Advertisement

Bangladesh; ಮತ್ತೆ ಹಿಂದೂಗಳು ಗುರಿ: 35ಕ್ಕೂ ಹೆಚ್ಚು ಕಡೆ ದುರ್ಗಾ ಪೆಂಡಾಲ್‌ ಮೇಲೆ ದಾಳಿ

12:25 AM Oct 13, 2024 | Team Udayavani |

ಹೊಸದಿಲ್ಲಿ: ಬಾಂಗ್ಲಾದೇಶದಲ್ಲಿ ಮಾಜಿ ಪ್ರಧಾನಿ ಶೇಖ್‌ ಹಸೀನಾ ಅವರ ಸರಕಾರ ಪತನವಾದ ಬಳಿಕ ಅಲ್ಪಸಂಖ್ಯಾಕ ಹಿಂದೂ ಗಳ ಮೇಲೆ ನಿರಂತರ ದಾಳಿಗಳು ನಡೆಯುತ್ತಿವೆ. ಇದಕ್ಕೆ ಹೊಸ ಸೇರ್ಪಡೆಯೆಂಬಂತೆ ನವರಾತ್ರಿಯ ಶುಭ ಸಂದರ್ಭದಲ್ಲಿ ಹಿಂದೂಗಳನ್ನು ಗುರಿಯಾಗಿಸಿ 35ಕ್ಕೂ ಅಧಿಕ ದಾಳಿಗಳು ನಡೆದಿವೆ.

Advertisement

ಢಾಕಾದ ತಂತಿಬಜಾರ್‌ನ ನವರಾತ್ರಿ ಪೂಜಾ ಮಂಟಪದ ಮೇಲೆ ಶುಕ್ರವಾರ ತಡರಾತ್ರಿ ದುಷ್ಕರ್ಮಿಗಳು ಪೆಟ್ರೋಲ್‌ ಬಾಂಬ್‌ ಎಸೆದಿದ್ದು, ಹಲವರು ಗಾಯಗೊಂಡಿದ್ದಾರೆ. ಇನ್ನೊಂದು ಪೂಜಾ ಪೆಂಡಾಲ್‌ಗೆ ನುಗ್ಗಿದ ಕಿಡಿಗೇಡಿಗಳು ಇಸ್ಲಾಮಿಕ್‌ ಕ್ರಾಂತಿಯ ಹಾಡುಗಳನ್ನು ಹಾಡಿ ದ್ದಾರೆ. ಅ. 1ರಿಂದ ದುರ್ಗಾ ಪೆಂಡಾಲ್‌ಗಳ ಮೇಲೆ ದಾಳಿ ಹಾಗೂ ಕಳ್ಳತನದಂತಹ ಸುಮಾರು 35 ಘಟನೆಗಳು ನಡೆ ದಿವೆ. ಈ ಸಂಬಂಧ 11 ಪ್ರಕರಣಗಳು ದಾಖಲಾಗಿದ್ದು, 17 ಮಂದಿಯನ್ನು ಬಂಧಿಸಲಾಗಿದೆ.

ಮೋದಿ ನೀಡಿದ್ದ ಕಿರೀಟ ಕಳವು
ಸತ್‌ಖೀರಾ ಜಿಲ್ಲೆಯ ದೇವಾಲಯಕ್ಕೆ ಪ್ರಧಾನಿ ಮೋದಿಯವರು ನೀಡಿದ್ದ ಚಿನ್ನದ ಕಿರೀಟ ಶುಕ್ರವಾರ ಕಳವಾಗಿದೆ. ಈ ಬಗ್ಗೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಶನಿವಾರ ಈ ಎಲ್ಲ ಘಟನೆಗಳನ್ನು ಖಂಡಿಸಿ ಪ್ರಕ ಟನೆ ಹೊರಡಿಸಿರುವ ಭಾರತ ವಿದೇಶಾಂಗ ಇಲಾಖೆಯು ರಾಜಧಾನಿ ಢಾಕಾದ ತಂತಿಬಜಾರ್‌ನಲ್ಲಿನ ಪೂಜಾ ಮಂಟಪದ ಮೇಲೆ ಪೆಟ್ರೋಲ್‌ ಬಾಂಬ್‌ ದಾಳಿ ನಡೆಸಿದ್ದು ಮತ್ತು ಸತ್‌ಖೀರಾದಲ್ಲಿರುವ ಜೆಶೋರೇಶ್ವರಿ ಕಾಳಿ ದೇವಸ್ಥಾನದಲ್ಲಿ ಮೋದಿ ನೀಡಿದ್ದ ಕಿರೀಟ ಕಳವಾಗಿರುವುದನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಆ ದೇಶದಲ್ಲಿ ಹಿಂದೂ ದೇಗುಲಗಳನ್ನು ವ್ಯವಸ್ಥಿತವಾಗಿ ವಿರೂಪಗೊಳಿಸಲಾಗುತ್ತಿದೆ. ಇಂತಹ ಘಟನೆಗಳು ಮರುಕಳಿಸದಂತೆ ತಡೆಯುವುದಕ್ಕಾಗಿ ಹಬ್ಬಗಳ ಸಂದರ್ಭದಲ್ಲಿ ಪೂಜಾ ಸ್ಥಳಗಳಿಗೆ ಸುರಕ್ಷೆ ಹಾಗೂ ಭದ್ರತೆ ಒದಗಿಸಲು ಬಾಂಗ್ಲಾ ಸರಕಾರಕ್ಕೆ ಮನವಿ ಮಾಡುತ್ತೇವೆ ಎಂದು ತಿಳಿಸಿದೆ. ಜತೆಗೆ ಕಿರೀಟ ಕಳವು ಮಾಡಿದವರನ್ನು ಆದಷ್ಟು ಬೇಗ ಬಂಧಿಸಿ, ಕಿರೀಟವನ್ನು ವಶಪಡಿಸಿಕೊಂಡು ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಮಾಡಿ ಎಂದು ಆಗ್ರಹಿಸಿದೆ.

ಢಾಕೇಶ್ವರಿ ದೇಗುಲಕ್ಕೆ ಯೂನುಸ್‌ ಭೇಟಿ
ಈ ದಾಳಿಗಳ ನಡುವೆಯೇ ಮಧ್ಯಾಂತರ ಸರಕಾರದ ಮುಖ್ಯಸ್ಥ ಮೊಹಮ್ಮದ್‌ ಯೂನುಸ್‌ ಢಾಕೇಶ್ವರಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ದುರ್ಗಾಪೂಜೆಯಲ್ಲಿ ಪಾಲ್ಗೊಂಡ ಬಳಿಕ ಅವರು ಮಾತನಾಡಿ, ಪ್ರತಿಯೊಬ್ಬ ನಾಗರಿಕನ ಹಕ್ಕು ಖಾತರಿಯಾಗುವ ರೀತಿಯಲ್ಲಿ ಬಾಂಗ್ಲಾದೇಶವನ್ನು ನಿರ್ಮಿಸಬೇಕೆಂದು ಸರಕಾರ ಆಶಿಸುತ್ತದೆ. ದುರ್ಗಾಪೂಜೆ ವೇಳೆ ಸುರಕ್ಷೆಗಾಗಿ ಸಂಬಂಧಪಟ್ಟ ಸಂಸ್ಥೆಗಳು ಕಠಿನ ಶ್ರಮ ವಹಿಸಿವೆ. ಅದಾಗ್ಯೂ ದಾಳಿಗಳು ನಿರಂತರವಾಗಿದ್ದು, ಇದು ಸಾಮೂಹಿಕ ವೈಫ‌ಲ್ಯವನ್ನು ತೋರುತ್ತದೆ ಎಂದಿದ್ದಾರೆ.

ಪಾಕ್‌ ಜತೆಗೆ ಕೈಜೋಡಿಸುವ ಅಪಾಯವಿದೆ: ಮೋಹನ್‌ ಭಾಗವತ್‌
ಬಾಂಗ್ಲಾದೇಶದಲ್ಲಿ ಭಾರತವನ್ನು ಅಪಾಯಕಾರಿ ಎಂದು ಬಿಂಬಿಸಲಾಗುತ್ತಿದೆ. ಭಾರತವು ತನ್ನ ಶತ್ರು ಎಂಬ ಭಾವನೆ ಮೂಡಿಸುವುದರಿಂದ ಮುಂದೆ ಆ ದೇಶವು ಅಣ್ವಸ್ತ್ರಸಜ್ಜಿತ ಪಾಕ್‌ ಜತೆಗೆ ಕೈಜೋಡಿಸುವ ಅಪಾಯವಿದೆ. ವಿಶ್ವಾದ್ಯಂತದ ಹಿಂದೂಗಳು ಬಾಂಗ್ಲಾದ ಹಿಂದೂಗಳ ಬೆಂಬಲಕ್ಕೆ ನಿಲ್ಲಬೇಕು. ಸಮಸ್ಯೆಗೆ ಶೀಘ್ರ ಪರಿಹಾರ ಸಿಗಬೇಕು ಎಂದು ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಒತ್ತಾಯಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next