ಬೆಳಗಾವಿ: ಗಲಭೆ ಪೀಡಿತ ಬಾಂಗ್ಲಾದೇಶದಿಂದ 25 ವೈದ್ಯಕೀಯ ವಿದ್ಯಾರ್ಥಿಗಳು ಪಾರಾಗಿ ಬೆಳಗಾವಿಗೆ ಆಗಮಿಸಿದ್ದಾರೆ.
ನಾಲ್ಕು ದಿನಗಳ ಹಿಂದೆಯೇ ಈ ಎಲ್ಲ ವಿದ್ಯಾರ್ಥಿಗಳು ಬೆಳಗಾವಿಗೆ ಬಂದಿದ್ದಾರೆ. ಬೆಳಗಾವಿ ಸಂಸದ ಜಗದೀಶ ಶೆಟ್ಟರ ಹಾಗೂ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ನೆರವಿನಿಂದ ಸುರಕ್ಷಿತವಾಗಿ ಬೆಳಗಾವಿಗೆ ಬಂದಿದ್ದಾರೆ.
ಬಾಂಗ್ಲಾದಿಂದ ಬೆಳಗಾವಿಗೆ ಬಂದ ವೈದ್ಯಕೀಯ ವಿದ್ಯಾರ್ಥಿ ನೇಹಲ್ ಸವಣೂರು ಮಾಧ್ಯಮದವರೊಂದಿಗೆ ಮಾತನಾಡಿ, ಬಾಂಗ್ಲಾದಲ್ಲಿ ನಾನೂ ಭಯಭೀತನಾಗಿದ್ದೆ. ಈಗಿನ ಪರಿಸ್ಥಿತಿ ಇನ್ನೂ ಭಯಂಕರ ಇದೆ. ಹೇಗೋ ಬಚಾವ್ ಆಗಿ ಗಲಭೆ ಪೀಡಿತ ದೇಶದಿಂದ ಬಂದಿದ್ದೇವೆ. ಈ ಸಂದರ್ಭದಲ್ಲಿ ನಾವು ಬಾಂಗ್ಲಾದಲ್ಲಿಯೇ ಇದ್ದಿದ್ದರೆ ಕೊಠಡಿಯಲ್ಲಿ ಕೂಡಿ ಹಾಕಿ ಹಿಂಸೆ ನೀಡುತ್ತಿದ್ದರು ಎಂದು ಬಾಂಗ್ಲಾದಲ್ಲಿನ ಹಿಂಸಾಚಾರದ ಭಯಾನಕ ಘಟನೆಯನ್ನು ನೇಹಲ್ ನೆನಪಿಸಿಕೊಂಡರು.
ಗಲಭೆ ಪೀಡಿತ ಬಾಂಗ್ಲಾದೇಶದಲ್ಲಿ ಸಾಕಷ್ಟು ನೋವು ಅನುಭವಿಸಿದ್ದೇವೆ. ಎಲ್ಲ ಕಡೆಯೂ ಕರ್ಪ್ಯೂ ಇತ್ತು, ಊಟಕ್ಕೂ ಪರದಾಡಬೇಕಾಯಿತು. ಎರಡೇ ನಿಮಿಷದಲ್ಲಿ ಹೊರಗೆ ಹೋಗಿ ತಿನ್ನಲು ಏನಾದರೂ ತಂದು ರೂಮ್ ಸೇರುತ್ತಿದ್ದೇವು. ಮಹಿಳಾ ಹಾಸ್ಟೆಲ್ ಹತ್ತಿರ ಬಹಳ ಸಮಸ್ಯೆ ಇತ್ತು. ಅಲ್ಲಿ ಊಟವೂ ಇರಲಿಲ್ಲ. ಹಿಂದೂಗಳನ್ನೇ ಬಾಂಗ್ಲಾಗರು ಟಾರ್ಗೆಟ್ ಮಾಡಲು ಶುರು ಮಾಡಿದ್ದರು. ನೆಟ್ ವರ್ಕ್ ಇರಲಿಲ್ಲ, ಪೋಷಕರ ಜತೆಗೆ ಮಾತನಾಡಲೂ ಆಗಲಿಲ್ಲ ಎಂದು ನೋವು ತೋಡಿಕೊಂಡರು.