ಢಾಕಾ: ಭಾರತ-ಬಾಂಗ್ಲಾದೇಶದ ನಡುವೆ 2018ರಲ್ಲೇ ನಡೆದಿದ್ದ ಮಾತುಕತೆ ಇದೀಗ ಜಾರಿಯಾಗಿದೆ. ಇದು ಭಾರತ-ಬಾಂಗ್ಲಾ-ಜಪಾನ್ ಮೂರುದೇಶಗಳಿಗೆ ಲಾಭಕಾರಿಯಾಗಿದೆ.
ಇಂಡೋ-ಪೆಸಿಫಿಕ್ ವಲಯವನ್ನು ಬಲಿಷ್ಠಗೊಳಿಸಲು ಸಹಕಾರಿಯಾಗಲಿದೆ. 2018ರಲ್ಲೇ ಆಗಿದ್ದ ಮಾತುಕತೆಯಂತೆ ಬಾಂಗ್ಲಾದೇಶದ ಚತ್ತೋಗ್ರಾಮ್ ಮತ್ತು ಮೋಂಗ್ಲಾ ಬಂದರುಗಳಿಗೆ ಭಾರತವಿನ್ನು ನೇರ ಪ್ರವೇಶ ಪಡೆಯಲಿದೆ.
ಪಶ್ಚಿಮ ಬಂಗಾಳ, ಈಶಾನ್ಯ ರಾಜ್ಯಗಳ ಮೂಲಕ ಸರಕು ಸಾಗಣೆ ಮಾಡಲು ಸುಲಭವಾಗಲಿದೆ. ಹೀಗಾಗಿ, ಆ ದೇಶದಿಂದ ಭಾರತಕ್ಕೆ, ಭಾರತದಿಂದ ಬಾಂಗ್ಲಾಕ್ಕೆ ಹಡಗುಗಳ ಮೂಲಕ ಸರಕು ಸಾಗಣೆ ಮಾಡಬಹುದು.
ಇದು ಸಮಯವನ್ನು ಉಳಿಸುತ್ತದೆ, ವೆಚ್ಚವನ್ನೂ ತಗ್ಗಿಸುತ್ತದೆ. ಬಂಗಾಳ ಕೊಲ್ಲಿಯಲ್ಲಿ ಅತ್ಯುತ್ತಮ ಸಂಪರ್ಕ ಸಾಧಿಸಲು ಅನುಕೂಲವಾಗಲಿದೆ.
ಜಪಾನ್ ಬಾಂಗ್ಲಾದ ಮಹೇಶಕಾಲಿ ಜಿಲ್ಲೆಯ ಮಾತರ್ಬರಿಯಲ್ಲಿ ಸಮುದ್ರದಾಳದಲ್ಲಿ ಬಂದರು ನಿರ್ಮಿಸುತ್ತಿದೆ. ಈ ನಿರ್ಮಾಣಾನಂತರ ಭಾರತ-ಬಾಂಗ್ಲಾ-ಜಪಾನ್ ಬಾಂಧವ್ಯ ಇನ್ನಷ್ಟು ಎತ್ತರಕ್ಕೇರಬಹುದು.
2018, ಅಕ್ಟೋಬರ್‌ನಲ್ಲೇ ಚತ್ತೋಗ್ರಾಮ, ಮೋಂಗ್ಲಾ ಬಂದರುಗಳನ್ನು ಸರಕು ಸಾಗಣೆಗೆ ಬಳಸಲು ಎರಡೂ ದೇಶಗಳು ಸಮ್ಮತಿಸಿದ್ದವು. ಆದರೆ ಮುಂದೆ ಕೊರೊನಾ ಬಂದಿದ್ದರಿಂದ ಒಪ್ಪಂದ ಜಾರಿಯಾಗಲು ತಡವಾಗಿತ್ತು.