ಬಂಗಾರಪೇಟೆ: ಕುತೂಹಲ ಕೆರಳಿಸಿರುವ ಕ್ಷೇತ್ರದ ಬಿಜೆಪಿ ಟಿಕೆಟ್ ಯಾರಿಗೆಂಬ ಕಾರ್ಯಕರ್ತರ ಗೊಂದಲ ಅಂತಿಮ ಹಂತಕ್ಕೆ ಬಂದಿದ್ದು, ಬಿಜೆಪಿ ಟಿಕೆಟ್ ಆಕಾಂಕ್ಷಿಂಗಳೆಲ್ಲರೂ ಸೇರಿ ಕೊನೆಯ ಚುನಾವಣೆಯನ್ನು ಎದುರಿಸಲು ಮಾಜಿ ಶಾಸಕ ಎಂ.ನಾರಾಯಣಸ್ವಾಮಿಗೆ ಟಿಕೆಟ್ ಕೊಡಿಸಲು ಒಮ್ಮತ ನಿರ್ಧಾರಕ್ಕೆ ಬಂದಿದ್ದಾರೆ.
ವಿಧಾನಸಭೆ ಚುನಾವಣೆಗೆ ಚುನಾವಣೆ ಆಯೋಗ ಮುಹೂರ್ತ ಫಿಕ್ಸ್ ಮಾಡಿ ವಾರವಾಗಿದೆ, ಈಗಾಗಲೇ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ತನ್ನ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದೆ. ಆದರೆ, ಬಿಜೆಪಿ ಪಕ್ಷ ಮಾತ್ರ ಯಾರ ಹೆಸರನ್ನೂ ಘೋಷಣೆ ಮಾಡದೆ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಿತ್ತು. ಪಕ್ಷದಲ್ಲಿ ಒಬ್ಬರಲ್ಲ ಮೂವರು ಟಿಕೆಟ್ ಆಕಾಂಕ್ಷಿಗಳು ನಮಗೇ ಬೇಕೆಂದು ಹಠಕ್ಕೆ ಬಿದ್ದವರಂತೆ ಲಾಬಿ ಮಾಡುತ್ತಿದ್ದರಿಂದ ಹೈಕಮಾಂಡ್ ಯಾರ ಹೆಸರನ್ನೂ ಅಂತಿಮಗೊಳಿಸದೇ, ಟಿಕೆಟ್ ನೀಡುವ ಬಗ್ಗೆ ಸ್ಥಳೀಯವಾಗಿಯೇ ನಿರ್ಧಾರ ಮಾಡಿ. ಮೊದಲು ಪಕ್ಷ ಸಂಘಟನೆ ಮಾಡಿ ಎಂದು ಮಾರ್ಮಿಕವಾಗಿ ಹೇಳಿದ್ದರಿಂದ ನಿಷ್ಠಾವಂತ ಕಾರ್ಯಕರ್ತರಿಗೆ ಹೈಕಮಾಂಡ್ ನಿರ್ಧಾರದಿಂದ ಗೊಂದಲ ಮೂಡಿಸಿತ್ತು.
ನಾರಾಯಣಸ್ವಾಮಿಗೆ ಕೊನೆಗೆ ಚುನಾವಣೆ: ಬಿಜೆಪಿ ಪಕ್ಷದ ಪ್ರಮುಖ ಟಿಕೆಟ್ ಆಕಾಂಕ್ಷಿಗಳಾದ ನಾಲ್ಕು ಬಾರಿ ಶಾಸಕರಾಗಿದ್ದ ಎಂ.ನಾರಾಯಣಸ್ವಾಮಿ, ಜಿಪಂ ಮಾಜಿ ಸದಸ್ಯ ಬಿ.ವಿ.ಮಹೇಶ್ ಮತ್ತು ಸಮಾಜ ಸೇವಕ ವಿ.ಶೇಷು ಟಿಕೆಟ್‌ಗಾಗಿ ತಮ್ಮದೇ ದಾಟಿಯಲ್ಲಿ ರಾಜ್ಯ ಮಟ್ಟದ ನಾಯಕರಲ್ಲಿ ಲಾಬಿ ನಡೆಸಿದ್ದರು. ಇದಕ್ಕೂ ಮೊದಲು ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಟಿಕೆಟ್ ಆಕಾಂಕ್ಷಿಗಳನ್ನು ಒಂದುಗೂಡಿಸಿ, ಒಮ್ಮತ ಮೂಡಿಸಲು ಯತ್ನಿಸಿ ಟಿಕೆಟ್ ಯಾರಿಗೇ ನೀಡಿದರೂ ಬಂಡಾಯ ಏಳದೆ ಪಕ್ಷಕ್ಕಾಗಿ ಶ್ರಮಿಸುವ ಬಗ್ಗೆ ಕೋಲಾರಮ್ಮನ ಮೇಲೆ ಪ್ರಮಾಣ ಮಾಡಿಸಿಕೊಂಡಿದ್ದರು. ಈಗ ಆಕಾಂಕ್ಷಿಗಳು ಒಂದಾಗಿದ್ದಾರೆ.
ಒಂದು ಮೂಲದ ಪ್ರಕಾರ ಮಾಜಿ ಶಾಸಕ ಎಂ.ನಾರಾಯಣಸ್ವಾಮಿಗೆ ಇದು ಕೊನೆ ಚುನಾವಣೆಯಾಗಿರುವುದರಿಂದ ಅವರಿಗೆ ಅವಕಾಶ ನೀಡಿ ಮುಂದಿನ ದಿನಗಳಲ್ಲಿ ಯುವಕರಾಗಿರುವ ಬಿ.ವಿ.ಮಹೇಶ್‌ರನ್ನು ಬೆಳೆಸಲು ಸ್ಥಳೀಯ ಮುಖಂಡರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ಕ್ಷೇತ್ರದಲ್ಲಿ ಕಮಲ ಅರಳಿಸಲು ಒಗ್ಗಟ್ಟಿನ ಕಾರ್ಯ: ಹತ್ತು ವರ್ಷಗಳಿಂದ ಕ್ಷೇತ್ರದಲ್ಲಿ ಬಿಜೆಪಿಗೆ ಅಧಿಕಾರ ಇಲ್ಲದೆ ಕಾರ್ಯಕರ್ತರು ವನವಾಸ ಅನುಭವಿಸಿರುವುದು ಸಾಕು. ಎಲ್ಲರೂ ಒಂದಾಗಿ ತನ್ನ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಸಂಕಲ್ಪ ಮಾಡಿರುವುದು ಕಾರ್ಯಕರ್ತರಿಗೆ ಹೊಸ ಚೈತನ್ಯ ಬಂದಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಹಾಲಿ ಶಾಸಕ ಎಸ್. ಎನ್.ನಾರಾಯಣಸ್ವಾಮಿ ವಿರುದ್ಧ ಮತದಾರರ ವಿರೋಧ ಹಾಗೂ ಜೆಡಿಎಸ್ ಪಕ್ಷದ ಸಂಘಟನೆಯಲ್ಲಿ ತೀರಾ ಹಿಂದುಳಿದಿರುವುದರಿಂದ ಈ ಬಾರಿ ಬಿಜೆಪಿಗೆ ಗೆಲುವು ಸುಲಭವಾಗಲಿದೆ ಎನ್ನುವ ಖುಷಿಯಲ್ಲಿದ್ದಾರೆ. ಅಲ್ಲದೆ ಎಂ.ನಾರಾಯಣಸ್ವಾಮಿ ಕ್ಷೇತ್ರದಲ್ಲಿ ತನ್ನದೇ ಆದ ವರ್ಚಸ್ಸು ಹೊಂದಿದ್ದು, ಮತ್ತೂಬ್ಬ ಮಾಜಿ ಶಾಸಕ ಬಿ.ಪಿ. ವೆಂಕಟ ಮುನಿಯಪ್ಪ ಮತ್ತು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷ ಸೇರಿರುವ ಕೆ. ಚಂದ್ರಾರೆಡ್ಡಿ ಪಕ್ಷಕ್ಕಾಗಿ ಶ್ರಮಿಸುವುದರಿಂದ ಕ್ಷೇತ್ರದಲ್ಲಿ ಈ ಬಾರಿ ಕಮಲ ಅರಳಿಸಲು ಸುಲಭವಾಗಬಹುದು ಎನ್ನಲಾಗುತ್ತಿದೆ.
ಬಂಗಾರಪೇಟೆ ಕ್ಷೇತ್ರದಲ್ಲಿ ಬಿಜೆಪಿ ಪಕ್ಷವು ಬಲಿಷ್ಠವಾಗಿದೆ. ಬಿಜೆಪಿ ಯಲ್ಲಿ ಮೂವರು ಅಭ್ಯರ್ಥಿಗಳು ಟಿಕೆಟ್‌ಗಾಗಿ ಪೈಪೋಟಿ ನಡೆ ಸಿದ್ದು, ಹಿಂದೆ ಹೇಳಿದಂತೆ ಪಕ್ಷದ ಹೈಕಮಾಂಡ್ ಯಾರಿಗೇ ಟಿಕೆಟ್ ನೀಡಿದರೂ, ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಶ್ರಮಿಸಲಾಗುವುದು. ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಅವರಿಗೆ ಟಿಕೆಟ್ ನೀಡಿದರೂ ತಾಲೂಕಿನ ಎಲ್ಲಾ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಒಟ್ಟಾಗಿ ಶ್ರಮಿಸಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಲು ಶ್ರಮಿಸಲಾಗುವುದು.
● ಬಿ.ವಿ.ಮಹೇಶ್, ಬಂಗಾರಪೇಟೆ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ.
4 ಬಾರಿ ಕ್ಷೇತ್ರದಲ್ಲಿ ಶಾಸಕನಾಗಿದ್ದೇನೆ. 2023ರ ಚುನಾವಣೆಯು ನನ್ನ ಜೀವಮಾನದ ಕೊನೆಯ ಚುನಾವಣೆ ಆಗಿರುವುದರಿಂದ ಈ ಬಾರಿ ಚುನಾವಣೆಗೆ ಸ್ಪರ್ಧಿಸಲು ಕ್ಷೇತ್ರದ ಎಲ್ಲಾ ಟಿಕೆಟ್ ಆಕಾಂಕ್ಷಿಗಳಲ್ಲಿ, ಪಕ್ಷದ ಹೈಕಮಾಂಡ್‌ಗೆ ಹಾಗೂ ತಾಲೂಕಿನ ಬಿಜೆಪಿ ಮುಖಂಡರಿಗೆ ಮನವಿ ಮಾಡಿದ್ದೇನೆ. ಬಿಜೆಪಿ ಪಕ್ಷದ ಹೈಕಮಾಂಡ್ ಸೂಚನೆಯಂತೆ ಹಾಗೂ ಈ ಹಿಂದೆ ಮಾಡಿರುವ ಪ್ರಮಾಣದಂತೆ ಎಲ್ಲರೂ ಒಗ್ಗಾಟ್ಟಾಗಿ ಚುನಾವಣೆಯನ್ನು ಎದುರಿಸಲು ಸಿದ್ಧರಿದ್ದೇವೆ.
● ಎಂ.ನಾರಾಯಣಸ್ವಾಮಿ, ಮಾಜಿ ಶಾಸಕ