ಢಾಕಾ:ಕೋವಿಡ್ 19 ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಶುಕ್ರವಾರ(ಜುಲೈ 23)ದಿಂದ 14 ದಿನಗಳ ಕಾಲ ಲಾಕ್ ಡೌನ್ ಜಾರಿಯಾಗಲಿದೆ ಎಂದು ಬಾಂಗ್ಲಾದೇಶ ಸರ್ಕಾರ ಗುರುವಾರ(ಜುಲೈ22) ಘೋಷಿಸಿದೆ.
ಇದನ್ನೂ ಓದಿ:ತಾಯಿಯ ಶವದ ಬಳಿ ಸಹೋದರಿಯರ ಆಟ: ಬರ್ಗರ್ ಆಸೆಗೆ ಬಾಯಿ ಬಿಟ್ಟರು ಭಯಾನಕ ಸತ್ಯ
ಜುಲೈ 23ರಿಂದ ಆಗಸ್ಟ್ 5ರವರೆಗೆ ಲಾಕ್ ಡೌನ್ ಮುಂದುವರಿಯಲಿದೆ. ಈ 14 ದಿನಗಳ ಲಾಕ್ ಡೌನ್ ಸಂದರ್ಭದಲ್ಲಿ ಕಠಿಣ ಮಾರ್ಗಸೂಚಿಯನ್ನು ಜನರು ಅನುಸರಿಸಬೇಕು ಎಂದು ಸರ್ಕಾರ ಆದೇಶದಲ್ಲಿ ತಿಳಿಸಿದೆ.
ಎಲ್ಲಾ ಕಚೇರಿಗಳು, ಕೈಗಾರಿಕೆಗಳು, ಗಾರ್ಮೆಂಟ್ ಫ್ಯಾಕ್ಟರಿಗಳು ಲಾಕ್ ಡೌನ್ ಸಮಯದಲ್ಲಿ ಬಂದ್ ಆಗಿರಲಿದೆ. ಬಾಂಗ್ಲಾ ಸರ್ಕಾರದ ಆದೇಶದ ಪ್ರಕಾರ, ಲಾಕ್ ಡೌನ್ ಸಮರ್ಪಕವಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಪೊಲೀಸರು, ಬಾಂಗ್ಲಾ ಗಡಿ ಪಡೆ ಮತ್ತು ಸೇನೆ ತೀವ್ರ ನಿಗಾವಹಿಸಲಿದೆ ಎಂದು ತಿಳಿಸಿದೆ.
ಬಾಂಗ್ಲಾದೇಶದಲ್ಲಿ ಬುಧವಾರ 7,614 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 173ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಬಾಂಗ್ಲಾದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 11,36,503ಕ್ಕೆ ಏರಿಕೆಯಾಗಿದೆ ಮತ್ತು ಸಾವಿನ ಪ್ರಕರಣ 18,498ಕ್ಕೆ ಹೆಚ್ಚಳವಾಗಿದೆ ಎಂದು ಡಿಜಿಎಚ್ ಎಸ್ ತಿಳಿಸಿದೆ.