ಕೊಲಂಬೊ: ಆತಿಥೇಯ ಶ್ರೀಲಂಕಾವನ್ನು 2 ವಿಕೆಟ್‌ಗಳಿಂದ ರೋಮಾಂಚಕಾರಿಯಾಗಿ ಮಣಿಸಿದ ಬಾಂಗ್ಲಾದೇಶ ಟಿ20 ತ್ರಿಕೋನ ಸರಣಿಯ ಫೈನಲ್‌ಗೆ ಲಗ್ಗೆ ಇರಿಸಿದೆ. ರವಿವಾರದ ಪ್ರಶಸ್ತಿ ಸೆಣಸಾಟದಲ್ಲಿ ಶಕಿಬ್ ಪಡೆ ಭಾರತವನ್ನು ಎದುರಿಸಲಿದೆ.
ಶುಕ್ರವಾರದ ಕೊನೆಯ ಲೀಗ್ ಪಂದ್ಯದಲ್ಲಿ ಬ್ಯಾಟಿಂಗಿಗೆ ಇಳಿಸಲ್ಪಟ್ಟ ಶ್ರೀಲಂಕಾ ಕುಸಲ್ ಪೆರೆರ (61) ಮತ್ತು ತಿಸರ ಪೆರೆರ (58) ನೆರವಿನಿಂದ 7 ವಿಕೆಟಿಗೆ 159 ರನ್ ಪೇರಿಸಿದರೆ, ಬಾಂಗ್ಲಾದೇಶ 19.5 ಓವರ್‌ಗಳಲ್ಲಿ 8 ವಿಕೆಟಿಗೆ 160 ರನ್ ಬಾರಿಸಿ ಜಯಭೇರಿ ಮೊಳಗಿಸಿತು.
ಬಾಂಗ್ಲಾ ಪರ ಆರಂಭಕಾರ ತಮಿಮ್ ಇಕ್ಬಾಲ್ 50 ರನ್ ಬಾರಿಸಿದರೆ, ಕೊನೆಯ ಹಂತದಲ್ಲಿ ತಂಡವನ್ನು ಆಧರಿಸಿ ನಿಂತ ಮೊಹಮದುಲ್ಲ ಕೇವಲ 18 ಎಸೆತಗಳಿಂದ ಅಜೇಯ 43 ರನ್ ಹೊಡೆದರು (3 ಬೌಂಡರಿ, 2 ಸಿಕ್ಸರ್). ಇದರೊಂದಿಗೆ ಲೀಗ್ ಹಂತದ ಎರಡೂ ಪಂದ್ಯಗಳಲ್ಲಿ ಬಾಂಗ್ಲಾದೇಶ ಶ್ರೀಲಂಕಾವನ್ನು ಮಣಿಸಿ ಪರಾಕ್ರಮ ಮೆರೆದಂತಾಯಿತು.
ನಾಯಕ ಶಕಿಬ್ ಅಲ್ ಹಸನ್ ಅವರ ಆಗಮನದಿಂದ ಹೊಸ ಸ್ಫೂರ್ತಿ ಪಡೆದ ಬಾಂಗ್ಲಾದೇಶ ಆತಿಥೇಯರಿಗೆ ಕಡಿವಾಣ ಹಾಕುತ್ತಲೇ ಹೋಯಿತು. 9ನೇ ಓವರ್ ವೇಳೆ 41 ರನ್ನಿಗೆ 5 ವಿಕೆಟ್ ಉರುಳಿಸಿಕೊಂಡ ಲಂಕಾ ತೀವ್ರ ಸಂಕಟಕ್ಕೆ ಸಿಲುಕಿತು. ಸ್ವತಃ ಶಕಿಬ್ ಬೌಲಿಂಗ್ ಆರಂಭಿಸಿ ಆರಂಭಕಾರ ದನುಷ್ಕ ಗುಣತಿಲಕ (4) ವಿಕೆಟ್ ಹಾರಿಸಿ ಲಂಕಾ ಕುಸಿತಕ್ಕೆ ಚಾಲನೆ ನೀಡಿ ದರು. ಕುಸಲ್ ಮೆಂಡಿಸ್ (11), ಉಪುಲ್ ತರಂಗ (5), ದಸುನ್ ಶಣಕ (0), ಜೀವನ್ ಮೆಂಡಿಸ್ (3) ಅಗ್ಗಕ್ಕೆ ಔಟಾದರು. ಲಂಕಾ ಸಣ್ಣ ಮೊತ್ತಕ್ಕೆ ಕುಸಿ ಯುವ ಸೂಚನೆಯೊಂದು ಲಭಿಸಿತು.
ಆದರೆ ಕುಸಲ್ ಪೆರೆರ ಮತ್ತು ನಾಯಕ ತಿಸರ ಪೆರೆರ ಸೇರಿಕೊಂಡು ಬಾಂಗ್ಲಾ ದಾಳಿಗೆ ಸಡ್ಡು ಹೊಡೆದು ನಿಂತರು. ಲಂಕಾ ಇನ್ನಿಂಗ್ಸಿಗೆ ಜೀವ ತುಂಬ ತೊಡಗಿದರು. ಈ ಜೋಡಿಯಿಂದ 6ನೇ ವಿಕೆಟಿಗೆ 10.1 ಓವರ್‌ಗಳಿಂದ 97 ರನ್ ಹರಿದು ಬಂತು.