾಗಿ ಅಲ್ಲಿ ಗುಬಚ್ಚಿಯ ಕಲರವವೂ ಇರಲಿಲ್ಲ. ಅಪ್ಸರೆಯ ಕಾಲಿನ ನೂಪುರದ ಸದ್ದು ಕೂಡ ಮಾಯವಾಗಿತ್ತು. ಮನಸ್ಸಿಗೆ ಬಹಳ ಬೇಜಾರಾಯ್ತು. ಕಾಂಕ್ರೀಟ ನಗರದಲ್ಲಿ ಮಾನವ ತನ್ನ ಸಹಜತೆಯನ್ನು ಹರಾಜಿಗಿಟ್ಟಿದ್ದು ಸಾಬೀತಾಗಿತ್ತು.
ನನ್ನ ಪಾಲಿಗೆ ಈ ಬೆಂಗಳೂರೆಂಬುದು ಒಂದು ಮಾಯಾನಗರಿಯೇ ಆಗಿದೆ. ಹದಿನೇಳು ವರ್ಷಗಳ ಹಿಂದೆ ಬೆಂಗಳೂರಿಗೆ ಖಾಯಂ ಆಗಿ ಬಂದಾಗ, ಕೈಯಲ್ಲಿ ಏನೂ ಕೆಲಸವಿರಲಿಲ್ಲ. ಬಂದ ಎರಡನೇ ದಿನಕ್ಕೆ ಬೆಂಗಳೂರಿನ ಮಾಧ್ಯಮಲೋಕ ಕೈ ಬೀಸಿ ಕರೆಯಿತು. ಒಂದು ಪುಟ್ಟ ಬಾಡಿಗೆ ಮನೆಯನ್ನು ಹಿಡಿದು, ಹೆಂಡತಿ, ಮಗುವನ್ನು ಸಲಹುತ್ತ, ನಾಟಕ, ಓದು, ಬರವಣಿಗೆ, ಕೆಲಸ… ಹೀಗೆ ಬದುಕು ಸಾಗಿಸುತ್ತಾ ಮುನ್ನಡೆದಿ¨ªೆ. ತುಂಬ ಕಡಿಮೆ ಅವಧಿಯಲ್ಲಿ ಆಗಿನ ಕೆಲಸಕ್ಕಿಂತ ಇನ್ನೂ ದೊಡ್ಡ ಹು¨ªೆಯ ಕೆಲಸ ಸಿಕ್ಕಿ, ಬದುಕು ಮತ್ತೂಂದು ಘಟ್ಟಕ್ಕೆ ಬಂದು ನಿಂತಿತು. ಬದುಕು ಆರ್ಥಿಕವಾಗಿ ಬದಲಾಯಿತು. ಒಂದು ಸಿuರತೆ ಬಂತು, ಸ್ವಂತ ಮನೆಯ ಕನಸು ನನಸಾಯಿತು. ಸ್ಕೂಟರು ಹೋಗಿ ಕಾರು ಬಂತು. ಹೀಗೆ ಬದುಕಿನ ಅನೇಕ ಮಜಲುಗಳನ್ನು ಏರಲು ಮೂಕ ಸಾಕ್ಷಿಯಾಗಿದ್ದು ಇದೇ ಬೆಂಗಳೂರು. ಅನೇಕ ಹಿರಿಯ ರಂಗಕರ್ಮಿಗಳೊಂದಿಗೆ ಕೆಲಸ ಮಾಡುವ, ಹಿರಿಯ ಲೇಖಕರೊಂದಿಗೆ ಒಡನಾಡುವ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದೂ ಇದೇ ಬೆಂಗಳೂರು. ಐವತ್ತು ರುಪಾಯಿಗಳಲ್ಲಿ ಜೀವನ ನಡೆಸುವುದನ್ನು ಕಲಿಸಿದ್ದು ಇದೇ ಬೆಂಗಳೂರು. ಅದೇ ರೀತಿ ಐವತ್ತು ಸಾವಿರ ರುಪಾಯಿಯಲ್ಲಿ ಜೀವನ ನಡೆಸುವುದನ್ನು ಕಲಿಸಿದ್ದು ಕೂಡ ಇದೇ ಬೆಂಗಳೂರು.
ನನ್ನ ಹತ್ತಿರ ಏನೂ ಇಲ್ಲದಾಗ ಏನೆಲ್ಲಾ ಕೊಟ್ಟ ಬೆಂಗಳೂರಿಗೆ ಒಂದು ಪುಟ್ಟ ಸಲಾಂ.
-ಧನಂಜಯ ಕುಲಕರ್ಣಿ, ಬೆಂಗಳೂರು