ಢಾಕಾ: ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಬಾಂಗ್ಲಾದೇಶ ಪ್ರವಾಸಿ ಇಂಗ್ಲೆಂಡ್‌ಗೆ ವೈಟ್‌ವಾಶ್ ಮಾಡಿ ತವರಲ್ಲಿ ತಾನು ಟೈಗರ್ ಎಂಬುದನ್ನು ಸಾಬೀತುಪಡಿಸಿದೆ. ಮಂಗಳವಾರ ನಡೆದ 3ನೇ ಟಿ20 ಪಂದ್ಯವನ್ನು ಬಾಂಗ್ಲಾದೇಶ ನಾಟಕೀಯ ರೀತಿಯಲ್ಲಿ 16 ರನ್ನುಗಳಿಂದ ಗೆದ್ದಿತು. ಮೊದಲು ಬ್ಯಾಟಿಂಗ್ ನಡೆಸಿದ ಆತಿಥೇಯ ತಂಡ 2 ವಿಕೆಟಿಗೆ 158 ರನ್ ಪೇರಿಸಿದರೆ, ಸುಸ್ಥಿತಿಯಲ್ಲಿದ್ದ ಇಂಗ್ಲೆಂಡ್ 6 ವಿಕೆಟ್ ನಷ್ಟಕ್ಕೆ 142 ರನ್ ಗಳಿಸಿ ಶರಣಾಯಿತು.
ಮೊದಲೆರಡು ಪಂದ್ಯಗಳನ್ನು ಬಾಂಗ್ಲಾದೇಶ 6 ವಿಕೆಟ್ ಹಾಗೂ 4 ವಿಕೆಟ್ ಅಂತರದಿಂದ ಜಯಿಸಿತ್ತು. ಇದಕ್ಕೂ ಹಿಂದಿನ ಏಕದಿನ ಸರಣಿ 2-1 ಅಂತರದಿಂದ ಇಂಗ್ಲೆಂಡ್ ಪಾಲಾಗಿತ್ತು. ಇಂಗ್ಲೆಂಡ್ 13 ಓವರ್‌ಗಳ ಅಂತ್ಯಕ್ಕೆ ಒಂದೇ ವಿಕೆಟಿಗೆ 100 ರನ್ ಮಾಡಿ ಗೆಲುವಿನ ಸಾಧ್ಯತೆಯನ್ನು ತೆರೆದಿರಿಸಿತ್ತು. ಡೇವಿಡ್ ಮಲಾನ್ (53) ಮತ್ತು ಜಾಸ್ ಬಟ್ಲರ್ (40) ಕ್ರೀಸ್ ಆಕ್ರಮಿಸಿಕೊಂಡಿದ್ದರು. ಆದರೆ ಉಳಿದ 7 ಓವರ್‌ಗಳಲ್ಲಿ 59 ರನ್ ಗಳಿಸಲು ಇಂಗ್ಲೆಂಡ್‌ನಿಂದ ಸಾಧ್ಯವಾಗಲಿಲ್ಲ. ಮಲಾನ್ ಮತ್ತು ಬಟ್ಲರ್ ಸತತ ಎಸೆತಗಳಲ್ಲಿ ಔಟಾದರು. ಮೊಯಿನ್ ಅಲಿ (9), ಬೆನ್ ಡಕೆಟ್ (11), ಸ್ಯಾಮ್ ಕರನ್ (4) ಬೇಗನೇ ವಾಪಸಾದರು.
ಕ್ರಿಸ್ ವೋಕ್ಸ್ ಮತ್ತು ಕ್ರಿಸ್ ಜೋರ್ಡನ್ ಜೋಡಿಯಿಂದ ತಂಡವನ್ನು ದಡ ಸೇರಿಸಲಾಗಲಿಲ್ಲ. ಡೆತ್ ಓವರ್‌ಗಳಲ್ಲಿ ಟಸ್ಕಿನ್ ಅಹ್ಮದ್, ಮುಸ್ತಫಿಜುರ್ ರೆಹಮಾನ್ ಮತ್ತು ಶಕಿಬ್ ಅಲ್ ಹಸನ್ ಅತ್ಯಂತ ಬಿಗಿಯಾದ ದಾಳಿ ನಡೆಸಿ ಇಂಗ್ಲೆಂಡ್‌ಗೆ ಕಡಿವಾಣ ಹಾಕಿದರು. ಸಂಕ್ಷಿಪ್ತ ಸ್ಕೋರ್: ಬಾಂಗ್ಲಾದೇಶ-2 ವಿಕೆಟಿಗೆ 158 (ಲಿಟನ್ ದಾಸ್ 73, ನಜ್ಮುಲ್ ಹುಸೇನ್ ಔಟಾಗದೆ 47, ರೋನಿ ತಾಲೂಕಾªರ್ 24, ಜೋರ್ಡನ್ 21ಕ್ಕೆ 1, ರಶೀದ್ 23ಕ್ಕೆ 1). ಇಂಗ್ಲೆಂಡ್-6 ವಿಕೆಟಿಗೆ 142 (ಮಲಾನ್ 53, ಬಟ್ಲರ್ 40, ಟಸ್ಕಿನ್ ಅಹ್ಮದ್ 26ಕ್ಕೆ 2, ಮುಸ್ತಫಿಜುರ್ 14ಕ್ಕೆ 1, ತನ್ವೀರ್ ಇಸ್ಲಾಮ್ 17ಕ್ಕೆ 1). ಪಂದ್ಯಶ್ರೇಷ್ಠ: ಲಿಟನ್ ದಾಸ್. ಸರಣಿಶ್ರೇಷ್ಠ: ನಜ್ಮುಲ್ ಹುಸೇನ್.