Advertisement

Bangladesh polls: ಐದನೇ ಅವಧಿಗೆ ಪ್ರಧಾನಿಯಾಗಿ ಮರು ಆಯ್ಕೆಯಾದ ಶೇಖ್ ಹಸೀನಾ

08:52 AM Jan 08, 2024 | Team Udayavani |

ಢಾಕಾ: ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಮತ್ತೊಮ್ಮೆ ಪ್ರಧಾನಿಯಾಗಿ ಮಿಂಚಲಿದ್ದಾರೆ. ಭಾನುವಾರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಅವರ ಪಕ್ಷ ಅವಾಮಿ ಲೀಗ್ 300 ಸ್ಥಾನಗಳಲ್ಲಿ ಮೂರನೇ ಎರಡರಷ್ಟು ಸ್ಥಾನಗಳನ್ನು ಗೆದ್ದುಕೊಳ್ಳುವ ಮೂಲಕ ಶೇಖ್ ಹಸೀನಾ ಅವರು ಸತತ ಐದನೇ ಬಾರಿಗೆ ಪ್ರಧಾನಿಯಾಗಿ ಮರು ಆಯ್ಕೆಯಾಗಿದ್ದಾರೆ ಎನ್ನಲಾಗಿದೆ.

Advertisement

ಚುನಾವಣಾ ಫಲಿತಾಂಶದಲ್ಲಿ ಶೇಖ್ ಹಸೀನಾ ಅವರ ಪಕ್ಷ ಅವಾಮಿ ಲೀಗ್ 300 ಸಂಸದೀಯ ಸ್ಥಾನಗಳ ಪೈಕಿ 224 ಸ್ಥಾನಗಳನ್ನು ಗೆದ್ದುಕೊಂಡಿದೆ. ಬಾಂಗ್ಲಾದೇಶದ ರಾಷ್ಟ್ರೀಯ ಪಕ್ಷವು ನಾಲ್ಕು ಸ್ಥಾನಗಳನ್ನು ಗೆದ್ದಿದೆ. ಪಕ್ಷೇತರರು 62 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಇತರರು ಒಂದು ಸ್ಥಾನವನ್ನು ಗೆದ್ದಿದ್ದಾರೆ.

ಶೇಖ್ ಹಸೀನಾ ಅವರು 2009 ರಿಂದ ಪ್ರಧಾನಿಯಾಗಿದ್ದಾರೆ. ಇದಕ್ಕೂ ಮುನ್ನ ಶೇಖ್ ಹಸೀನಾ ಅವರು 1991ರಿಂದ 1996ರವರೆಗೆ ಪ್ರಧಾನಿಯಾಗಿದ್ದರು.

ಶೇಖ್ ಹಸೀನಾ ಅವರು ತಮ್ಮ ಸಂಸದೀಯ ಸ್ಥಾನವಾದ ಗೋಪಾಲ್‌ಗಂಜ್- 3 ಅನ್ನು 2,49,965 ಮತಗಳನ್ನು ಪಡೆಯುವ ಮೂಲಕ ಭಾರಿ ಅಂತರದಿಂದ ಗೆದ್ದಿದ್ದಾರೆ. ಅವರ ಪ್ರತಿಸ್ಪರ್ಧಿ ಎಂ.ನಿಜಾಮ್ ಉದ್ದೀನ್ ಲಷ್ಕರ್ ಕೇವಲ 469 ಮತಗಳನ್ನು ಪಡೆದುಕೊಂಡಿದ್ದಾರೆ. ಶೇಖ್ ಹಸೀನಾ ಅವರು 1986 ರಿಂದ ಎಂಟನೇ ಬಾರಿಗೆ ಗೋಪಾಲಗಂಜ್-3 ರಿಂದ ಚುನಾವಣೆಯಲ್ಲಿ ಗೆದ್ದಿದ್ದಾರೆ.

ಇದರೊಂದಿಗೆ ಶೇಖ್ ಹಸೀನಾ ಅವರು ಬಾಂಗ್ಲಾದೇಶದ ಅತಿ ಹೆಚ್ಚು ಕಾಲ ಪ್ರಧಾನಿಯಾಗಿದ್ದ ದಾಖಲೆಯನ್ನೂ ಮಾಡಿದ್ದಾರೆ. ಅವರು 2009 ರಿಂದ ಇಲ್ಲಿ ಪ್ರಧಾನಿಯಾಗಿದ್ದಾರೆ.

Advertisement

40 ರಷ್ಟು ಮತದಾನ:
2018 ರಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಚುನಾವಣೆಯಲ್ಲಿ ದಾಖಲೆಯ 80 ಪ್ರತಿಶತ ಮತದಾನವಾಗಿತ್ತು. ಆದರೆ ಈ ಬಾರಿಯ ಸಾರ್ವತ್ರಿಕ ಚುನಾವಣೆಯನ್ನು ವಿರೋಧ ಪಕ್ಷಗಳು ಬಹಿಷ್ಕರಿಸಿವೆ. ಇದರ ಪರಿಣಾಮ ಚುನಾವಣೆಯಲ್ಲಿ ಶೇ.40ರಷ್ಟು ಮತಗಳು ಮಾತ್ರ ಚಲಾವಣೆಯಾದವು. ಅದೇ ಸಮಯದಲ್ಲಿ, BNP ಮತ್ತು ಜಮಾತ್-ಎ-ಇಸ್ಲಾಮಿಯ ಬಹಿಷ್ಕಾರವನ್ನು ಜನರು ಮತದಾನದ ಮೂಲಕ ತಿರಸ್ಕರಿಸಿದರು ಎಂದು ಅವಾಮಿ ಲೀಗ್ ಪ್ರಧಾನ ಕಾರ್ಯದರ್ಶಿ ಒಬೈದುಲ್ ಖಾದಿರ್ ಹೇಳಿದ್ದಾರೆ.

ಚುನಾವಣೆಗೂ ಮುನ್ನ ಬಾಂಗ್ಲಾದೇಶದ ಹಲವೆಡೆ ಹಿಂಸಾತ್ಮಕ ಘಟನೆಗಳೂ ನಡೆದಿದ್ದವು. ಭಾನುವಾರವೂ ಮತದಾನದ ವೇಳೆ ದೇಶಾದ್ಯಂತ 18 ಸ್ಥಳಗಳಲ್ಲಿ ಬೆಂಕಿ ಹಚ್ಚಿದ ಘಟನೆಗಳು ನಡೆದಿದ್ದು, ಈ ಪೈಕಿ 10 ಮತಗಟ್ಟೆಗಳನ್ನು ಗುರಿಯಾಗಿಸಲಾಗಿತ್ತು.

ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ (ಬಿಎನ್‌ಪಿ) ನಾಯಕರು ಚುನಾವಣೆಯನ್ನು ಮೋಸ ಎಂದು ಕರೆದಿದ್ದಾರೆ. 2014ರ ಚುನಾವಣೆಯನ್ನೂ ಬಿಎನ್‌ಪಿ ಬಹಿಷ್ಕರಿಸಿತ್ತು. ಆದರೆ, 2018ರ ಚುನಾವಣೆಯಲ್ಲಿ ಪಕ್ಷ ಸ್ಪರ್ಧಿಸಿತ್ತು. ಈ ಬಾರಿಯೂ ಬಿಎನ್‌ಪಿ ಚುನಾವಣೆಯನ್ನು ಬಹಿಷ್ಕರಿಸಿದೆ. ಅದರೊಂದಿಗೆ 15 ರಾಜಕೀಯ ಪಕ್ಷಗಳೂ ಬಹಿಷ್ಕಾರ ಹಾಕಿದ್ದವು. BNP ಕೂಡ 48 ಗಂಟೆಗಳ ಮುಷ್ಕರವನ್ನು ಆಯೋಜಿಸಿತ್ತು, ಇದರಲ್ಲಿ ಮತದಾನ ಮಾಡದಂತೆ ಸಾರ್ವಜನಿಕರಲ್ಲಿ ಮನವಿ ಮಾಡಿತ್ತು. ತಮ್ಮ ಬಹಿಷ್ಕಾರ ಯಶಸ್ವಿಯಾಗಿದೆ ಎಂಬುದಕ್ಕೆ ಕಡಿಮೆ ಮತದಾನವೇ ಸಾಕ್ಷಿ ಎಂದು BNP ನಾಯಕರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Yash ಬರ್ತ್ ಡೇಗೆ ಕಟೌಟ್‌ ನಿಲ್ಲಿಸುವ ವೇಳೆ ದುರಂತ; ವಿದ್ಯುತ್ ತಂತಿ ತಗುಲಿ ಮೂವರ ಸಾವು

Advertisement

Udayavani is now on Telegram. Click here to join our channel and stay updated with the latest news.

Next