Advertisement

ಸೂಕ ರಸ್ತೆ ಇಲ್ಲದ ಗಡಿಗ್ರಾಮಗಳ ಗೋಳು ಕೇಳ್ಳೋರಿಲ್ಲ

04:36 PM Oct 31, 2019 | Naveen |

●ಎಂ.ಸಿ.ಮಂಜುನಾಥ್‌
ಬಂಗಾರಪೇಟೆ:
ಆಂಧ್ರ ಹಾಗೂ ತಮಿಳುನಾಡಿಗೆ
ಹೊಂದಿಕೊಂಡಿರುವ ತಾಲೂಕಿನ ಗಡಿಭಾಗದ ಗ್ರಾಮಗಳ ಸಂಪರ್ಕ ರಸ್ತೆಗಳು ತೀರಾ ಹದಗೆಟ್ಟಿದ್ದು, ಅಭಿವೃದ್ಧಿ ಮರೀಚಿಕೆಯಾಗಿದೆ. ಇದಕ್ಕೆ ಆರಿಮಾನಹಳ್ಳಿ ಗ್ರಾಮದಿಂದ ಬಿಸಾನತ್ತಂ, ಕುಪ್ಪಂ ತಾಲೂಕಿನ ಗುಡಿಪಲ್ಲಿಗೆ ಸಂಪರ್ಕ ಕಲ್ಪಿಸುವ ರಸ್ತೆಯೇ ಉತ್ತಮ ಉದಾಹರಣೆ.

Advertisement

ತಾಲೂಕಿನ ಕಾಮಸಮುದ್ರ ಹೋಬಳಿಯ ಆರಿಮಾನಹಳ್ಳಿ ಗ್ರಾಮವು ತಾಲೂಕಿನ ಗಡಿಭಾಗದಲ್ಲಿದೆ. ಈ ಗ್ರಾಮದಿಂದ ಬಿಸಾನತ್ತಂ ಮೂಲಕ ಕುಪ್ಪಂ ತಾಲೂಕಿನ ಗುಡಿಪಲ್ಲಿಗೆ ಹೋಗುವ ಮಾರ್ಗವು ಗುಂಡಿ ಬಿದ್ದು, ತೀರಾ ಹದೆಗೆಟ್ಟಿದೆ. ರಸ್ತೆಯುದ್ದಕ್ಕೂ ಗುಂಡಿಗಳು, ಹೊಂಡಗಳು ಬಿದ್ದು, ಮಳೆ ನೀರು ನಿಂತು ಕೆರೆಯಂತಾಗಿದೆ.

ರಸ್ತೆಯಲ್ಲಿ ಕೊರಕಲು: ರಸ್ತೆಯು ಸಂಪೂರ್ಣ ಮಣ್ಣಿನಿಂದ ಕೂಡಿದ್ದು, ಅಲ್ಲಲ್ಲಿ ಕಲ್ಲುಗಳು ಮೇಲೆದ್ದು ವಾಹನ ಸವಾರರ ಜೀವಕ್ಕೆ ಸಂಚಕಾರ ತರುತ್ತಿವೆ. ತಗ್ಗು ಬಿದ್ದಿರುವ ಕಡೆಯಲ್ಲಿ ಮಳೆ ನೀರು ನಿಂತು ರಸ್ತೆ ಸಂಪೂರ್ಣ ಕೆಸರು ಗದ್ದೆಯಾಗಿದೆ.

ಇದರಿಂದ ದ್ವಿಚಕ್ರ ವಾಹನ ಸವಾರರು ಓಡಾಡಲು ಕಷ್ಟವಾಗುತ್ತದೆ. ಅಷ್ಟೇ ಅಲ್ಲದೆ, ಮಳೆ ನೀರು ಹರಿದು ರಸ್ತೆಯ ಮಧ್ಯಭಾಗ ಮತ್ತು ಅಕ್ಕಪಕ್ಕ ಕೊರಕಲು, ಕಾಲುವೆಗಳು ಉಂಟಾಗಿದ್ದು, ಮೂರು, ನಾಲ್ಕು ಚಕ್ರದ ವಾಹನಗಳೂ ಓಡಾಡಲು ಆಗುವುದಿಲ್ಲ.

ಅಭಿವೃದ್ಧಿ ಮರೀಚಿಕೆ: ಆರಿಮಾನಹಳ್ಳಿ ಗ್ರಾಮದಲ್ಲಿ ಕಾಂಕ್ರೀಟ್‌ ರಸ್ತೆಗಳನ್ನು ನಿರ್ಮಿಸಲಾಗಿದೆ. ಆದ್ರೆ, ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಅಭಿವೃದ್ಧಿಯನ್ನೇ ಮರೆಯಲಾಗಿದೆ. ರಸ್ತೆ ಉದ್ದಕ್ಕೂ ಗುಂಡಿಗಳು ಬಿದ್ದಿರುವು ದರಿಂದ ರಸ್ತೆ ಎಲ್ಲಿ ಸರಿ ಇದೆ ಎಂದು ಹುಡುಕಬೇಕಿದೆ.

Advertisement

ಮುಚ್ಚಿರುವ ಮೋರಿಗಳು: ಮಳೆ ಬಂದು ರಸ್ತೆಯಲ್ಲಿಯೇ ನೀರು ನಿಂತಿದೆ. ರಸ್ತೆಯ ಪಕ್ಕದಲ್ಲಿ ಗಿಡಗಂಟಿಗಳು ಬೆಳೆದಿರುವುದರಿಂದ ರಸ್ತೆ ಮತ್ತಷ್ಟು ಕಿರಿದಾಗಿದೆ. ಇದರಲ್ಲಿ ದ್ವಿಚಕ್ರ ವಾಹನಗಳು ಬಿಟ್ಟರೆ ಕಾರು ಸೇರಿ ಭಾರೀ ಗಾತ್ರದ ವಾಹನಗಳು ಸಂಚರಿಸಲು ಕಷ್ಟ. ರಸ್ತೆಯ ಪಕ್ಕದಲ್ಲಿ ಮಳೆ ನೀರು ಹರಿಯಲು ಕಾಲುವೆ ನಿರ್ಮಿಸಿಲ್ಲ.

ಈಗಿರುವ ಮಣ್ಣಿನ ರಸ್ತೆಯಲ್ಲಿ ಮಳೆ ನೀರು ಹರಿಯುತ್ತಿರುವುದರಿಂದ ರಸ್ತೆಯಲ್ಲಿ ಮಣ್ಣು ಕೊಚ್ಚಿಕೊಂಡು ಹೋಗಿದೆ. 20 ವರ್ಷಗಳ ಹಿಂದೆ ನಿರ್ಮಾಣ ಮಾಡಿರುವ ಮೋರಿಗಳು ಮುಚ್ಚಿ ಹೋಗಿ
ಎಷ್ಟೋ ವರ್ಷಗಳಾಗಿದೆ.

ಸಮರ್ಪಕ ರಸ್ತೆ ಇಲ್ಲದ ಕಾರಣ ಗ್ರಾಮಕ್ಕೆ ಕೆಎಸ್‌ಆರ್‌ಟಿಸಿ ಬಸ್‌ ಸೇರಿದಂತೆ ಖಾಸಗಿ ವಾಹನಗಳೂ ಬರಲು ಹಿಂದೇಟು ಹಾಕುತ್ತಿವೆ. ಹೀಗಾಗಿ ಈ ಗ್ರಾಮದ ಜನರು ಸ್ವಂತ ವಾಹನಗಳನ್ನು ಹೊಂದುವುದು ಅನಿವಾರ್ಯವಾಗಿದೆ.

ಗ್ರಾಮದಲ್ಲಿ ಹೆರಿಗೆ ನೋವು ಕಾಣಿಸಿಕೊಂಡರೆ, ಯಾರಾದ್ರೂ ಅನಾರೋಗ್ಯಕ್ಕೆ ತುತ್ತಾದರೆ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಲು ಆ್ಯಂಬುಲೆನ್ಸ್‌ ಕೂಡ ಈ ಗ್ರಾಮಕ್ಕೆ ಬರುವುದಿಲ್ಲ. ಇಲ್ಲಿನ ಎಷ್ಟೋ ಜನ ಸೂಕ್ತ ಸಂಚಾರ ಸೌಲಭ್ಯವಿಲ್ಲದ ಕಾರಣ, ಹೊರಗಿನ ಪ್ರಪಂಚದ ಜೊತೆ ಸಂಪರ್ಕ ಹೊಂದುವ ಅವಕಾಶವನ್ನೇ ಕಳೆದು ಕೊಂಡಿದ್ದಾರೆ. ಕೂಡಲೇ ಸಂಬಂಧಪಟ್ಟ ಶಾಸಕರು, ಪಿಡಬ್ಲ್ಯೂಡಿ, ಜಿಪಂ ಸದಸ್ಯರು ಗಮನ ಹರಿಸಲೇಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next