Advertisement

ನಾಗ್ಪುರ: ಸರಣಿ ನಗುವಿಗೆ ಭಾರತ-ಬಾಂಗ್ಲಾ ಕಾತರ

09:50 AM Nov 11, 2019 | Sriram |

ನಾಗ್ಪುರ: ಬಾಂಗ್ಲಾದೇಶಕ್ಕೆ ಹೊಸದಿಲ್ಲಿಯಲ್ಲಿ ಮೊದಲ ಗೆಲುವು ಬಿಟ್ಟುಕೊಟ್ಟ ಬಳಿಕ ರಾಜ್‌ಕೋಟ್‌ನಲ್ಲಿ ರಾಜ್ಯಭಾರ ನಡೆಸಿದ ಭಾರತವೀಗ ಟಿ20 ಲಯಕ್ಕೆ ಮರಳಿದ ಸೂಚನೆ ನೀಡಿದೆ.

Advertisement

ಮುಂದಿನದು ಸರಣಿ ಗೆಲುವಿನ ಸರದಿ. ನಾಗ್ಪುರದಲ್ಲಿ ರವಿವಾರ ನಿರ್ಣಾಯಕ ಪಂದ್ಯ ಏರ್ಪಡಲಿದ್ದು, 2-1ರ ಸಂಭ್ರಮಕ್ಕೆ ಎರಡೂ ತಂಡಗಳು ಹಾತೊರೆಯುತ್ತಿವೆ.
ನಾಯಕ ವಿರಾಟ್‌ ಕೊಹ್ಲಿ ಸಹಿತ ಕೆಲವು ಮಂದಿ ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಕಣಕ್ಕಿಳಿದಿದ್ದ ಭಾರತ, ಹೊಸದಿಲ್ಲಿಯಲ್ಲಿ ಎಲ್ಲ ವಿಭಾಗಗಳಲ್ಲೂ ಹಿನ್ನಡೆ ಅನುಭವಿಸಿತ್ತು. ಆದರೆ ರಾಜ್‌ಕೋಟ್‌ನಲ್ಲಿ ಅಷ್ಟೇ ಬೇಗ ಚೇತರಿಸಿಕೊಂಡು ಗೆಲುವಿನ ಹಳಿ ಏರಿತು. ಎರಡೂ ಪಂದ್ಯಗಳಲ್ಲಿ ಚೇಸಿಂಗ್‌ ತಂಡಗಳೇ ಗೆಲುವು ಸಾಧಿಸಿದ್ದನ್ನು ಮರೆಯುವಂತಿಲ್ಲ. ಹೀಗಾಗಿ ನಾಗ್ಪುರದಲ್ಲೂ ಟಾಸ್‌ ನಿರ್ಣಾಯಕವಾಗಲಿದೆ.

ರಾಜ್‌ಕೋಟ್‌ನಲ್ಲಿ ಬಾಂಗ್ಲಾದ ಅಬ್ಬರವೇನೂ ಕಡಿಮೆ ಇರಲಿಲ್ಲ. ಖಲೀಲ್‌ ಅಹ್ಮದ್‌ ದಾಳಿಯನ್ನು ಪುಡಿಗುಟ್ಟುತ್ತ ಸಾಗಿದ್ದ ಮಹಮ್ಮದುಲ್ಲ ಪಡೆ ಭಾರೀ ಮೊತ್ತದ ಮುನ್ಸೂಚನೆ ನೀಡಿತ್ತು. ಆದರೆ ಲೆಗ್‌ಸ್ಪಿನ್ನರ್‌ ಯಜುವೇಂದ್ರ ಚಹಲ್‌ ದಾಳಿಗಿಳಿದ ಬಳಿಕ ತಣ್ಣಗಾಯಿತು. ಚೇಸಿಂಗ್‌ ವೇಳೆ ಕಪ್ತಾನನ ಆಟವಾಡಿದ ರೋಹಿತ್‌ ಶರ್ಮ ಯಾವುದೇ ಒತ್ತಡವಿಲ್ಲದೆ ಭಾರತವನ್ನು ದಡ ಸೇರಿಸಿದರು. ನಾಗ್ಪುರದಲ್ಲೂ ಆತಿಥೇಯರು ಇದೇ ಲಯದಲ್ಲಿ ಸಾಗಿದರೆ ಸರಣಿ ಗೆಲುವು ಅಸಾಧ್ಯವೇನಲ್ಲ.

ಖಲೀಲ್‌ ಬದಲು ಶಾದೂìಲ್‌?
ನಿರ್ಣಾಯಕ ಪಂದ್ಯಕ್ಕಾಗಿ ದುಬಾರಿ ಬೌಲರ್‌ ಖಲೀಲ್‌ ಅಹ್ಮದ್‌ ಅವರನ್ನು ಹೊರಗಿರಿಸಿ ಶಾದೂìಲ್‌ ಠಾಕೂರ್‌ ಅವರನ್ನು ಆಡಿಸುವ ಸಾಧ್ಯತೆ ಗೋಚರಿಸುತ್ತಿದೆ. ಹಾಗೆಯೇ ಪ್ರಮುಖ ಆಟಗಾರರಾದ ಮನೀಷ್‌ ಪಾಂಡೆ, ಸಂಜು ಸ್ಯಾಮ್ಸನ್‌, ರಾಹುಲ್‌ ಚಹರ್‌ ಇನ್ನೂ ಆಡುವ ಬಳಗದಲ್ಲಿ ಕಾಣಿಸಿಕೊಂಡಿಲ್ಲ. ಹಾಗೆಯೇ ಕೆ.ಎಲ್‌. ರಾಹುಲ್‌, ಕೃಣಾಲ್‌ ಪಾಂಡ್ಯ, ಶಿವಂ ದುಬೆ ಇನ್ನೂ ನೈಜ ಆಟಕ್ಕೆ ಕುದುರಿಲ್ಲ. ಧವನ್‌, ಪಂತ್‌ ಸಾಧನೆಯೂ ಅಷ್ಟಕ್ಕಷ್ಟೇ.

ಈ ಸರಣಿ ಮುಗಿದ ಬೆನ್ನಲ್ಲೇ ಮುಂದಿನ ತಿಂಗಳು ವೆಸ್ಟ್‌ ಇಂಡೀಸ್‌ ವಿರುದ್ಧ ಇನ್ನೊಂದು ಟಿ20 ಸರಣಿ ನಡೆಯಲಿಕ್ಕಿದೆ. ಸೀನಿಯರ್ ಆಟಗಾರರು ತಂಡಕ್ಕೆ ವಾಪಸಾಗಲಿದ್ದಾರೆ. ಆಗ ಈಗಿನ ತಂಡದಲ್ಲಿದ್ದ ಹಲವರಿಗೆ ಅಲ್ಲಿ ಅವಕಾಶ ನೀಡುವುದು ಕಷ್ಟವಾಗುತ್ತದೆ. ಒಟ್ಟಾರೆ, ಮುಂದಿನ ವರ್ಷದ ಟಿ20 ವಿಶ್ವಕಪ್‌ ಪಂದ್ಯಾವಳಿಯ ಒಳಗೆ ಸಮರ್ಥ ತಂಡವೊಂದನ್ನು ಕಟ್ಟುವುದು ಭಾರತದ ಗುರಿಯಾಗಬೇಕಿದೆ. ಇದಕ್ಕೆ ಈ ಸರಣಿಗಳೇ ವೇದಿಕೆಯಾಗಲಿವೆ ಎಂಬುದನ್ನು ಮರೆಯುವಂತಿಲ್ಲ.

Advertisement

ಬಾಂಗ್ಲಾದೇಶ ಜೋಶ್‌
ಬಾಂಗ್ಲಾದೇಶ ಹೊಸದಿಲ್ಲಿಯಲ್ಲಿ ಅಮೋಘ ಪ್ರದರ್ಶನ ನೀಡಿ ಗಮನ ಸೆಳೆಯಿತು. ಆದರೆ ರಾಜ್‌ಕೋಟ್‌ನಲ್ಲಿ ಲಯ ಕಳೆದುಕೊಂಡಿತು. ಒಟ್ಟಾರೆ ಎರಡೂ ತಂಡಗಳು ಅಸ್ಥಿರ ಪ್ರದರ್ಶನಕ್ಕೆ ಸಾಕ್ಷಿಯಾಗಿದ್ದನ್ನು ಮರೆಯುವಂತಿಲ್ಲ.

ಅನುಭವದ ದೃಷ್ಟಿಯಲ್ಲಿ ಬಾಂಗ್ಲಾದೇಶ ಟೀಮ್‌ ಇಂಡಿಯಾಕ್ಕಿಂತ ಎಷ್ಟೋ ಮೇಲ್ಮಟ್ಟದಲ್ಲಿದೆ. ಜೋಶ್‌ ಕೂಡ ಜೋರಾಗಿಯೇ ಇದೆ. ತಮಿಮ್‌ ಇಕ್ಬಾಲ್‌, ಶಕಿಬ್‌ ಅಲ್‌ ಹಸನ್‌ ಅನುಪಸ್ಥಿತಿಯಲ್ಲೂ ಉನ್ನತ ಮಟ್ಟದ ಪ್ರದರ್ಶನ ನೀಡುವ ಸಾಮರ್ಥ್ಯ ಹೊಂದಿದೆ. ಹೀಗಾಗಿ ಸರಣಿ ಗೆಲುವಿಗೆ ಗರಿಷ್ಠ ಪ್ರಯತ್ನ ಪಡುವುದರಲ್ಲಿ ಅನುಮಾನವಿಲ್ಲ.

ನಾಗ್ಪುರದಲ್ಲಿ ಒಂದರಲ್ಲಷ್ಟೇ ಜಯ
ನಾಗ್ಪುರದಲ್ಲಿ ಈ ವರೆಗೆ 11 ಟಿ20 ಅಂತಾರಾಷ್ಟ್ರೀಯ ಪಂದ್ಯಗಳು ನಡೆದರೂ ಇದರಲ್ಲಿ ಭಾರತ ಪಾಲ್ಗೊಂಡದ್ದು ಮೂರರಲ್ಲಿ ಮಾತ್ರ. ಇದರಲ್ಲಿ ಒಂದರಲ್ಲಷ್ಟೇ ಗೆದ್ದ ಭಾರತ, ಉಳಿದೆರಡರಲ್ಲಿ ಸೋಲುಂಡಿದೆ.

ಇಲ್ಲಿ ಮೊದಲ ಪಂದ್ಯ ನಡೆದದ್ದು ಸರಿಯಾಗಿ ದಶಕದ ಹಿಂದೆ. 2009ರ ಈ ಮುಖಾಮುಖೀಯಲ್ಲಿ ಭಾರತ-ಶ್ರೀಲಂಕಾ ಎದುರಾಗಿದ್ದವು. ಲಂಕಾ ಇದನ್ನು 29 ರನ್ನುಗಳಿಂದ ಗೆದ್ದಿತ್ತು. ನಾಯಕ ಕುಮಾರ ಸಂಗಕ್ಕರ (78) ಸಾಹಸದಿಂದ ಶ್ರೀಲಂಕಾ 5 ವಿಕೆಟಿಗೆ 215 ರನ್‌ ಪೇರಿಸಿದರೆ, ಧೋನಿ ಪಡೆ 9ಕ್ಕೆ 186 ರನ್‌ ಮಾಡಿ ಶರಣಾಯಿತು. ಗಂಭೀರ್‌ (55) ಅರ್ಧ ಶತಕ ಹೊಡೆದರು.

2016ರ ನ್ಯೂಜಿಲ್ಯಾಂಡ್‌ ಎದುರಿನ ಸಣ್ಣ ಮೊತ್ತದ ಪಂದ್ಯದಲ್ಲೂ ಭಾರತ ಸೋಲನ್ನು ಮೈಮೇಲೆ ಎಳೆದುಕೊಂಡಿತು. ಕಿವೀಸ್‌ 7ಕ್ಕೆ 126 ರನ್‌ ಮಾಡಿದರೆ, ಭಾರತ 18.1 ಓವರ್‌ಗಳಲ್ಲಿ 79ಕ್ಕೆ ಆಲೌಟ್‌ ಆಗಿತ್ತು. ಇದು ಟಿ20ಯಲ್ಲಿ ಭಾರತದ 2ನೇ ಕನಿಷ್ಠ ಗಳಿಕೆ ಆಗಿದೆ. ಸ್ಯಾಂಟ್ನರ್‌ 11ಕ್ಕೆ 4, ಸೋಧಿ 18ಕ್ಕೆ 3, ನಥನ್‌ ಮೆಕಲಮ್‌ 15ಕ್ಕೆ 2 ವಿಕೆಟ್‌ ಹಾರಿಸಿ ಕಿವೀಸ್‌ಗೆ ಅಮೋಘ ಜಯ ತಂದಿತ್ತರು.

ನಾಗ್ಪುರದಲ್ಲಿ ಭಾರತಕ್ಕೆ ಏಕೈಕ ಗೆಲುವು ಒಲಿದದ್ದು 2017ರ ಇಂಗ್ಲೆಂಡ್‌ ಎದುರಿನ ಪಂದ್ಯದಲ್ಲಿ. ಅಂತರ 5 ರನ್‌. ಭಾರತ 8ಕ್ಕೆ 144 ರನ್‌ ಹೊಡೆದರೆ, ಇಂಗ್ಲೆಂಡ್‌ 6ಕ್ಕೆ 139 ರನ್‌ ಗಳಿಸಲಷ್ಟೇ ಶಕ್ತವಾಯಿತು.

ಪಂತ್‌ ಅವರನ್ನು ಅವರಷ್ಟಕ್ಕೇ ಬಿಟ್ಟುಬಿಡಿ: ರೋಹಿತ್‌ ಮನವಿ
ಟೀಮ್‌ ಇಂಡಿಯಾದ ಉಸ್ತುವಾರಿ ನಾಯಕ ರೋಹಿತ್‌ ಶರ್ಮ ಮತ್ತೂಮ್ಮೆ ರಿಷಭ್‌ ಪಂತ್‌ ಪರ ಬ್ಯಾಟ್‌ ಬೀಸಿದ್ದಾರೆ. ದಯವಿಟ್ಟು ಅವರ ಬಗ್ಗೆ ಏನೂ ಕಮೆಂಟ್ಸ್‌ ಮಾಡದೇ ಅವರಷ್ಟಕ್ಕೇ ಬಿಟ್ಟುಬಿಡಿ ಎಂದು ಕ್ರಿಕೆಟ್‌ ಅಭಿಮಾನಿಗಳಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.

“ಯುವ ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ ಪ್ರತೀ ದಿನ ದಿನ, ಪ್ರತೀ ನಿಮಿಷವೂ ಚರ್ಚೆಗೆ ಗ್ರಾಸವಾಗುತ್ತಿದ್ದಾರೆ. ನಾನು ಎಲ್ಲರಲ್ಲೂ ಮನವಿ ಮಾಡಿಕೊಳ್ಳುವುದೇನೆಂದರೆ, ದಯವಿಟ್ಟು ಪಂತ್‌ ಅವರನ್ನು ಸ್ವಲ್ಪ ಕಾಲ ಅವರಷ್ಟಕ್ಕೇ ಬಿಟ್ಟುಬಿಡು. ಇದರಿಂದ ಅವರ ಸಾಧನೆಗೆ ಬಹಳ ನೆರವಾಗಲಿದೆ’ ಎಂದು ರೋಹಿತ್‌ ಶನಿವಾರದ ಪತ್ರಿಕಾಗೋಷ್ಠಿಯಲ್ಲಿ ವಿನಂತಿಸಿಕೊಂಡರು.

“ಪಂತ್‌ ಓರ್ವ ನಿರ್ಭೀತ ಕ್ರಿಕೆಟಿಗ. ಅವರಿಗೆ ಆಡಳಿತ ಮಂಡಳಿ ಅಂಥದೊಂದು ಸ್ವಾತಂತ್ರ್ಯ ಕೊಟ್ಟಿದೆ. ಇನ್ನೂ 22ರ ಹರೆಯ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ ಛಾಪು ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಜನರೆಲ್ಲ ಅವರ ಪ್ರತಿಯೊಂದು ಹೆಜ್ಜೆಗೂ ಟೀಕೆ ಮಾಡುತ್ತಿದ್ದಾರೆ. ಆದರೆ ಅವರಿಗೆ ಅವರ ಆಟವನ್ನಾಡಲು ಬಿಟ್ಟುಬಿಡಬೇಕಿದೆ. ನೀವೆಲ್ಲ ಸ್ವಲ್ಪ ಸಮಯ ಪಂತ್‌ ಬಗ್ಗೆ ಯೋಚಿಸುವುದನ್ನು ನಿಲ್ಲಿಸಿ. ಇದರಿಂದ ಅವರಿಗೆ ಇನ್ನಷ್ಟು ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ’ ಎಂದು ರೋಹಿತ್‌ ನೇರವಾಗಿ ಹೇಳಿದರು.

ಸಂಭಾವ್ಯ ತಂಡಗಳು
ಭಾರತ: ರೋಹಿತ್‌ ಶರ್ಮ (ನಾಯಕ), ಶಿಖರ್‌ ಧವನ್‌, ಕೆ.ಎಲ್‌. ರಾಹುಲ್‌, ಶ್ರೇಯಸ್‌ ಅಯ್ಯರ್‌, ರಿಷಭ್‌ ಪಂತ್‌, ವಾಷಿಂಗ್ಟನ್‌ ಸುಂದರ್‌, ಶಿವಂ ದುಬೆ, ಕೃಣಾಲ್‌ ಪಾಂಡ್ಯ, ದೀಪಕ್‌ ಚಹರ್‌, ಶಾದೂìಲ್‌ ಠಾಕೂರ್‌, ಯಜುವೇಂದ್ರ ಚಹಲ್‌.

ಬಾಂಗ್ಲಾದೇಶ: ಮೊಹಮ್ಮದ್‌ ನೈಮ್‌, ಲಿಟನ್‌ ದಾಸ್‌, ಸೌಮ್ಯ ಸರ್ಕಾರ್‌, ಮುಶ್ಫಿಕರ್‌ ರಹೀಂ, ಮಹಮದುಲ್ಲ (ನಾಯಕ), ಚಫಿಫ್ ಹೊಸೈನ್‌, ಅಲ್‌ ಅಮಿನ್‌ ಹೊಸೈನ್‌, ಮುಸ್ತಫಿಜುರ್‌ ರಹಮಾನ್‌, ಶಫಿಯುಲ್‌ ಇಸ್ಲಾಮ್‌, ಮೊಸದೆಕ್‌ ಹೊಸೈನ್‌, ಅಮಿನುಲ್‌ ಇಸ್ಲಾಮ್‌.

ಆರಂಭ: ಸಂಜೆ 7.00
ಪ್ರಸಾರ: ಸ್ಟಾರ್‌ ನ್ಪೋರ್ಟ್ಸ್

Advertisement

Udayavani is now on Telegram. Click here to join our channel and stay updated with the latest news.

Next