ದುಬೈ: ಏಷ್ಯಾಕಪ್ ಕೂಟದ ಸೂಪರ್ -4 ಹಣಾಹಣಿಯ ಅಂತಿಮ ಪಂದ್ಯದಲ್ಲಿ ಪಾಕಿಸ್ಥಾನವನ್ನು 37 ರನ್ನುಗಳಿಂದ ಸೋಲಿಸಿದ ಬಾಂಗ್ಲಾದೇಶವು ಈ ಕೂಟದ ಫೈನಲಿಗೇರಿದೆ. ಸೂಪರ್ – 4 ಹಂತದಲ್ಲಿ ಪಾಕ್ ಮತ್ತು ಬಾಂಗ್ಲಾ ತಲಾ ಒಂದೊಂದು ಪಂದ್ಯವನ್ನು ಭಾರತದ ವಿರುದ್ಧ ಸೋತಿದ್ದ ಹಾಗೂ ತಲಾ ಒಂದೊಂದು ಪಂದ್ಯವನ್ನು ಅಫ್ಘಾನ್ ವಿರುದ್ಧ ಗೆದ್ದಿದ್ದ ಕಾರಣದಿಂದ ಈ ಪಂದ್ಯಕ್ಕೆ ಸೆಮಿಫೈನಲ್ ಮಹತ್ವ ಬಂದಿತ್ತು. ಈ ಪಂದ್ಯವನ್ನು ಗೆದ್ದವರು ಶುಕ್ರವಾರದ ಫೈನಲ್ ಮುಖಾಮುಖಿಯಲ್ಲಿ ಭಾರತವನ್ನು ಎದುರಿಸುವ ಅರ್ಹತೆ ಪಡೆಯುತ್ತಿದ್ದರು.
ಮಹತ್ವದ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಬಾಂಗ್ಲಾದೇಶಕ್ಕೆ ರನ್ ಪೇರಿಸುವಲ್ಲಿ ಅಂತಹ ಯಶಸ್ಸೇನೂ ಸಿಗಲಿಲ್ಲ. ವಿಕೆಟ್ ಕೀಪರ್ ಮುಷ್ಫಿಕರ್ ರಹೀಮ್ (99), ಮುಹಮ್ಮದ್ ಮಿಥುನ್ (60) ಮತ್ತು ಮಹಮದುಲ್ಲಾ (25) ಅವರ ಸಾಹಸದ ಬ್ಯಾಟಿಂಗ್ ನೆರವಿನಿಂದ 239 ರನ್ನುಗಳನ್ನಷ್ಟೇ ಕಲೆ ಹಾಕಲು ಸಾಧ್ಯವಾಯಿತು.
ಉತ್ತರವಾಗಿ ಬ್ಯಾಟಿಂಗ್ ಪ್ರಾರಂಭಿಸಿದ ಪಾಕಿಸ್ಥಾನಕ್ಕೆ ಆರಂಭಿಕ ಆಟಗಾರರ ಇಮ್ರಾನ್ ಉಲ್ ಹಕ್ (83) ಮಾತ್ರ ಆಸರೆಯಾದರು. ಉಳಿದಂತೆ ಶೋಯಬ್ ಮಲಿಕ್ (30) ಮತ್ತು ಆಸಿಫ್ ಅಲಿ (31) ಮಾತ್ರವೇ ಸಾಧಾರಣ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಆದರೆ ಇದು ಪಾಕಿಸ್ಥಾನದ ಫೈನಲ್ ಕನಸನ್ನು ನನಸು ಮಾಡಲು ಸಹಕಾರಿಯಾಗಲಿಲ್ಲ. ಬಾಂಗ್ಲಾ ಬೌಲರ್ ಗಳ ಶಿಸ್ತಿನ ಬೌಲಿಂಗ್ ದಾಳಿಗೆ ಪಾಕಿಸ್ಥಾನದ ವಿಕೆಟುಗಳು ಉರುಳುತ್ತಾ ಹೋಯಿತು. ಅಂತಿಮವಾಗಿ ಪಾಕಿಸ್ಥಾನ 50 ಓವರುಗಳ ಮುಕ್ತಾಯಕ್ಕೆ 9 ವಿಕೆಟುಗಳನ್ನು ಕಳೆದುಕೊಂಡು 202 ರನ್ನುಗಳನ್ನು ಕಲೆಹಾಕಲಷ್ಟೇ ಶಕ್ತವಾಯಿತು. ಬಾಂಗ್ಲಾದೇಶದ ಪರ ವೇಗಿ ಮುಷ್ತಫಿಝುರ್ ರಹಮಾನ್ 4 ವಿಕೆಟ್ ಪಡೆದರೆ ಮೆಹ್ದಿ ಹಸನ್ 2 ವಿಕೆಟ್ ಪಡೆದು ಮಿಂಚಿದರು.
Related Articles
ಫೈನಲ್ ಪಂದ್ಯವು ಭಾರತ ಮತ್ತು ಬಾಂಗ್ಲಾದೇಶಗಳ ನಡುವೆ ಇದೇ 28ನೇ ತಾರೀಖಿನ ಶುಕ್ರವಾರದಂದು ನಡೆಯಲಿದೆ. ಈ ಸೋಲಿನ ಮೂಲಕ ಈ ಬಾರಿಯ ಏಷ್ಯಾಕಪ್ ಕೂಟದಲ್ಲಿ ಭಾರತ – ಪಾಕ್ ಮೂರನೇ ಬಾರಿ ಮುಖಾಮುಖಿಯಾಗುವ ಅವಕಾಶವೊಂದು ತಪ್ಪಿ ಹೋದಂತಾಯಿತು.