ಕೋಲ್ಕತಾ: ಈ ವಿಶ್ವಕಪ್‌ನ ಅಪಾಯಕಾರಿ ತಂಡಗಳಾಗಿ ಕಾಣಿಸಿ ಕೊಂಡಿರುವ ಬಾಂಗ್ಲಾದೇಶ ಮತ್ತು ನೆದರ್ಲೆಂಡ್ಸ್ ಶನಿವಾರ ನಡೆಯುವ ವಿಶ್ವಕಪ್ ಪಂದ್ಯದಲ್ಲಿ ಪರಸ್ಪರ ಮುಖಾಮುಖೀಯಾಗಲಿದ್ದು ಗೆಲುವಿನ ನಿರೀಕ್ಷೆಯಲ್ಲಿದೆ. ಇಲ್ಲಿನ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಈ ವಿಶ್ವಕಪ್‌ನ ಮೊದಲ ಪಂದ್ಯ ನಡೆಯಲಿದೆ.
ಹತ್ತು ದಿನಗಳ ದುರ್ಗಾ ಪೂಜಾ ಸಂಭ್ರಮದ ಬಳಿಕ ಕ್ರೀಡಾಪ್ರಿಯ ನಗರದಲ್ಲಿ ವಿಶ್ವಕಪ್ ಪಂದ್ಯ ವೊಂದು ನಡೆಯುತ್ತಿದೆ. ವಿಶ್ವಕಪ್ ಆರಂಭವಾಗಿ 23 ದಿನಗಳ ಬಳಿಕ ಇಲ್ಲಿ ಲೀಗ್‌ನ ಪಂದ್ಯವೊಂದು ನಡೆಯುತ್ತಿದೆ. ಈ ತಾಣದಲ್ಲಿ ಭಾರತ-ದಕ್ಷಿಣ ಆಫ್ರಿಕಾ ಪಂದ್ಯ, ಸೆಮಿಫೈನಲ್ ಸೇರಿ ಒಟ್ಟು ಐದು ಪಂದ್ಯಗಳು ನಡೆಯಲಿವೆ.
ಬಾಂಗ್ಲಾದೇಶ ಮತ್ತು ನೆದರ್ಲೆಂಡ್ಸ್ ಒಟ್ಟಾರೆ ಐದು ಪಂದ್ಯಗಳನ್ನು ಆಡಿದ್ದು ಒಂದು ಪಂದ್ಯದಲ್ಲಿ ಜಯಭೇರಿ ಬಾರಿಸಿದೆ. ಇನ್ನೊಂದು ಗೆಲುವಿಗಾಗಿ ಬಾಂಗ್ಲಾ ಮತ್ತು ನೆದರ್ಲೆಂಡ್ಸ್ ಹಾತೊರೆಯುತ್ತಿದೆ.
ಅಫ್ಘಾನಿಸ್ಥಾನ ವಿರುದ್ಧ ಗೆಲುವು ಸಾಧಿಸಿದ ಬಳಿಕ ಬಾಂಗ್ಲಾ ಆಬಳಿಕದ ಪಂದ್ಯಗಳಲ್ಲಿ ಭಾರೀ ಸೋಲನ್ನು ಕಂಡಿದೆ. ಹಾಲಿ ಚಾಂಪಿಯನ್ ಇಂಗ್ಲೆಂಡ್, ನ್ಯೂಜಿಲ್ಯಾಂಡ್ ಮತ್ತು ಆತಿಥೇಯ ಭಾರತ ವಿರುದ್ಧ ಬಾಂಗ್ಲಾ ಟೈಗರ್ ಯಾವುದೇ ಮ್ಯಾಜಿಕ್ ಸಾಧಿಸಲು ವಿಫಲವಾಗಿದೆ. ಆಬಳಿಕ ನಡೆದ ದಕ್ಷಿಣ ಆಫ್ರಿಕಾ ವಿರುದ್ಧವೂ ಶಕಿಬ್ ಪಡೆ ಯಾವುದೇ ಹೋರಾಟ ನೀಡಲು ಅಸಮರ್ಥವಾಯಿತು.
ನಾಯಕ ಶಕಿಬ್ ಹೆಚ್ಚಿನ ಪಂದ್ಯ ಗಳಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿ ಸಲು ವಿಫಲರಾಗಿದ್ದಾರೆ. ಸ್ಫೋಟಕ ಖ್ಯಾತಿಯ ನಜ್ಮುಲ್ ಹೊಸೈನ್ ಶಾಂಟೊ ಕೂಡ ವಿಫಲವಾಗಿರುವುದು ತಂಡಕ್ಕೆ ನಿರಾಶೆಯನ್ನುಂಟುಮಾಡಿದೆ. ಏಷ್ಯಾಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ತೌಹಿದ್ ಹೃದಯ್ ಕೂಡ ಬ್ಯಾಟಿಂಗ್‌ನಲ್ಲಿ ನೀರಸ ಪ್ರದರ್ಶನ ನೀಡಿದ್ದಾರೆ.
ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಅಮೋಘ ನಿರ್ವಹಣೆ ನೀಡುವ ಮೂಲಕ ದಕ್ಷಿಣ ಆಫ್ರಿಕಾಕ್ಕೆ ಆಘಾತ ಉಂಟು ಮಾಡಿದ್ದ ನೆದರ್ಲೆಂಡ್ಸ್ ತಂಡವು ಬಾಂಗ್ಲಾ ದೇಶಕ್ಕೆ ಯಾವ ರೀತಿಯ ಹೊಡೆತ ನೀಡಬಹುದು ಎಂಬುದನ್ನು ಕಾದು ನೋಡಬೇಕಾಗಿದೆ.