ಢಾಕಾ: ಶ್ರೀಲಂಕಾ ಕೂಡ ಭಾಗವಹಿಸಲಿರುವ ತ್ರಿಕೋನ ಏಕದಿನ ಸರಣಿಯ ಪಂದ್ಯದಲ್ಲಿ ಜಿಂಬಾಬ್ವೆ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿದ ಬಾಂಗ್ಲಾದೇಶವು ಶುಭಾರಂಭಗೈದಿದೆ. ಈ ಮೂಲಕ 2018ರ ವರ್ಷವನ್ನು ಗೆಲುವಿನ ಮೂಲಕ ಸ್ವಾಗತಿಸಿದೆ.
ಶಕಿಬ್ ಅಲ್ ಹಸನ್ ಮತ್ತು ಮುಸ್ತಾಫಿಜುರ್ ರೆಹ ಮಾನ್ ದಾಳಿಗೆ ಕುಸಿದ ಜಿಂಬಾಬ್ವೆ ತಂಡವು 49 ಓವರ್‌ಗಳಲ್ಲಿ 170 ರನ್ನಿಗೆ ಆಲೌಟಾಯಿತು. ಸಿಕಂದರ್ ರಾಜ 99 ಎಸೆತ ಎದುರಿಸಿ 52 ರನ್ ಹೊಡೆದು ತಂಡವನ್ನು ಆಧರಿಸುವ ಪ್ರಯತ್ನ ನಡೆಸಿದರು. ಪಂದ್ಯದ ಮೊದಲ ಓವರಿನಲ್ಲಿ ಎರಡು ವಿಕೆಟ್ ಕಿತ್ತ ಶಕಿಬ್ ಒಟ್ಟಾರೆ 42 ರನ್ನಿಗೆ 3 ವಿಕೆಟ್ ಪಡೆದರು. ಸೀಮರ್‌ಗಳಾದ ಮುಸ್ತಾಫಿಜುರ್, ರುಬೆಲ್ ಹೊಸೈನ್, ಮೊರ್ತಜ 5 ವಿಕೆಟ್ ಹಾರಿಸಿದರು.
ಆರಂಭಿಕ ತಮಿಮ್ ಇಕ್ಬಾಲ್ ಅವರ ಅಜೇಯ ಆಟದಿಂದಾಗಿ ಬಾಂಗ್ಲಾದೇಶ ಸುಲಭವಾಗಿ ಗುರಿ ತಲುಪುವಂತಾಯಿತು. ಜಿಂಬಾಬ್ವೆಯ ಬೌಲರ್‌ಗಳು ನಿಖರ ದಾಳಿ ಸಂಘಟಿಸಲು ವಿಫಲರಾದ ಕಾರಣ ಬಾಂಗ್ಲಾ ಆಟಗಾರರು ಯಾವುದೇ ಆತಂಕವಿಲ್ಲದೇ ಆಡಿದರು. ಶಕಿಬ್ ಮತ್ತು ತಮಿಮ್ ದ್ವಿತೀಯ ವಿಕೆಟಿಗೆ 78 ರನ್ ಪೇರಿಸಿದರು. ಅಂತಿಮವಾಗಿ ಬಾಂಗ್ಲಾ 28.3 ಓವರ್‌ಗಳಲ್ಲಿ 2 ವಿಕೆಟ್ ನಷ್ಟದಲ್ಲಿ ಜಯಭೇರಿ ಬಾರಿಸಿತು. ತಮಿಮ್ ಇಕ್ಬಾಲ್ 84 ರನ್ ಗಳಿಸಿ ಅಜೇಯರಾಗಿ ಉಳಿದರು.
37 ರನ್ ಮತ್ತು 43 ರನ್ನಿಗೆ 3 ವಿಕೆಟ್ ಕಿತ್ತ ಶಕಿಬ್ ಅಲ್ ಹಸನ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಸಂಕ್ಷಿಪ್ತ ಸ್ಕೋರು: ಜಿಂಬಾಬ್ವೆ 49 ಓವರ್‌ಗಳಲ್ಲಿ 170 ಆಲೌಟ್ (ಸಿಕಂದರ್ ರಾಜ 52, ಮೂರ್ 33, ಶಕಿಬ್ 43ಕ್ಕೆ 3, ಮುಸ್ತಾಫಿಜುರ್ 29ಕ್ಕೆ 2, ರುಬೆಲ್ ಹೊಸೈನ್ 24ಕ್ಕೆ 2); ಬಾಂಗ್ಲಾದೇಶ 28.3 ಓವರ್‌ಗಳಲ್ಲಿ 2 ವಿಕೆಟಿಗೆ 171 (ತಮಿಮ್ ಇಕ್ಬಾಲ್ 84 ಔಟಾಗದೆ, ಶಕಿಬ್ 37, ಸಿಕಂದರ್ ರಾಜ 53ಕ್ಕೆ 2).