ಬ್ಯಾಂಕಾಕ್: ಬ್ಯಾಂಕಾಕ್ ಗೆ ತೆರಳುತ್ತಿದ್ದ ಲುಫ್ತಾನ್ಸಾ ವಿಮಾನ ಬುಧವಾರ (ನವೆಂಬರ್ 29) ದೆಹಲಿಗೆ ಬಂದಿಳಿದ ಘಟನೆ ನಡೆದಿದ್ದು, ಇದಕ್ಕೆ ಕಾರಣ ವಿಮಾನದೊಳಗೆ ಗಂಡ-ಹೆಂಡತಿಯ ಜಗಳ ತಾರಕಕ್ಕೇರಿದ್ದು!
ಇದನ್ನೂ ಓದಿ:Arrested: ಮುಖ್ಯಮಂತ್ರಿಗಳ ಕುರಿತು ಅವಹೇಳನಕಾರಿ ಹೇಳಿಕೆ: ಮುಂಬೈ ಮಾಜಿ ಮೇಯರ್ ಬಂಧನ
ಹೌದು…ವಿಮಾನದೊಳಗೆ ಪತಿ, ಪತ್ನಿಯ ನಡುವಿನ ವಾಕ್ಸಮರ ಮಿತಿ ಮೀರಿದ್ದು, ಈ ಸಂದರ್ಭದಲ್ಲಿ ಪೈಲಟ್ ಆಶಿಸ್ತಿನ ಪ್ರಯಾಣಿಕರ ಬಗ್ಗೆ ಏರ್ ಟ್ರಾಫಿಕ್ ಕಂಟ್ರೋಲ್ ಗೆ ಮಾಹಿತಿ ನೀಡಿದ್ದರು. ಕೊನೆಗೆ ಮ್ಯೂನಿಚ್ ನಿಂದ ಟೇಕ್ ಆಫ್ ಆಗಿದ್ದ ವಿಮಾನ ಬುಧವಾರ ಬೆಳಗ್ಗೆ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿತ್ತು ಎಂದು ವರದಿ ತಿಳಿಸಿದೆ.
ವರದಿಯ ಪ್ರಕಾರ, ಜರ್ಮನ್ ವ್ಯಕ್ತಿ ಹಾಗೂ ಆತನ ಥಾಯ್ಲೆಂಡ್ ಮೂಲದ ಪತ್ನಿ ನಡುವೆ ಜಗಳ ಆರಂಭವಾಗಿತ್ತು. ಪತಿ ತನಗೆ ಬೆದರಿಕೆ ಹಾಕುತ್ತಿದ್ದಾನೆ ಎಂದು ಪತ್ನಿ ಪೈಲಟ್ ನ ಸಹಾಯ ಕೇಳಿದ್ದಳು. ನಂತರ ಲುಫ್ತಾನ್ಸಾ ವಿಮಾನ (ಎಲ್ ಎಚ್ 772) ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣದಲ್ಲಿ ಇಳಿಸಲು ಅನುಮತಿ ನೀಡುವಂತೆ ಪೈಲಟ್ ಮನವಿ ಮಾಡಿಕೊಂಡಿದ್ದರು.
ಇದಕ್ಕೂ ಮೊದಲು ಪಾಕಿಸ್ತಾನದ ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್ ಮಾಡಲು ಅನುಮತಿ ಕೇಳಿದ್ದು, ಅದಕ್ಕೆ ಪಾಕ್ ನಿರಾಕರಿಸಿತ್ತು. ಬಳಿಕ ವಿಮಾನವನ್ನು ದೆಹಲಿಯಲ್ಲಿ ಇಳಿಸಿದ್ದು, ಕೂಡಲೇ ಜರ್ಮನ್ ವ್ಯಕ್ತಿಯನ್ನು ವಿಮಾನ ನಿಲ್ದಾನದ ಭದ್ರತಾ ಅಧಿಕಾರಿಗಳಿಗೆ ಒಪ್ಪಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಈ ಸಂದರ್ಭದಲ್ಲಿ ವ್ಯಕ್ತಿ ವಿಮಾನ ನಿಲ್ದಾಣ ಭದ್ರತಾ ಅಧಿಕಾರಿಗಳ ಬಳಿ ಕ್ಷಮೆಯಾಚಿಸಿದ್ದ. ಅಲ್ಲದೇ ಅಧಿಕಾರಿಗಳು ಘಟನೆ ಬಗ್ಗೆ ಜರ್ಮನ್ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿದ್ದಾರೆ. ವ್ಯಕ್ತಿಯನ್ನು ಭದ್ರತಾ ಅಧಿಕಾರಿಗಳಿಗೆ ಒಪ್ಪಿಸಬೇಕೇ ಅಥವಾ ಜರ್ಮನ್ ಗೆ ಮರಳಲು ಅನುಮತಿ ನೀಡಬೇಕೆ ಎಂಬುದು ಇನ್ನಷ್ಟೇ ಇತ್ಯರ್ಥವಾಗಬೇಕಿದೆ ಎಂದು ವರದಿ ವಿವರಿಸಿದೆ.