ಢಾಕಾ: ನೂತನವಾಗಿ ಬಾಂಗ್ಲಾದೇಶದಲ್ಲಿ ಅಧಿಕಾರಕ್ಕೆ ಬಂದಿರುವ ಮಧ್ಯಂತರ ಸರ್ಕಾರದ ಮುಂದೆ ಮಾಜಿ ಪ್ರಧಾನಿ ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್ ಪಕ್ಷವನ್ನು ನಿಷೇಧಿಸುವ ಯಾವುದೇ ಯೋಚನೆ ಇಲ್ಲ ಎಂದು ನೂತನ ಗೃಹ ವ್ಯವಹಾರಗಳ ಸಲಹೆಗಾರ ಬ್ರಿಗೇಡಿಯರ್ ಜನರಲ್ (ನಿವೃತ್ತ) ಎಂ. ಸಖಾವತ್ ಸೋಮವಾರ (ಆಗಸ್ಟ್ 12) ತಿಳಿಸಿರುವುದಾಗಿ ಎಎಫ್ ಪಿ ವರದಿ ಮಾಡಿದೆ.
ಅವಾಮಿ ಲೀಗ್ ಬಾಂಗ್ಲಾದೇಶಕ್ಕೆ ಹಲವು ಕೊಡುಗೆಗಳನ್ನು ನೀಡಿರುವುದು ನಮ್ಮ ಗಮನದಲ್ಲಿದೆ ಎಂದು ಮಾಧ್ಯಮಕ್ಕೆ ತಿಳಿಸಿದ ಸಖಾವತ್, ಯಾವಾಗ ಸಮಯ ಬರುತ್ತದೋ ಆಗ ಹಸೀನಾ ಪಕ್ಷ ಚುನಾವಣೆಯಲ್ಲಿ ಸ್ಪರ್ಧಿಸಬಹುದಾಗಿದೆ ಎಂದು ಹೇಳಿದರು.
ದೇಶದಲ್ಲಿರುವ ಹಿಂದೂ ಸಮುದಾಯವನ್ನು ಸಮರ್ಪಕವಾಗಿ ರಕ್ಷಿಸಲು ಸಾಧ್ಯವಾಗದಿರುವುದಕ್ಕೆ ಗೃಹ ಸಚಿವ ಸಖಾವತ್ ಹೊಸೈನ್ ಭಾನುವಾರ (ಆಗಸ್ಟ್ 11) ಕ್ಷಮೆಯಾಚಿಸಿದ್ದರು.
ಅಲ್ಪಸಂಖ್ಯಾಕ ಹಿಂದೂ ಸಮುದಾಯವನ್ನು ರಕ್ಷಿಸುವುದು ಬಹುಸಂಖ್ಯಾತ ಮುಸ್ಲಿಂ ಸಮುದಾಯದ ಕರ್ತವ್ಯವಾಗಿದೆ. ಆದರೂ ಹಿಂದೂ ಸಮುದಾಯದ ರಕ್ಷಣೆಯ ವೈಫಲ್ಯದ ಹೊಣೆ ಹೊರುವುದಾಗಿ ಹೊಸೈನ್ ತಿಳಿಸಿದ್ದು, ಭವಿಷ್ಯದಲ್ಲಿ ಹಿಂದೂ ಸಮುದಾಯದ ರಕ್ಷಣೆಗೆ ಬದ್ಧವಾಗಿರುವುದಾಗಿ ಹೇಳಿದರು.
ಪೊಲೀಸರ ಮುಷ್ಕರ ಅಂತ್ಯ:
ಹಿಂಸಾಚಾರದಿಂದ ನಲುಗಿದ್ದ ಬಾಂಗ್ಲಾದೇಶದಲ್ಲಿ ಪೊಲೀಸರು ಕರ್ತವ್ಯ ನಿರ್ವಹಿಸಲು ಸಾಧ್ಯವಿಲ್ಲ ಎಂದು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಇಳಿದಿದ್ದರು. ಇದೀಗ ಮಧ್ಯಂತರ ಸರ್ಕಾರದ ಗೃಹ ವ್ಯವಹಾರಗಳ ಸಲಹೆಗಾರ ಸಖಾವತ್ ಅವರು ಮಾತುಕತೆ ನಡೆಸಿದ ನಂತರ ಬಾಂಗ್ಲಾದೇಶ್ ಪೊಲೀಸರು ತಮ್ಮ ಮುಷ್ಕರ್ ಹಿಂಪಡೆದು ಕರ್ತವ್ಯಕ್ಕೆ ಮರಳಿರುವುದಾಗಿ ವರದಿ ವಿವರಿಸಿದೆ.