ಕರ್ನಾಟಕದ ಕಾಶ್ಮೀರ ಎಂದೇ ಖ್ಯಾತಿ ಪಡೆದಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಜಲಪಾತಗಳಿಗೆ ಲೆಕ್ಕವಿಲ್ಲ. ಅದರಲ್ಲೂ ಮಳೆಗಾಲದಲ್ಲಂತೂ ಜಲಧಾರೆಗಳ ಗೊಂಚಲವೆ ಸೃಷ್ಟಿಯಾಗುತ್ತದೆ. ಈ ಹಿಂದೆ ಕಾರವಾರ ಜಿಲ್ಲೆಯಲ್ಲಿರುವ ಕೆಲವೊಂದು ಪ್ರಮುಖ ಜಲಪಾತಗಳ ಬಗ್ಗೆ ನಾವು ನಿಮಗೆ ತಿಳಿಸಿದ್ದೇವು. ಇದೀಗ ಮತ್ತೊಂದು ಮನಮೋಹಕವಾದ ಜಲಧಾರೆ ಕುರಿತಾದ ಸಂಪೂರ್ಣ ಮಾಹಿತಿಯನ್ನು ನಿಮ್ಮ ಮುಂದೆ ಇಡಲಿದ್ದೇವೆ. ಅಂದಹಾಗೆ ಇಂದು ನಾವು ನಿಮಗೆ ಹೇಳ ಹೊರಟಿರುವುದು ಬಂಗಾರ ಕುಸುಮ ಎನ್ನುವ ಜಲಪಾತದ ಬಗ್ಗೆ.
ಉತ್ತರ ಕನ್ನಡದಲ್ಲಿರುವ ಜಲಪಾತಗಳ ಪಟ್ಟಿಯಲ್ಲಿ ಬಂಗಾರ ಕುಸುಮ ಜಲಪಾತ ಕೂಡಾ ಸೇರಿದೆ. ಈ ಜಿಲ್ಲೆಯಲ್ಲಿರುವವರು ಈ ಬಂಗಾರ ಕುಸುಮ ಜಲಪಾತದ ಬಗ್ಗೆ ಕೇಳಿರುವಿರಿ, ನೋಡಿರುವಿರಿ. ಇದೊಂದು ಸಣ್ಣ ಜಲಪಾತವಾಗಿದೆ. ಆದರೆ ಹೆಚ್ಚಿನವರಿಗೆ ಇಂತಹದ್ದೊಂದು ಜಲಪಾತ ಇದೇ ಅನ್ನೋದೇ ಗೊತ್ತಿಲ್ಲ.
ಬಂಗಾರ ಕುಸುಮ ಜಲಪಾತ ಹೊನ್ನಾವರ ತಾಲ್ಲೂಕಿನ ಮೂಲಕ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಸಾಗಿದರೆ ಸುಮಾರು 41ಕೀ.ಮಿ ದೂರದಲ್ಲಿ ಇದೆ. ಗೇರು ಸೊಪ್ಪದಲ್ಲಿ ಬೆಟ್ಟ ಗುಡ್ಡಗಳ ನಡುವೆ ಹಾದುಹೋಗುವ ಈ ಜಲಪಾತವು ಒಂದು ಅದ್ಭುತ ದೃಶ್ಯವನ್ನು ನೀಡುತ್ತದೆ. ಮಳೆಗಾಲದಲ್ಲಂತೂ ಈ ಬಂಗಾರ ಜಲಪಾತವನ್ನು ವೀಕ್ಷಿಸುವ ಮಜಾನೇ ಬೇರೆ. ನೀರಿನಿಂದ ತುಂಬಿ ಉಕ್ಕಿ ಹರಿಯುವ ಈ ಜಲಪಾತ ನಿಜಕ್ಕೂ ನಿಮ್ಮ ಕಣ್ಣು ಕುಕ್ಕುವಂತಿರುತ್ತದೆ.
ಬಂಗಾರ ಕುಸುಮ ಹೆಸರು ಹೇಗೆ ಬಂತು ?
ಈ ಜಲಪಾತದಿಂದ ಸುಮಾರು 9 ಕಿ.ಮೀ ದೂರದಲ್ಲಿ ಒಂದು ಬಂಗಾರಮಕ್ಕಿ ವೀರಾಂಜನೇಯ ದೇವಸ್ಥಾನವಿದೆ. ಕೆಲವು ವರ್ಷಗಳ ಹಿಂದೆ ಈ ಜಲಪಾತಕ್ಕೆ ಹೆಸರೇ ಇರಲಿಲ್ಲವಂತೆ. ಬಂಗಾರಮಕ್ಕಿ ವೀರಾಂಜನೇಯ ದೇವಾಲಯದ ಅರ್ಚಕರು ಈ ಜಲಪಾತಕ್ಕೆ ಬಂಗಾರ ಕುಸುಮ ಜಲಪಾತ ಎಂಬ ಹೆಸರನ್ನುಇಟ್ಟಿದ್ದು ಎನ್ನಲಾಗುತ್ತದೆ. ಇನ್ನು ಉತ್ತರ ಕನ್ನಡ ಜಿಲ್ಲೆಗೆ ಪ್ರವಾಸಕ್ಕೆಂದು ಬರುವ ಜನರಿಗೆ ಈ ಜಲಪಾತದ ಕುರಿತು ಮಾಹಿತಿ ಅಷ್ಟಾಗಿರುವುದಿಲ್ಲ.
ಜೋಗ ಜಲಪಾತದಿಂದ ಬಲು ಸಮೀಪ :
ಬಂಗಾರ ಕುಸುಮ ಜಲಪಾತವು ವಿಶ್ವ ಪ್ರಸಿದ್ಧ ಜೋಗ ಜಲಪಾತದಿಂದ ಬಲು ಸಮೀಪದಲ್ಲಿದೆ. ಜೋಗದಿಂದ ಕೇವಲ 32 ಕಿ.ಮೀ ಕ್ರಮಿಸಿದರೆ ಈ ಬಂಗಾರ ಕುಸುಮ ಜಲಪಾತ ಸಿಗುತ್ತದೆ.
ಚಾರಣ ಪ್ರಿಯರಿಗೆ ಹೇಳಿ ಮಾಡಿಸಿದ ಸ್ಥಳ :
ಗುಡ್ಡ, ಬೆಟ್ಟಗಳ ನಡುವಿನಲ್ಲಿ ಹರಿಯುತ್ತಿರುವ ಈ ಸುಂದರ ಜಲಪಾತವನ್ನು ನೋಡುವುದರ ಜೊತೆಗೆ ನಿಮಗೆ ಟ್ರಕ್ಕಿಂಗ್ ಕೂಡಾ ಮಾಡಿದಂತಾಗುತ್ತದೆ. ಬಂಗಾರ ಕುಸುಮ ಜಲಪಾತದ ಜೊತೆಗೆ ಗೇರುಸೊಪ್ಪದಲ್ಲಿ ಇನ್ನು ಹಲವಾರು ಆಕರ್ಷಣೆಯ ಸ್ಥಳಗಳಿವೆ.
ಗೇರುಸೊಪ್ಪ ಅಣೆಕಟ್ಟು ಗೇರುಸೊಪ್ಪ ಕಣಿವೆಯಲ್ಲಿ ವಿಶಿಷ್ಟ ಜಲಾಶಯವನ್ನು ಸೃಷ್ಟಿಸಿದೆ. ಗೇರುಸೊಪ್ಪದಿಂದ ಜೋಗಫಾಲ್ಸ್ ಕಡೆಗೆ ಸುಮಾರು 10 ಕಿ.ಮೀ ದೂರದಲ್ಲಿರುವ ಫಾರೆಸ್ಟ್ ಡಿಪಾರ್ಟ್ಮೆಂಟ್ ನಿರ್ಮಿಸಿದ ವೀಕ್ಷಣಾ ಗೋಪುರದ ಮೇಲಿಂದ ಕಣಿವೆಯನ್ನು ನೋಡಬಹುದು. ಕಣಿವೆಯ ಮೂಲಕ ಜಲಾಶಯದಲ್ಲಿ ದೋಣಿ ವಿಹಾರವನ್ನೂ ಮಾಡಬಹುದು.
ತಲುಪುವುದು ಹೇಗೆ?
ಬಂಗಾರ ಕುಸುಮ ಜಲಪಾತ ವೀಕ್ಷಿಸಲು ರಾಷ್ಟ್ರೀಯ ಹೆದ್ದಾರಿ 206 ರ ಮೂಲಕ ಬಂದು, ಜಲಪಾತದ ವರೆಗೆ 1 ಕೀ.ಮೀ ನಡೆದುಕೊಂಡು ಹೋದರೆ ಜಲಪಾತ ವೀಕ್ಷಿಸಬಹುದು. ಇಲ್ಲಿಗೆ ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲದೇ ಇರುವ ಕಾರಣ ನಿಮ್ಮ ಸ್ವಂತ ವಾಹನದಲ್ಲಿ ಪ್ರಯಾಣಿಸುವುದು ಸೂಕ್ತ.
*ಗಣೇಶ್ ಹಿರೇಮಠ