Advertisement

ಬಂಗಾರಪೇಟೆ: ರಾಜ್ಯದ ಗಡಿಭಾಗದ ರಸ್ತೆಗಳ ಅಭಿವೃದ್ದಿ ಯಾವಾಗ?

12:43 PM Apr 04, 2024 | Team Udayavani |

ಉದಯವಾಣಿ ಸಮಾಚಾರ
ಬಂಗಾರಪೇಟೆ: ರಾಜ್ಯದ ಗಡಿಭಾಗದ ಮುಷ್ಟ್ರ ಹಳ್ಳಿ ಗ್ರಾಮದಿಂದ ಆಂಧ್ರಪ್ರದೇಶದ ಗಡಿ ಭಾಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅವ್ಯವಸ್ಥೆಯಲ್ಲಿದ್ದು, ಇದರಿಂದ ದುರಸ್ತಿಗೊಳಿಸಲು ವರ್ಷದ ಹಿಂದೆ ಚಾಲನೆ ನೀಡದರೂ, ಇದುವರೆಗೂ ರಸ್ತೆ ಮಾತ್ರ ದುರಸ್ತಿಗೊಳ್ಳದೆ ವಾಹನಗಳ ಸವಾರರು ನಿತ್ಯ ಸರ್ಕಾರವನ್ನು ಶಪಿಸಿಕೊಂಡೇ ಓಡಾಡುವಂತಾಗಿದೆ.

Advertisement

ತಾಲೂಕಿನ ಕಾಮಸಮುದ್ರ ಹೋಬಳಿಯ ಗಡಿಭಾಗದ ದೋಣಿಮಗಡು ಗ್ರಾಮ ಪಂಚಾಯ್ತಿಯ ಮುಷ್ಟ್ರಹಳ್ಳಿ ಗ್ರಾಮದಿಂದ
ಆಂಧ್ರಪ್ರದೇಶದ ಗುಡಿವಂಕದವರೆಗೂ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ಈ ರಸ್ತೆ ಮೂಲಕ ನಿತ್ಯ ನೂರಾರು ವಾಹ ನಗಳು
ಆಂಧ್ರ ಪ್ರದೇಶದ ಕುಪ್ಪಂಗೆ ಹೋಗಿ ಬರುವರು. ಆದರೆ, ರಸ್ತೆ ಮಾತ್ರ ಅವ್ಯವಸ್ಥೆಯಲ್ಲಿದ್ದರಿಂದ ವಾಹನಗಳ ಸವಾರರು ಸಂಚರಿಸಲು ಹರಸಾಹಸ ಪಡುವಂತಾಗಿದೆ. ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆಗೂ ಮುನ್ನ ಈ ರಸ್ತೆ ಡಾಂಬರೀಕರಣಕ್ಕೆ ಚಾಲನೆ ದೊರೆ ಯಿತಾದರೂ, ವರ್ಷವಾದರೂ ಕಾಮಗಾರಿ ಪೂರ್ಣಗೊಂಡಿಲ್ಲ.

ರಸ್ತೆ ತುಂಬಾ ಜೆಲ್ಲಿ ಕಲ್ಲು: ಗುತ್ತಿಗೆದಾರರು ರಸ್ತೆಗೆ ಜೆಲ್ಲಿ ಕಲ್ಲು ಹಾಕಿ ಅದರ ಮೇಲೆ ಮಣ್ಣು ಹಾಕಿ ಹೋದವರು ಇತ್ತ ಕಡೆ ಮತ್ತೆ ಮುಖ ಮಾಡಿಲ್ಲ. ಈಗ ರಸ್ತೆ ತುಂಬಾ ಜೆಲ್ಲಿಕಲ್ಲುಗಳ ದರ್ಶನವಾಗಿದೆ. ಕಲ್ಲುಗಳ ನಡುವೆ ವಾಹನಗಳು ಸಂಚರಿಸಬೇಕಾಗಿದೆ. ಅಲ್ಲದೆ, ಗುಡುವಂಕ ಗ್ರಾಮದ ಬಳಿ ಇರುವ ಪ್ರಸಿದ್ಧ ಸುಬ್ರಮಣ್ಯಸ್ವಾಮಿ ದೇವಾಲಯದಲ್ಲಿ ವರ್ಷಕ್ಕೊಮ್ಮೆ ಕಾವಡಿ ಜಾತ್ರೆ ನಡೆಯುತ್ತದೆ. ಆಗ ಈ ರಸ್ತೆಯ ಮೂಲಕವೇ ಜಿಲ್ಲೆಯಿಂದಲ್ಲದೆ ಹೊರ ಜಿಲ್ಲೆಗಳಿಂದಲೂ ಸಹಸ್ರಾರು ಸಂಖ್ಯೆಯಲ್ಲಿ ಜನರು ಭಾಗವಸುವರು. ಇಂತಹ ರಸ್ತೆಯನ್ನು ಸರ್ಕಾರ ಏಕೆ ಕಡೆಗಣಿಸಿದೆ ಎಂಬುದು ಈ ಭಾಗದ ಜನರ ಪ್ರಶ್ನೆಯಾಗಿದೆ.

ರಸ್ತೆ ಡಾಂಬರೀಕರಣ ಮಾಡಲಿ: ಚುನಾವಣೆ ಬಂದಾಗ ಮಾತ್ರ ರಸ್ತೆಗಳ ದುರಸ್ತಿ ನೆನಪಾಗುವುದು. ಮತ ಪಡೆದ ನಂತರ ಮತ್ತೇ ಯಾರೂ ಈ ಕಡೆ ಮುಖ ಮಾಡುವುದಿಲ್ಲ ಎಂಬುದು ದೋಣಿಮಡಗು ಗ್ರಾಪಂ ಜನರ ಆರೋಪವಾಗಿದೆ. ದೋಣಿಮಡಗು ಗ್ರಾಪಂ ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ಗಡಿಭಾಗಕ್ಕೆ ಹೊಂದಿಕೊಂಡಿರುವುದರಿಂದ ಸರ್ಕಾರ ಹಾಗೂ ಜನ ಪ್ರತಿನಿಧಿಗಳು ಗಡಿ ಗ್ರಾಮಗಳ ಕಡೆ ಆಸಕ್ತಿ ವಹಿಸಿಲ್ಲ ಎಂಬುದಕ್ಕೆ ಕದರಿನತ್ತ ಗ್ರಾಮಕ್ಕೆ ನಾಗರಿಕ ಸೌಲಭ್ಯ ಕಲ್ಪಿಸಿ ಎಂದು ಗ್ರಾಮಸ್ಥರು, ರೈತ ಸಂಘದ ಸದಸ್ಯರು ಹೋರಾಟ ಮಾಡಿ ಚುನಾವಣೆ ಬಹಿಷ್ಕರಿಸುವ ಬೆದರಿಕೆ ಹಾಕಿದ್ದೆ ಸಾಕ್ಷಿಯಾಗಿದೆ. ಸರ್ಕಾರ ಈಗಲಾದರೂ ನನೆಗುದಿಗೆ ಬಿದ್ದಿರುವ ಈ ರಸ್ತೆ ದುರಸ್ತಿ ಕಾಮಗಾರಿಯನ್ನು ಪೂರ್ಣಗೊಳಿಸಿ ಡಾಂಬರೀಕರಣ ಮಾಡಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಿ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ದಿನನಿತ್ಯ ಪ್ರಾಣಭಯದಲ್ಲಿ ಸಂಚಾರ
ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ತಮಿಳುನಾಡು-ಆಂಧ್ರ ಪ್ರದೇಶಕ್ಕೆ ಹೊಂದಿಕೊಂಡಿರುವ ಈ ಮಾರ್ಗದ ರಸ್ತೆಯು
ಅಭಿವೃದ್ಧಿ ಕಾಣದೆ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿತ್ತು. ರಸ್ತೆ ಅಭಿವೃದ್ಧಿ ಕಾಣದೆ ತಮಿಳುನಾಡಿಗೆ ಸಂಚರಿಸುವ ಮತ್ತು
ಗಡಿಗ್ರಾಮಗಳ ಜನರು ಮೊಣ ಕಾಳುದ್ದ ಗುಂಡಿಗಳು ನಿರ್ಮಾಣವಾಗಿದ್ದ ರಸ್ತೆಯಲ್ಲೇ ಪ್ರಾಣಭಯದಲ್ಲಿ ಸಂಚರಿಸುತ್ತಿದ್ದರು. ಅಲ್ಪಸ್ವಲ್ಪ ಚೆನ್ನಾಗಿ ಇದ್ದಂತಹ ರಸ್ತೆಯನ್ನು ಕಾಮಗಾರಿಯ ನೆಪದಲ್ಲಿ ಕೆಡವಿ ಸುಮಾರು ಕನಮನಹಳ್ಳಿವರೆಗೂ ರಸ್ತೆಗೆ ಜಲ್ಲಿ ಹಾಗೂ ಮಣ್ಣು ಸುರಿದಿದ್ದಾರೆ. ಜಲ್ಲಿಯನ್ನು ಸುರಿದು ವರ್ಷಗಳೇ ಕಳೆದರೂ, ಕಾಮಗಾರಿ ಮಾತ್ರ ಆರಂಭವಾಗಲಿಲ್ಲ. ಇದರಿಂದ ಜಲ್ಲಿಯ ಮೇಲೆ ವಾಹನ ಸವಾರರು ಸಂಚರಿಸುತ್ತಿರು ವುದರಿಂದ ಮಣ್ಣು ಎದ್ದು ಗುಂಡಿಗಳು ನಿರ್ಮಾಣವಾಗಿವೆ.

Advertisement

ಯಾವುದೇ ಸರ್ಕಾರ ಬಂದರೂ, ಗಡಿಭಾಗದಲ್ಲಿರುವ ದೋಣಿಮಡಗು ಗ್ರಾಪಂನಲ್ಲಿ ಅಭಿವೃದ್ಧಿ ಮರೀಚಿಕೆಆಗಿದೆ. ಮುಷ್ಟ್ರಹಳ್ಳಿ ಗ್ರಾಮದಿಂದ ತ.ನಾಡು, ಆಂಧ್ರಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾಗಿದ್ದರೂ, ಅಭಿವೃದ್ಧಿ ಮಾತ್ರ ಶೂನ್ಯವಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ರಸ್ತೆ ಮಾಡಲು ಮುಂದಾಗಿದ್ದು, ಪ್ರಸ್ತುತ ಲೋಕಸಭೆ ಚುನಾವಣೆ ಬಂದರೂ ಇನ್ನೂ ಯಾರೂ ಅಭಿವೃದ್ಧಿ ಮಾಡದೇ ಕಲ್ಲು, ಗುಂಡಿಗಳಲ್ಲಿ ಹರಸಾಹಸದಿಂದ ಸಂಚಾರ ಮಾಡುವಂತಾಗಿದೆ.
●ಎಂ.ಟಿ.ರಾಜಪ್ಪ, ಗ್ರಾಪಂ ಸದಸ್ಯ, ಮುಷ್ಟ್ರಹಳಿ

Advertisement

Udayavani is now on Telegram. Click here to join our channel and stay updated with the latest news.

Next