ಹ್ಯಾಮಿಲ್ಟನ್: ವನಿತಾ ಏಕದಿನ ವಿಶ್ವಕಪ್ ನಲ್ಲಿ ಬಾಂಗ್ಲಾದೇಶ ತಂಡವು ಪಾಕಿಸ್ಥಾನ ವಿರುದ್ದ ಗೆಲುವು ಸಾಧಿಸಿ ಇತಿಹಾಸ ಬರೆದಿದೆ. ಇಲ್ಲಿನ ಸೆಡ್ಡಾನ್ ಪಾರ್ಕ್ ನಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾ ವನಿತೆಯರ ತಂಡ 9 ರನ್ ಅಂತರದ ಜಯ ಸಾಧಿಸಿದೆ. ಇದು ಬಾಂಗ್ಲಾದೇಶ ವನಿತೆಯರ ಮೊದಲ ವಿಶ್ವಕಪ್ ಗೆಲುವಾಗಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾ ತಂಡವು 50 ಓವರ್ ಗಳಲ್ಲಿ 234 ರನ್ ಗಳಿಸಿದರೆ, ಪಾಕಿಸ್ಥಾನ ತಂಡವು ಸಿದ್ರಾ ಅಮಿನ್ ಶತಕದ ಹೊರತಾಗಿಯೂ 225 ರನ್ ಗಳಿಸಲಷ್ಟೇ ಶಕ್ತವಾಯಿತು.
ಬಾಂಗ್ಲಾದೇಶ ತಂಡಕ್ಕೆ ಫರ್ಗಾನ ಹಕ್ 71 ರನ್, ಶರ್ಮಿನ್ ಅಖ್ತರ್ 44 ರನ್, ನಾಯಕಿ ನಿಗುರ್ ಸುಲ್ತಾನ 46 ರನ್ ಗಳಿಸಿ ನೆರವು ನೀಡಿದರು. 50 ಓವರ್ ಗಳಲ್ಲಿ ಬಾಂಗ್ಲಾ ಏಳು ವಿಕೆಟ್ ನಷ್ಟಕ್ಕೆ 234 ರನ್ ಗಳಿಸಿತು. ಪಾಕಿಸ್ಥಾನ ಪರ ನಶ್ರಾ ಸಂಧು ಮೂರು, ಫಾತಿಮಾ ಸನಾ, ನಿದಾ ದರ್ ಮತ್ತು ಒಮೈನಿಯಾ ಸೊಹೈಲ್ ತಲಾ ಒಂದು ವಿಕೆಟ್ ಕಿತ್ತರು.
ಇದನ್ನೂ ಓದಿ:ಬೆಂಗಳೂರು ಟೆಸ್ಟ್: 40 ವರ್ಷಗಳ ಹಿಂದಿನ ಕಪಿಲ್ ದೇವ್ ದಾಖಲೆ ಮುರಿದ ರಿಷಭ್ ಪಂತ್
ಗುರಿ ಬೆನ್ನತ್ತಿದ ಪಾಕಿಸ್ಥಾನಕ್ಕೆ ಆರಂಭಿಕ ಆಟಗಾರ್ತಿ ಸಿದ್ರಾ ಅಮಿನ್ ಶತಕದ ನೆರವು ನೀಡಿದರು. ಸಿದ್ರಾ 140 ಎಸೆತ ಎದುರಿಸಿ 104 ರನ್ ಗಳಿಸಿದರು. ನಹಿದಾ ಖಾನ್ 43 ರನ್ ಮತ್ತು ನಾಯಕಿ ಬಿಸ್ಮಾಹ್ ಮರೂಫ್ 31 ರನ್ ಗಳಿಸಿದರು. ಆದರೆ ಮಧ್ಯಮ ಕ್ರಮಾಂಕದ ಕಳಪೆ ಪ್ರದರ್ಶನ ಪಾಕಿಸ್ಥಾನಕ್ಕೆ ಮುಳುವಾಯಿತು. ಕೊನೆಗೆ 50 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡ ಪಾಕ್ 225 ರನ್ ಮಾತ್ರ ಗಳಿಸಿತು.
ಇದರೊಂದಿಗೆ ಬಾಂಗ್ಲಾ 9 ರನ್ ಅಂತರದ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಬಾಂಗ್ಲಾ ಆರನೇ ಸ್ಥಾನಕ್ಕೇರಿದರೆ, ಆಡಿದ ನಾಲ್ಕೂ ಪಂದ್ಯಗಳಲ್ಲಿ ಸೋಲನುಭವಿಸಿದ ಪಾಕಿಸ್ಥಾನ ಕೊನೆಯ ಸ್ಥಾನದಲ್ಲಿ ಉಳಿಯಿತು.