Advertisement

Bangladesh Crisis: ಭಾರತಕ್ಕೆ ಬಂದ ಶೇಖ್‌ ಹಸೀನಾ; ಲಂಡನ್‌ಗೆ ತೆರಳುವ ಸಾಧ್ಯತೆ

06:08 PM Aug 06, 2024 | Team Udayavani |

ಹೊಸದಿಲ್ಲಿ: ಬಾಂಗ್ಲಾದೇಶ(Bangladesh)ದಲ್ಲಿ ಸರ್ಕಾರಿ ಹುದ್ದೆಗಳಲ್ಲಿ ಮೀಸಲು ಕಡಿತಕ್ಕೆ ಆಗ್ರಹಿಸಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯಿಂದ ಭಾರಿ ಹಿಂಸಾಚಾರ ಭುಗಿಲೆದ್ದು ಸೇನೆಯ ಕ್ಷಿಪ್ರ  ಕ್ರಾಂತಿಯ ಪರಿಣಾಮ ಪ್ರಧಾನಿ ಶೇಖ್‌ ಹಸೀನಾ (Sheikh Hasina) ರಾಜೀನಾಮೆ ಸಲ್ಲಿಸಿದ್ದು, ಬಾಂಗ್ಲಾದಲ್ಲಿನ ಆತಂಕಕಾರಿ ಬೆಳವಣಿಗೆಯಿಂದ ಮಾಜಿ ಪ್ರಧಾನಿ ಹಸೀನಾ  ಭಾರತದ ಗಡಿ ಪ್ರವೇಶಿಸಿ ಗಾಜಿಯಾಬಾದ್‌ನ  ಹಿಂಡನ್‌ ವಾಯುನೆಲೆಗೆ ಆಗಮಿಸಿ ಅಲ್ಲಿಂದ ಲಂಡನ್‌ಗೆ ತೆರಳಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Advertisement

ಎನ್‌ಎಎಸ್‌ ಅಜಿತ್‌ ಭೇಟಿ; ಹಸೀನಾ-ಧೋವಲ್‌ ಮಾತುಕತೆ:  

ಢಾಕಾದಿಂದ  ದೆಹಲಿ ಬಳಿ ಇರುವ ಗಾಜಿಯಾಬಾದ್‌ನ ಹಿಂಡನ್‌ ವಾಯುನೆಲೆಗೆ ಆಗಮಿಸಿದ ಬಾಂಗ್ಲಾ ಮಾಜಿ ಪ್ರಧಾನಿ ಶೇಖ್‌ ಹಸೀನಾ ಅವರನ್ನು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಎಸ್‌) ಅಜಿತ್‌ ದೋವಲ್‌ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಬಾಂಗ್ಲಾ ಸೇನಾ ಮುಖ್ಯಸ್ಥ ವಕಾರ್‌ ಕೈಯಲ್ಲಿ ಮಧ್ಯಂತರ ಮಿಲಿಟರಿ ಆಡಳಿತ 
ಶೇಖ್‌ ಹಸೀನಾ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ, ಪಲಾಯನಗೈದ ಬೆನ್ನಲ್ಲೇ ಬಾಂಗ್ಲಾದೇಶದಲ್ಲಿ ಮಧ್ಯಂತರ ಮಿಲಿಟರಿ ಆಡಳಿತ ಜಾರಿಗೆ ಬಂದಿದೆ. ದೇಶದ ಆಡಳಿತದ ಚುಕ್ಕಾಣಿ ಬಾಂಗ್ಲಾ ಮಿಲಿಟರಿ ಮುಖ್ಯಸ್ಥ ವಕಾರ್‌ ಉಜ್‌ ಜಮಾನ್‌  ವ್ಯಾಪ್ತಿಗೆ ಬಂದಿದೆ.  ಸೇನೆಯೇ ಆಡಳಿತ ನಡೆಸುವುದರಿಂದ ಬಾಂಗ್ಲಾದೇಶದಲ್ಲಿ ಕಠಿಣ ನಿಯಮಗಳು ಜಾರಿಯಾಗಿ, ಜನ ಇನ್ನಷ್ಟು ದಂಗೆಯೇಳಬಹುದು. ಮೀಸಲಾತಿ ರದ್ದಾಗುವವರೆಗೂ ಬಾಂಗ್ಲಾದೇಶದಲ್ಲಿ ಅರಾಜಕತೆ ಮುಂದುವರಿಯಬಹುದು. ಇಲ್ಲವೇ, ಪ್ರತಿಪಕ್ಷಗಳು ಒಗ್ಗೂಡಿ ಸರ್ಕಾರ ರಚನೆಗೆ ಮುಂದಾಗಬಹುದು.

Advertisement

ಬಾಂಗ್ಲಾದಲ್ಲಿ ಹಿಂಸಾಚಾರ ಭಾರತಕ್ಕೆ ತಲೆನೋವು:
ಬಾಂಗ್ಲಾದೇಶದಲ್ಲಿ ಹಿಂಸಾಚಾರವು ಭುಗಿಲೆದ್ದ ಪರಿಣಾಮವು ಭಾರತದ ಮೇಲೂ ಬೀರುವ ಸಾಧ್ಯತೆ ಹೆಚ್ಚಿದ್ದು ಬಾಂಗ್ಲಾದಲ್ಲಿ ಶಾಂತಿ ನೆಲೆಸಿದ್ದಾಗಲೇ ನುಸುಳುಕೋರರು ಭಾರತ ಪ್ರವೇಶಿಸುತ್ತಿದ್ದರು. ಈಗ ಸುಮಾರು 4 ಲಕ್ಷ ಜನ ದಂಗೆಯೆದ್ದಿರುವ ಕಾರಣ ಮತ್ತಷ್ಟು ಮಂದಿ ಭಾರತವನ್ನು ಅಕ್ರಮವಾಗಿ ಪ್ರವೇಶಿಸಿ, ಅವರು ದೇಶಕ್ಕೆ ತಲೆನೋವಾಗಬಹುದು.  ಬಾಂಗ್ಲಾದಲ್ಲಿ ಮಧ್ಯಂತರ ಮಿಲಿಟರಿ ಆಡಳಿತ ಜಾರಿಗೆ ಬಂದ ಕಾರಣ ಭಾರತ ಹಾಗೂ ಬಾಂಗ್ಲಾದೇಶದ ವ್ಯಾಪಾರ, ಒಪ್ಪಂದಗಳ ಮೇಲೆ ಪರಿಣಾಮ ಉಂಟಾಗುವ ಸಾಧ್ಯತೆ ಇದೆ.

ಮಿಲಿಟರಿ ಆಡಳಿತ ಕೊನೆಯಾಗಿ, ಹೊಸ ಸರ್ಕಾರ ರಚನೆಯಾಗಿ, ಪ್ರತಿಭಟನೆ ಶಾಂತವಾಗುವವರೆಗೂ ಭಾರತಕ್ಕೆ ಸಂಕಷ್ಟ ತಪ್ಪಿದ್ದಲ್ಲ ಎಂದೇ ವಿಶ್ಲೇಷಿಸಲಾಗುತ್ತಿದೆ. ಶೇಖ್‌ ಹಸೀನಾ ಭಾರತ ಪರ ನಿಲುವು ಹೊಂದಿದ್ದಾರೆ. ಹಾಗಾಗಿ ಪ್ರತಿಭಟನೆಕಾರರ ಕೋಪ ಭಾರತದ ಮೇಲೆ ತಿರುಗಬಹುದು. ಬಾಂಗ್ಲಾದಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದಾಳಿ ನಡೆಯುವ ಅಪಾಯವೂ ಇದೆ.

ಪ್ರಧಾನಿ ಮೋದಿ, ರಾಹುಲ್‌ಗೆ ವಿದೇಶಾಂಗ ಸಚಿವ ಜೈಶಂಕರ್‌ರಿಂದ ಮಾಹಿತಿ:
ಬಾಂಗ್ಲಾದೇಶದಲ್ಲಿ ನಡೆದ ಪ್ರಸಕ್ತ ಪರಿಸ್ಥಿತಿ, ವಿದ್ಯಾಮಾನಗಳ ಬಗ್ಗೆ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಪ್ರಧಾನಿ ನರೇಂದ್ರ ಮೋದಿಯವರಿಗೆ ಮಾಹಿತಿ ನೀಡಿದ್ದಾರೆ.  ಬಾಂಗ್ಲಾ ಬೆಳವಣಿಗೆ ಬಗ್ಗೆ ಕೇಂದ್ರ ಸರಕಾರವು ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿಗೂ ವಿದೇಶಾಂಗ ಸಚಿವ ಜೈ ಶಂಕರ್‌ ಸದನ ನಡುವೆಯೇ  ವಿವರಣೆ ನೀಡಿದ್ದಾರೆ.

ಬಿಎಸ್‌ಎಫ್‌ನಿಂದ ಗಡಿಯಲ್ಲಿ ಹೈ ಅಲರ್ಟ್‌; ವಿಮಾನ, ರೈಲು ಸಂಚಾರ ಸ್ಥಗಿತ
ಬಾಂಗ್ಲಾದಲ್ಲಿ ಹಿಂಸಾಚಾರ ಪರಿಣಾಮ ಭಾರತ -ಬಾಂಗ್ಲಾದೇಶದ  4096 ಕಿ.ಮೀ.  ಗಡಿಯಾದ್ಯಂತ ಬಿಎಸ್‌ಎಫ್‌ (ಗಡಿ ಸುರಕ್ಷಾ ದಳ) ಕಟ್ಟೆಚ್ಚರ ವಹಿಸಲು ಸಿದ್ಧತೆ ನಡೆಸಿದೆ. ಹಾಗೆಯೇ ಬಾಂಗ್ಲಾದಲ್ಲಿ ತುರ್ತು ಪರಿಸ್ಥಿತಿಯಿಂದ ಬಾಂಗ್ಲಾದ ಢಾಕಾಕ್ಕೆ ತೆರಳುವ ವಿಮಾನ ಹಾಗೂ ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next