Advertisement

ಬಂಗಾರಪೇಟೆ ಬಿಜೆಪಿ ಅಭ್ಯರ್ಥಿ ಗೆಲುವು ಖಚಿತ

04:28 PM Dec 11, 2022 | Team Udayavani |

ಬಂಗಾರಪೇಟೆ: ಗ್ರಾಪಂ ಕಟ್ಟಡಗಳನ್ನು ನಿರ್ಮಾಣ ಮಾಡಲು ಕೇಂದ್ರ ಸರ್ಕಾರದ ಅನುದಾನಗಳನ್ನು ಉಪಯೋಗಿಸಲಾಗುತ್ತಿದೆ. ಸ್ಥಳೀಯ ಶಾಸಕರ ಅನುದಾನದಲ್ಲಿ ನಯಾಪೈಸೆ ಇಲ್ಲ. 2023ರ ಚುನಾವಣೆಯಲ್ಲಿ ಬಿಜೆಪಿ ಶಾಸಕರನ್ನು ಗೆಲ್ಲಿಸಿ ಅನಂತರ ಗ್ರಾಪಂ ಕಟ್ಟಡ ಉದ್ಘಾಟನೆ ಮಾಡಲಾಗುವುದೆಂದು ಸಂಸದ ಎಸ್‌.ಮುನಿಸ್ವಾಮಿ ಸ್ಥಳೀಯ ಕಾಂಗ್ರೆಸ್‌ ಶಾಸಕ ಎಸ್‌.ಎನ್‌ .ನಾರಾಯಣಸ್ವಾಮಿಗೆ ಟಾಂಗ್‌ ನೀಡಿದರು.

Advertisement

ತಾಲೂಕಿನ ಹುಲಿಬೆಲೆ ಗ್ರಾಮದಲ್ಲಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಪಂನ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಗ್ರಾಪಂ ಕಟ್ಟಡವು ಕೇಂದ್ರ-ರಾಜ್ಯ ಸರ್ಕಾರದ ಅನುದಾನದಲ್ಲಿ ನಿರ್ಮಾಣವಾಗುತ್ತಿದೆಯೇ ಹೊರತು ಸ್ಥಳೀಯ ಶಾಸಕರ ಅನುದಾನದಲ್ಲಿ ಅಲ್ಲ, 2023ರ ಚುನಾವಣೆಯ ನಂತರ ಬಿಜೆಪಿ ಶಾಸಕರ ಜತೆ ಈ ಕಟ್ಟಡವನ್ನು ನಾನೇ ಉದ್ಘಾಟಿಸುತ್ತೇನೆ ಎನ್ನುವುದರ ಮೂಲಕ ಪರೋಕ್ಷವಾಗಿ ಕಾಂಗ್ರೆಸ್‌ ಶಾಸಕರಿಗೆ ತಿರುಗೇಟು ನೀಡಿದರು.

47 ಲಕ್ಷರೂಗಳ ಕಾಮಗಾರಿ: ರಾಜಕಾರಣದಲ್ಲಿ ಟೀಕೆ ಸಹಜ. ಚುನಾವಣೆ ಸಮಯದಲ್ಲಿ ಬಿಜೆಪಿ, ಜೆಡಿಎಸ್‌, ಕಾಂಗ್ರೆಸ್‌, ಎಂಬಂತೆ ಆರೋಪ ಪ್ರತ್ಯಾರೋಪಗಳು ಸಹಜ. ಆದರೆ, ಅಭಿವೃದ್ಧಿ ವಿಷಯದಲ್ಲಿ ರಾಜಕಾರಣಕ್ಕೆ ಅವಕಾಶವಿಲ್ಲ, ಪಕ್ಷಾತೀತವಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕು, 2023ರ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಅಭಿವೃದ್ಧಿ ಕಾರ್ಯ ಮಾಡಲಾಗುವುದು ಎಂದರು. ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಮಾತನಾಡಿ, ಈ ಹಿಂದೆ ದಿ. ಆರ್‌.ವಿ.ಸುರೇಶ್‌ರವರ ಅಧ್ಯಕ್ಷರಾಗಿದ್ದ ಸಮಯದಲ್ಲಿ ಅನೇಕ ಬಾರಿ ನೂತನ ಗ್ರಾಪಂ ಕಟ್ಟಡ ನಿರ್ಮಿಸಿ ಕೊಡುವಂತೆ ಚರ್ಚಿಸಿದ್ದರು. ಇದಕ್ಕೆ ಪೂರಕ ಎಂಬಂತೆ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ 11ಗುಂಟೆ ಸ್ಥಳವನ್ನು ಗೊತ್ತುಪಡಿಸಲಾಗಿತ್ತು. ಆದರೆ, ಕಾರಣಾಂತರಗಳಿಂದ ಸ್ಥಳವನ್ನು ಬದಲಾಯಿಸಲಾಯಿತು ಎಂದರು.

ಹುಲಿಬೆಲೆಗ್ರಾಪಂ ಕಟ್ಟಡ ಶಂಕುಸ್ಥಾಪನೆ ನೆರವೇರಿಸಿ ನಂತರ ಸಂಸದ ಎಸ್‌.ಮುನಿಸ್ವಾಮಿ ಪಟ್ಟಣದ ಹೃದಯ ಭಾಗದಲ್ಲಿರುವ ನಂದಿ ಮೆಡಿಕಲ್ಸ್ ವೃತ್ತದ ಸಮೀಪ ರಸ್ತೆ ಬದಿಯ ಹೋಟೆಲ್‌ ಒಂದರಲ್ಲಿ ಸಾರ್ವಜನಿಕರ ಜೊತೆಯಲ್ಲೇ ಶ್ರೀಸಾಮಾನ್ಯನಂತೆ ಇಡ್ಲಿ, ವಡೆ, ಪೂರಿ ಸೇವಿಸಿ ಸ್ಥಳೀಯರೊಂದಿಗೆ ಸಮಾಲೋಚನ ನಡೆಸಿದರು. ‌

ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬಿ.ವಿ.ಮಹೇಶ್‌, ತಾಪಂ ಇಒ ಎನ್‌.ವೆಂಕಟೇಶಪ್ಪ, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಪಿಚ್ಚಹಳ್ಳಿ ಗೋವಿಂದರಾಜುಲು, ಪುರಸಭೆ ಸದಸ್ಯ ಕಪಾಲಿ ಶಂಕರ್‌, ಹುಲಿಬೆಲೆ ಗ್ರಾಪಂ ಅಧ್ಯಕ್ಷ ಶ್ರೀಧರ್‌. ಉಪಾಧ್ಯಕ್ಷ ಶೋಭಾರಾಣಿ, ಸದಸ್ಯ ಹುಣಸನಹಳ್ಳಿ ಎಚ್‌.ಆರ್‌.ಶ್ರೀನಿವಾಸ್‌, ಬಿ.ನಾರಾಯಣಗೌಡ, ಸುರೇಶ್‌, ಚಿಕ್ಕಹೊಸಹಳ್ಳಿ ಮಂಜುನಾಥ್‌, ನಾಗವೇಣಿ ಮುನಿರಾಜು, ರೇಣುಕಾ ಮುರಳಿಧರ್‌, ನಾಗರಾಜ್, ಮುನಿಯಪ್ಪ, ಶಿಲ್ಪ ವಿನಯ್‌, ಶೈಲಜಾ ವೆಂಕಟೇಶ್‌, ಚಂದ್ರಿಕಾ ಜಯಕುಮಾರ್‌ ಇತರರಿದ್ದರು.

Advertisement

ಅಭ್ಯರ್ಥಿ ಗೆಲ್ಲಿಸಿಕೊಳ್ಳುವ ಭರವಸೆ: 2023 ಚುನಾವಣೆಯು ಹೆಚ್ಚು ಮಹತ್ವವನ್ನು ಪಡೆದುಕೊಂಡಿದ್ದು, ಚುನಾವಣಾ ಪ್ರಚಾರಕ್ಕಾಗಿ ಬಂಗಾರಪೇಟೆಯಲ್ಲೇ ವಾಸ್ತವ್ಯ ಹೂಡಲಿದ್ದು, ಈ ಕ್ಷೇತ್ರವೂ ಸೇರಿದಂತೆ ಜಿಲ್ಲೆ ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮ ಮೇಲಿದೆ ಅದನ್ನು ಶತಾತಗತಾಯ ನೆರವೇರಿಸಲಾಗುವುದು ಎಂದು ಸಂಸದ ಮುನಿಸ್ವಾಮಿ ತಿಳಿಸಿದರು.

ಹುಲಿಬೆಲೆ ಗ್ರಾಪಂ ಸದಸ್ಯರು ಹಾಗೂ ಸಾರ್ವಜನಿಕರು ಈ ಹಿಂದೆ ಬಂಗಾರಪೇಟೆಯಿಂದ ರಸ್ತೆ ನಿರ್ಮಿಸಿ ಕೊಡುವಂತೆ ಮನವಿ ಮಾಡಿದ್ದರು. ಅವರ ಬೇಡಿಕೆಗೆ ಸಕಾರಾತ್ಮಕವಾಗಿ ಸ್ವಂದಿಸಿ ಉತ್ತಮ ಡಾಂಬರು ರಸ್ತೆಯನ್ನು ನಿರ್ಮಿಸಿ ಕೊಟ್ಟಿದ್ದೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next