ಬೆಂಗಳೂರು: ಹಣದ ವಿಚಾರವಾಗಿ ಕಳೆದ ವರ್ಷ ಸ್ನೇಹಿತನನ್ನೇ ಕೊಲೆಗೈದು ತಲೆಮರೆಸಿಕೊಂಡಿದ್ದ ಬಾಂಗ್ಲಾದೇಶದ ನಾಲ್ವರು ಆರೋಪಿಗಳು ಹೆಣ್ಣೂರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಮಾದನಾಯಕನಹಳ್ಳಿಯಲ್ಲಿ ವಾಸವಿರುವ ಓಬೀಮುಲ್ಲಾ (26), ಕೋರಮಂಗಲದ ನಿವಾಸಿಗಳಾದ ಮೊಯಿನ್ ಖಾನ್ (26) ಮತ್ತು ರಕೀಮುಲ್ಲಾ (33), ಗೊಲ್ಲರಹಳ್ಳಿ ನಿವಾಸಿ ಮಹಮ್ಮದ್ ಕಿಸು (35) ಬಂಧಿತ ಆರೋಪಿಗಳು.
ಕಳೆದ ರಾತ್ರಿ 1.30ರ ಸುಮಾರಿಗೆ ಹೆಣ್ಣೂರು ಠಾಣೆಯ ಇನ್ಸಪೆಕ್ಟರ್ ಶ್ರೀನಿವಾಸ್ ಹಾಗೂ ಸಿಬ್ಬಂದಿಗೆ ಅಗರ ಕೆರೆ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ನಾಲ್ವರು ಕಂಡಿದ್ದತು. ಅವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ, ಆರೋಪಿಗಳ ಬಳಿ ಚಾಕು ಪತ್ತೆಯಾಗಿವೆ. ಜೊತೆಗೆ ಓಬೀಬುಲ್ಲಾನ ಬಳಿ ಜಾಮೀನು ಪತ್ರವೂ ಇತ್ತು. ಹೀಗಾಗಿ ಠಾಣೆಗೆ ಕರೆತಂದು ಮತ್ತಷ್ಟು ವಿಚಾರಣೆಗೆ ಒಳಪಡಿಸಿದಾಗ, ಕಳೆದ ವರ್ಷ ತಮ್ಮ ಸ್ನೇಹಿತ ಇಮ್ರುಲ್ ಚೌಧರಿಯನ್ನು ಕೊಲೆಗೈದ ಸಂಗತಿಯನ್ನು ಬಾಯ್ಬಿಟ್ಟಿದ್ದಾರೆ.
ಹಲವು ವರ್ಷಗಳ ಹಿಂದೆಯೇ ಬಾಂಗ್ಲಾದೇಶದಿಂದ ಅಕ್ರಮವಾಗಿ ನುಸುಳಿ ಬಂದಿದ್ದ ಆರೋಪಿಗಳು, ನಗರದ ವಿವಿಧೆಡೆ ನೆಲೆಸಿ ಬಾಂಗ್ಲಾ ಯುವತಿಯರನ್ನು ಬಳಸಿಕೊಂಡು ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿಸಿಕೊಂಡಿದ್ದರು. ಕೊಲೆಯಾಗಿದ್ದ ಇಮ್ರುಲ್ ಚೌಧರಿಯೂ ಇವರ ಸ್ನೇಹಿತನಾಗಿದ್ದು, ಆತ ನೆಲಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯ ವಾಜರಹಳ್ಳಿಯಲ್ಲಿ ಹನುಮಂತರಾಯಪ್ಪ ಎಂಬುವರ ಮನೆಯಲ್ಲಿ ಬಾಡಿಗೆಗೆ ವಾಸವಿದ್ದ.
ವೇಶ್ಯಾವಾಟಿಕೆ ದಂಧೆಯಲ್ಲಿ ಬಂದ ಹಣದ ಹಂಚಿಕೆ ವಿಚಾರದಲ್ಲಿ ಆರೋಪಿಗಳಿಗೂ ಹಾಗೂ ಇಮ್ರುಲ್‌ಗೆ ಜಗಳವಾಗಿತ್ತು. ಈ ಹಿನ್ನೆಲೆಯಲ್ಲಿ 2016ರ ಜುಲೈ 11 ರಂದು, ಆತನ ಮನೆಯಲ್ಲಿಯೇ ಇಮ್ರುನ್‌ನನ್ನು ಉಸಿರುಗಟ್ಟಿಸಿ ಕೊಲೆಗೈದಿದ್ದ ಆರೋಪಿಗಳು ತಲೆ ಮರೆಸಿಕೊಂಡಿದ್ದರು. ಈ ಪೈಕಿ ಓಬೀಬುಲ್ಲಾ ಮಾತ್ರ ಬಂಧಿತನಾಗಿದ್ದ. ಆದರೆ ಜಾಮೀನಿನ ಆಧಾರದಲ್ಲಿ ಬಿಡುಗೆಯಾಗಿ ಪುನ: ಹಳೆ ಕಸುಬನ್ನು ಮುಂದುವರಿಸಿದ್ದ ಎಂದು ಪೊಲೀಸರು ತಿಳಿಸಿದರು.
ಆಧಾರ್ ಕಾರ್ಡ್, ವೋಟರ್ ಐಡಿ ಪತ್ತೆ: ಈ ಪ್ರಕರಣದಲ್ಲಿ ಬಂಧಿತರಾಗಿರುವ ನಾಲ್ವರು ಆರೋಪಿಗಳ ಬಳಿಯೂ ಇಲ್ಲಿನ ಆಧಾರ್‌ಕಾರ್ಡ್, ವೋಟರ್ ಐಡಿ, ಪಾನ್ ಕಾರ್ಡ್‌ಗಳು ದೊರೆತಿವೆ. ಅಕ್ರಮವಾಗಿ ನುಸುಳಿ ಬಂದಿರುವ ಆರೋಪಿಗಳು ಆರ್.ಟಿ.ನಗರ ನಿವಾಸಿಯಾದ ಜನಾರ್ದನ ರೆಡ್ಡಿ ಎಂಬಾತನ ಮೂಲಕ ಆಧಾರ್ ಮಾಡಿಸಿಕೊಂಡಿದ್ದಾರೆ ಎಂಬುದು ತನಿಖೆಯಲ್ಲಿ ಗೊತ್ತಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.