ದುಬೈ: ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ನೀಡಿದ 145 ರನ್ ಗಳ ಸಾಧಾರಣ ಮೊತ್ತವನ್ನು ಬೆನ್ನತ್ತಿದ್ದ ಚೆನ್ನೈ ಸೂಪರ್ ಕಿಂಗ್ಸ್ 2 ವಿಕೆಟ್ ನಷ್ಟಕ್ಕೆ 150 ರನ್ ಗಳಿಸುವ ಮೂಲಕ ಗೆಲುವಿನ ನಗೆ ಬೀರಿದೆ.
ರುತುರಾಜ್ ಗಾಯಕ್ವಾಡ್ ಮನಮೋಹಕ ಅರ್ಧಶತಕ ಮತ್ತು ಮಧ್ಯಮ ಕ್ರಮಾಂಕದ ಸಮಯೋಚಿತ ಆಟದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ಆರ್ ಸಿಬಿ ಎದುರು ಭರ್ಜರಿ ಜಯಸಾಧಿಸಿದೆ.
ಚೆನ್ನೈ ಪರ ಕಣಕ್ಕಿಳಿದ ರುತುರಾಜ್ ಗಾಯಕ್ ವಾಡ್ ಮತ್ತು ಫಾಫ್ ಡು ಪ್ಲೆಸಿಸ್ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಈ ಜೋಡಿ ಮೊದಲ ವಿಕೆಟ್ ಗೆ 46 ರನ್ ಗಳ ಜೊತೆಯಾಟ ನಡೆಸಿತು. ಡುಪ್ಲೆಸಿಸ್ 2 ಸಿಕ್ಸ್ ಹಾಗೂ 2 ಪೋರ್ ಮೂಲಕ 13 ಎಸೆತಗಳಲ್ಲಿ 25 ರನ್ ಗಳಿಸಿದ್ದ ವೇಳೆ ಕ್ರಿಸ್ ಮೋರಿಸ್ ಎಸೆತದಲ್ಲಿ ಸಿರಾಜ್ ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು.
ನಂತರ ಗಾಯಕ್ವಾಡ್ ಜೊತೆಯಾದ ಅಂಬಟಿ ರಾಯುಡು, ಬೆಂಗಳೂರು ಬೌಲರ್ಸ್ ಗಳ ಬೆವರಿಳಿಸಿದರು. ಬೌಂಡರಿ ಸಿಕ್ಸರ್ ಗಳ ಸುರಿಮಳೆಗೈದ ಈ ಜೋಡಿ ತಂಡದ ಮೊತ್ತವನ್ನು 113ರ ಗಡಿ ತಲುಪಿಸಿದರು. ಈ ವೇಳೆ ದಾಳಿಗಿಳಿದ ಚಹಲ್, 2 ಸಿಕ್ಸರ್ ಮೂಲಕ 39 ರನ್ ಗಳಿಸಿದ್ದ, ರಾಯಡುವನ್ನು ಔಟ್ ಮಾಡುವ ಮೂಲಕ ತಂಡಕ್ಕೆ ಅಲ್ಪ ಭರವಸೆ ನೀಡಿದರು. ‘
ಮತ್ತೊಂದೆಡೆ ಗಾಯಕ್ವಾಡ್ ಏಕಾಂಗಿಯಾಗಿ ಹೋರಾಡಿ ಐಪಿಎಲ್ 13ನೇ ಆವೃತ್ತಿಯ ಮೊದಲ ಅರ್ಧಶತಕ ಸಿಡಿಸಿದರು. 51 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 4 ಬೌಂಡರಿಗಳ ನೆರವಿನಿಂದ 65 ರನ್ ಗಳಿಸಿದ ಗಾಯಕ್ವಾಡ್ ನಾಟೌಟ್ ಆಗಿ ಉಳಿದರು. ಕೊನೆಯಲ್ಲಿ ನಾಯಕ ಧೋನಿ ಕೂಡ ಪಂದ್ಯವನ್ನು ಗೆಲ್ಲಿಸುವಲ್ಲಿ ಮಹತ್ವದ ಪಾತ್ರವಹಿಸಿದರು. 21 ಎಸೆತಗಳಲ್ಲಿ 3 ಬೌಂಡರಿ ಸಹಿತ 19 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.
ಅಂತಿಮವಾಗಿ ಚೆನ್ನೈ 18. 4ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 150 ರನ್ ಗಳಿಸುವ ಮೂಲಕ ಜಯಭೇರಿ ಬಾರಿಸಿತು. ಬೆಂಗಳೂರು ಪರ ಕ್ರಿಸ್ ಮೋರಿಸ್ ಹಾಗೂ ಯಜುವೇಂದ್ರ ಚಹಾಲ್ ತಲಾ 1 ವಿಕೆಟ್ ಪಡೆದರು.
ಇದಕ್ಕೂ ಮೊದಲು ನಾಯಕ ಕೊಹ್ಲಿ ಭರ್ಜರಿ ಅರ್ಧಶತಕ ಹಾಗೂ ಎಬಿಡಿ ಗಳಿಸಿದ 39 ರನ್ ಗಳ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 146 ರನ್ ಗಳ ಅಲ್ಪ ಮೊತ್ತವನ್ನು ಪೇರಿಸಿತ್ತು. ಆರ್ ಸಿಬಿಯನ್ನು ತನ್ನ ಮಾರಕ ಬೌಲಿಂಗ್ ಮೂಲಕ ಕಟ್ಟಿಹಾಕಿದ ಮೋನು ಕುಮಾರ್ 3 ವಿಕೆಟ್ ಗಳಿಸಿದರೆ, ಸ್ಯಾಮ್ ಕರನ್ 2 ವಿಕೆಟ್ ಪಡೆದು ಮಿಂಚಿದರು.