Advertisement

ಬಾಂಗ್ಲಾಕ್ಕೆ ಮೊದಲ ಸೂಪರ್‌-12 ಗೆಲುವು; ತಸ್ಕಿನ್‌ ಅಹ್ಮದ್‌ ಜೀವನಶ್ರೇಷ್ಠ ಬೌಲಿಂಗ್‌

10:13 PM Oct 24, 2022 | Team Udayavani |

ಹೋಬರ್ಟ್: ಪೇಸ್‌ ಬೌಲರ್‌ ತಸ್ಕಿನ್‌ ಅಹ್ಮದ್‌ ಅವರ ಜೀವನಶ್ರೇಷ್ಠ ಬೌಲಿಂಗ್‌ ಸಾಧನೆಯಿಂದಾಗಿ ಬಾಂಗ್ಲಾದೇಶ ಟಿ20 ವಿಶ್ವಕಪ್‌ ಸೂಪರ್‌-12 ಹಂತದಲ್ಲಿ ಮೊದಲ ಗೆಲುವನ್ನು ಕಂಡಿತು. ಸೋಮವಾರ ಮುಖಾಮುಖಿಯಲ್ಲಿ ಬಾಂಗ್ಲಾ ಪಡೆ 9 ರನ್ನುಗಳಿಂದ ನೆದರ್ಲೆಂಡ್ಸ್‌ಗೆ ಸೋಲುಣಿಸಿತು.

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ಬಾಂಗ್ಲಾದೇಶ ದೊಡ್ಡ ಮೊತ್ತವನ್ನೇನೂ ದಾಖಲಿಸಲಿಲ್ಲ. 8 ವಿಕೆಟಿಗೆ ಗಳಿಸಿದ್ದು 144 ರನ್‌ ಮಾತ್ರ. ಆದರೆ ಡಚ್‌ ಪಡೆ ತಸ್ಕಿನ್‌ ಅಹ್ಮದ್‌ ಅವರ ಘಾತಕ ಸ್ಪೆಲ್‌ಗೆ ತತ್ತರಿಸಿತು. ಕೊನೆಯಲ್ಲಿ ಹೋರಾಟ ಸಂಘಟಿಸಿತಾದರೂ ಗೆಲುವು ಸ್ವಲ್ಪದರಲ್ಲೇ ದೂರ ಉಳಿಯಿತು. ಸರಿಯಾಗಿ 20 ಓವರ್‌ಗಳಲ್ಲಿ 135ಕ್ಕೆ ಆಲೌಟ್‌ ಆಯಿತು. ಬಾಂಗ್ಲಾದೇಶವಿನ್ನು ಗುರುವಾರ ದಕ್ಷಿಣ ಆಫ್ರಿಕಾ ಸವಾಲನ್ನು ಎದುರಿಸಲಿದೆ.

ಅಷ್ಟೇನೂ ಕಠಿನವಲ್ಲದ ಗುರಿಯನ್ನು ಬೆನ್ನಟ್ಟಿದ ನೆದರ್ಲೆಂಡ್ಸ್‌ 3.2 ಓವರ್‌ಗಳಲ್ಲೇ 15 ರನ್ನಿಗೆ 4 ವಿಕೆಟ್‌ ಉದುರಿಸಿಕೊಂಡಿತು. ಒಂದೆಡೆ ತಸ್ಕಿನ್‌ ಅಹ್ಮದ್‌ ಘಾತಕವಾಗಿ ಎರಗಿದರೆ, ಇನ್ನೊಂದೆಡೆ ಫೀಲ್ಡಿಂಗ್‌ ಮೂಲಕವೂ ಬಾಂಗ್ಲಾ ಮ್ಯಾಜಿಕ್‌ ಮಾಡಿತು. ಈ ಹಂತದಲ್ಲಿ ತಸ್ಕಿನ್‌ 2 ವಿಕೆಟ್‌ ಕೆಡವಿದರು. ಇಬ್ಬರು ರನೌಟಾದರು.

ಮಧ್ಯಮ ಕ್ರಮಾಂಕದ ಬ್ಯಾಟರ್‌ ಕಾಲಿನ್‌ ಆ್ಯಕರ್‌ಮನ್‌ ಒಂದೆಡೆ ಕ್ರೀಸಿಗೆ ಅಂಟಿಕೊಂಡು ನಿಂತರು. ಬಾಂಗ್ಲಾ ಬೌಲಿಂಗ್‌ ದಾಳಿಗೆ ದಿಟ್ಟ ರೀತಿಯಲ್ಲಿ ಜವಾಬು ನೀಡತೊಡಗಿದರು. ಆದರೆ ಇನ್ನೊಂದೆಡೆ ಅವರಿಗೆ ಸೂಕ್ತ ಬೆಂಬಲ ಲಭಿಸಲಿಲ್ಲ. 100 ರನ್‌ ಆಗುವಷ್ಟರಲ್ಲಿ 8 ವಿಕೆಟ್‌ ಉರುಳಿತು. ಸ್ಕೋರ್‌ 101ಕ್ಕೆ ಏರಿದಾಗ ಸ್ವತಃ ಆ್ಯಕರ್‌ಮನ್‌ ಔಟಾದರು. ಫ್ರೆಡ್‌ ಕ್ಲಾಸೆನ್‌ ಮತ್ತು ಅಂತಿಮ ಆಟಗಾರ ಪಾಲ್‌ ವಾನ್‌ ಮೀಕೆರನ್‌ ಸೇರಿಕೊಂಡು ಮೊತ್ತವನ್ನು 135ರ ತನಕ ತಂದರು. ಆ್ಯಕರ್‌ಮನ್‌ ಪಂದ್ಯದಲ್ಲೇ ಸರ್ವಾಧಿಕ 62 ರನ್‌ ಹೊಡೆದರು (48 ಎಸೆತ, 6 ಬೌಂಡರಿ, 2 ಸಿಕ್ಸರ್‌).

ತಸ್ಕಿನ್‌ ಅಹ್ಮದ್‌ ಸಾಧನೆ 25ಕ್ಕೆ 4 ವಿಕೆಟ್‌. ಇದು ಅವರ ಜೀವನಶ್ರೇಷ್ಠ ಬೌಲಿಂಗ್‌. ಇವರ ಜತೆಗಾರ ಹಸನ್‌ ಮಹ್ಮದ್‌ ಕೂಡ ಅಪಾಯಕಾರಿಯಾಗಿ ಗೋಚರಿಸಿದರು. ಒಂದು ಮೇಡನ್‌ ಓವರ್‌ ಜತೆಗೆ, 15 ರನ್ನಿತ್ತು 2 ವಿಕೆಟ್‌ ಕೆಡವಿದರು. ಶಕಿಬ್‌ ಅಲ್‌ ಹಸನ್‌ ಮತ್ತು ಸೌಮ್ಯ ಸರ್ಕಾರ್‌ ಒಂದೊಂದು ವಿಕೆಟ್‌ ಕಿತ್ತರು.

Advertisement

ಪವರ್‌ ಪ್ಲೇ ಪವರ್‌
ಬಾಂಗ್ಲಾ ಪವರ್‌ ಪ್ಲೇಯಲ್ಲಿ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿತು. ನಜ್ಮುಲ್‌ ಹುಸೇನ್‌ (25)- ಸೌಮ್ಯ ಸರ್ಕಾರ್‌ (14) 5.1 ಓವರ್‌ಗಳಿಂದ 43 ರನ್‌ ಒಟ್ಟುಗೂಡಿಸಿದರು. ಇಲ್ಲಿಂದ ಮುಂದೆ ಡಚ್‌ ಬೌಲಿಂಗ್‌ ದಾಳಿ ಹರಿತಗೊಳ್ಳತೊಡಗಿತು. ಇಬ್ಬರು ಯುವ ಸ್ಪಿನ್ನರ್‌ಗಳನ್ನು ಆಡಿಸುವ ಗ್ಯಾಂಬ್ಲಿಂಗ್‌ ನಡೆಸಿದ ನೆದರ್ಲೆಂಡ್ಸ್‌, ಇದರಲ್ಲಿ ಬಹುತೇಕ ಯಶಸ್ಸು ಕಂಡಿತು. 19 ವರ್ಷದ ಲೆಗ್‌ಸ್ಪಿನ್ನರ್‌ ಶರಿಝ್ ಅಹ್ಮದ್‌, ಎಡಗೈ ಸ್ಪಿನ್ನರ್‌ ಟಿಮ್‌ ಪ್ರಿಂಗ್ಲ್ “ಟೈಡಿ ಸ್ಪೆಲ್‌’ ಮೂಲಕ ಗಮನ ಸೆಳೆದರು. ನಾಯಕ ಶಕಿಬ್‌ (7), ಆರಂಭಕಾರ ನಜ್ಮುಲ್‌ ಇವರಿಬ್ಬರ ಮೋಡಿಗೆ ಸಿಲುಕಿದರು.

38 ರನ್‌ ಮಾಡಿದ ಆಫಿಫ್ ಹುಸೇನ್‌ ಬಾಂಗ್ಲಾ ಸರದಿಯ ಟಾಪ್‌ ಸ್ಕೋರರ್‌ (27 ಎಸೆತ, 2 ಬೌಂಡರಿ, 2 ಸಿಕ್ಸರ್‌). ಕೊನೆಯಲ್ಲಿ ಮೊಸದ್ದೆಕ್‌ ಹುಸೇನ್‌ ಮಿಂಚಿನ ಗತಿಯಲ್ಲಿ ಅಜೇಯ 20 ರನ್‌ ಹೊಡೆದರು.

ಸಂಕ್ಷಿಪ್ತ ಸ್ಕೋರ್‌
ಬಾಂಗ್ಲಾದೇಶ-8 ವಿಕೆಟಿಗೆ 144 (ಆಫಿಫ್ 38, ನಜ್ಮುಲ್‌ 25, ಮೊಸದ್ದೆಕ್‌ ಔಟಾಗದೆ 20. ಮೀಕರನ್‌ 21ಕ್ಕೆ 2, ಬಾಸ್‌ ಡಿ ಲೀಡ್‌ 29ಕ್ಕೆ 2). ನೆದರ್ಲೆಂಡ್ಸ್‌-20 ಓವರ್‌ಗಳಲ್ಲಿ 135 (ಆ್ಯಕರ್‌ಮನ್‌ 62, ಮೀಕರನ್‌ 24, ಎಡ್ವರ್ಡ್ಸ್‌ 16, ಟಸ್ಕಿನ್‌ ಅಹ್ಮದ್‌ 25ಕ್ಕೆ 4, ಹಸನ್‌ ಮಹ್ಮದ್‌ 15ಕ್ಕೆ 2).

ಪಂದ್ಯಶ್ರೇಷ್ಠ: ತಸ್ಕಿನ್‌ ಅಹ್ಮದ್‌.

 

Advertisement

Udayavani is now on Telegram. Click here to join our channel and stay updated with the latest news.

Next