ಬೆಂಗಳೂರು: ಬಿ.ಕಾಂ. ಪಾಸ್ ಆಗಿ ಎಂ.ಕಾಂ. ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪದವಿಯಲ್ಲಿ ಅನುತ್ತೀರ್ಣರಾಗಿದ್ದೀರಿ ಎಂಬ ಫಲಿತಾಂಶ ನೀಡುವ ಮೂಲಕ ಬೆಂಗಳೂರು ವಿಶ್ವವಿದ್ಯಾಲಯ ಮತ್ತೂಮ್ಮೆ ಎಡವಟ್ಟು ಮಾಡಿದೆ.
ಬೆಂವಿವಿ ವ್ಯಾಪ್ತಿಗೆ ಸೇರುವ ಚನ್ನಪಟ್ಟಣದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮೊದಲ ಸೆಮಿಸ್ಟರ್ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪದವಿ ಫಲಿತಾಂಶ ಪ್ರಕಟಿಸಿದೆ. ಇದರಲ್ಲಿ ಬಹುತೇಕ ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಆದರೆ, 2021ನೇ ಸಾಲಿನಲ್ಲಿ ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ ಡಿಸೆಂಬರ್ ಅವಧಿಗೆ ಬೆಂಗಳೂರು ವಿವಿಯು ಫಲಿತಾಂಶ ನೀಡಿದೆ. ಆ ನಂತರ ಅಂಕಪಟ್ಟಿಯನ್ನು ಸಹ ನೀಡಿದೆ.
ಇದರ ಆಧಾರದ ಮೇಲೆ ಸ್ನಾತಕೋತ್ತರ ಪದವಿ ಪ್ರವೇಶ ಪಡೆದಿದ್ದಾರೆ. ಇತ್ತೀಚಿಗೆ ವಿದ್ಯಾರ್ಥಿಗಳಿಗೆ ನೀವು ಫೇಲ್ ಆಗಿದ್ದೀರಿ ಎಂಬ ಸಂದೇಶವನ್ನು ಬೆಂವಿವಿ ರವಾನಿಸಿದೆ. ಇದರಿಂದ ಗಾಬರಿಯಾದ ವಿದ್ಯಾರ್ಥಿಗಳು ವಿವಿಯನ್ನು ಸಂಪರ್ಕಿಸಿದ್ದು, ವಿವಿಯ ಕೆಲ ತಾಂತ್ರಿಕ ದೋಷದಿಂದ ಈ ರೀತಿ ಆಗಿದ್ದು, ಫೇಲ್ ಆಗಿರುವುದು ಖಾತ್ರಿಪಡಿಸಿದೆ.
ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ನಮಗೆ ಪದವಿಯಲ್ಲಿ ಅನುತ್ತೀರ್ಣರಾಗಿದ್ದೀರಿ ಎಂಬ ಸಂದೇಶ ಕಳುಹಿಸಲಾಗಿದೆ. ಇದರಿಂದ ಮುಂದೇನು ಎಂಬ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿದ್ಯಾರ್ಥಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಬೆಂವಿವಿ ತನ್ನ ತಪ್ಪು ಸರಿ ಮಾಡಿ ಪಾಸ್ ಮಾಡದಿದ್ದರೆ, ವಿವಿಯ ನಿರ್ಲಕ್ಷ್ಯತನವನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಲು ವಿದ್ಯಾರ್ಥಿಗಳು ನಿರ್ಧರಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಬೆಂಗಳೂರು ವಿವಿ ಮೌಲ್ಯಮಾಪನ ಕುಲಸಚಿವ ಪ್ರೊ. ದೇವರಾಜು, ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನಕ್ಕೆ ಕೋಡಿಂಗ್ ಮತ್ತು ಡಿಕೋಡಿಂಗ್ ಮಾಡುವ ವೇಳೆ ಕೆಲವು ತಾಂತ್ರಿಕ ಕಾರಣಗಳಿಂದ ಸಮಸ್ಯೆಯಾಗಿದೆ. ಆದಷ್ಟು ಬೇಗ ಸಮಸ್ಯೆಯನ್ನು ಬಗೆಹರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.