Advertisement

6 ವರ್ಷವಾದರೂ ಬೀದಿ ವ್ಯಾಪಾರಿ ಸರ್ವೇ ಇಲ್ಲ

03:36 PM Jun 30, 2023 | Team Udayavani |

ಬೆಂಗಳೂರು: ಪಾಲಿಕೆ ವ್ಯಾಪ್ತಿಯಲ್ಲಿ ಐದಾರು ವರ್ಷಗಳಿಂದ ಬೀದಿ ಬದಿ ವ್ಯಾಪಾರಿಗಳ ಸರ್ವೇ ನಡೆದಿಲ್ಲ. ಆ ಹಿನ್ನೆಲೆಯಲ್ಲಿ ಕಾನೂನು ಬದ್ಧವಾಗಿ ಸರ್ಕಾರದಿಂದ ದೊರೆಯಬೇಕಾದ ವಿವಿಧ ಕಲ್ಯಾಣ ಯೋಜನೆಗಳ ಸವಲತ್ತುಗಳು ಕೂಡ ಕೈಗೆ ಸಿಗುತ್ತಿಲ್ಲ ಎಂಬ ದುಗುಡದಲ್ಲಿ ಬೀದಿ ಬದಿ ವ್ಯಾಪಾರಿಗಳು ಬದುಕು ಸಾಗಿಸುತ್ತಿದ್ದಾರೆ. ಹೀಗಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಹೊಸ ಸರ್ಕಾರ ರಾಜ್ಯವ್ಯಾಪಿ ಬೀದಿ ಬದಿ ವ್ಯಾಪಾರಿಗಳ ಸರ್ವೇ ಕಾರ್ಯಕ್ಕೆ ಮುಂದಾಗಬೇಕು ಎಂಬ ಕೂಗು ಕೇಳಿ ಬಂದಿದೆ.

Advertisement

ಪಾಲಿಕೆ ವ್ಯಾಪ್ತಿಯಲ್ಲಿ 2017ರಲ್ಲಿ ಬೀದಿ ಬದಿ ವ್ಯಾಪಾರಿಗಳ ಸಮೀಕ್ಷೆ ನಡೆದಿತ್ತು. ಕಾಟಾಚಾರಕ್ಕೆ ಬಿಬಿಎಂಪಿ ಸರ್ವೇ ಕಾರ್ಯ ನಡೆಸಿದೆ ಎಂಬ ಆರೋಪ ಕೇಳಿತ್ತು. ಇದಾದ ಬಳಿಕ 2022ರಲ್ಲಿ ಬಿಬಿಎಂಪಿ ಸರ್ವೇ ಕಾರ್ಯಕ್ಕೆ ಮುಂದಾಗಿತ್ತು. ಟೆಂಡರ್‌ ಕರೆದು ಕೆಲಸ ನಿಗದಿ ಪಡಿಸಿತ್ತು. ಆದರೆ ಬೀದಿ ವ್ಯಾಪಾರಿಗಳ ವಲಯದಿಂದ ಇದಕ್ಕೆ ಆಕ್ಷೇಪ ಕೇಳಿ ಬಂದಿತ್ತು.

ಜತೆಗೆ ಜೀವನೋಪಾಯ ಸಂರಕ್ಷಣೆ ಮತ್ತು ಬೀದಿ ಬದಿ ವ್ಯಾಪಾರ ನಿಯಂತ್ರಣ ಕಾಯ್ದೆ 2014ರ ನಿಯಮ ಉಲ್ಲಂಘನೆ ಆಗಲಿದೆ ಎಂದು ಆರೋಪ ಕೇಳಿಬಂದಿತ್ತು. ಪಾಲಿಕೆ ಸಿಬ್ಬಂದಿಯೇ ಸರ್ವೇ ನಡೆಸಬೇಕು ಎಂದು ಬೀದಿ ಬದಿ ವ್ಯಾಪಾರಿಗಳ ಸಂಘಟನೆಗಳು ಆಗ್ರಹಿಸಿದ್ದವು. ಇದಾದ ಬಳಿಕ ಚುನಾವಣೆ ಸೇರಿದಂತೆ ಕೆಲವು ತಾಂತ್ರಿಕ ಕಾರಣಗಳಿಂದ ಸರ್ವೇ ನಡೆಯಲೇ ಇಲ್ಲ.

ಈ ಹಿಂದೆ ಪಾಲಿಕೆ ಬೀದಿ ಬದಿ ವ್ಯಾಪಾರಿಗಳನ್ನು ಗುರುತಿಸಿ ಗುರುತಿನ ಚೀಟಿಯನ್ನು ವಿತರಿಸಿತ್ತು. ಆದರೆ ಆ ಅವಧಿ ಪೂರ್ಣಗೊಂಡಿದ್ದು, ಇನ್ನೂ ಕೂಡ ಪಾಲಿಕೆ ವ್ಯಾಪಾರಿಗಳಿಗೆ ಗುರುತಿನ ಚೀಟಿ ನೀಡುವ ಕಾರ್ಯಕ್ಕೆ ಮುಂದಾಗಿಲ್ಲ. ಹೀಗಾಗಿ ಕೆಲವು ಇಲಾಖೆ ಅಧಿಕಾರಿಗಳಿಂದ ಕಿರಿ ಕಿರಿ ಅನುಭವಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವ್ಯಾಪಾರಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಹಲವರು ಸರ್ವೇಯಿಂದ ಹೊರಗೆ: ಬಿಬಿಎಂಪಿ ಈ ಹಿಂದೆ ನಡೆಸಿದ ಸರ್ವೇಯಲ್ಲಿ ತಳ್ಳುಗಾಡಿ, ತರಕಾರಿ, ಹೂವು-ಹಣ್ಣು ವ್ಯಾಪಾರಿಗಳನ್ನು ಪರಿಗಣಿಸಿಯೇ ಇಲ್ಲ. ವಾರ್ಡ್‌ಗೆ ತಲಾ ಒಬ್ಬ ಆರೋಗ್ಯ ನಿರೀಕ್ಷಕರನ್ನು ಸರ್ವೇ ಕಾರ್ಯಕ್ಕೆ ನಿಯೋಜಿಸಲಾಗಿತ್ತು. ಬೆಳಗ್ಗೆ 5 ರಿಂದ ಸಂಜೆ 5ರ ತನಕ ಮಾತ್ರ ಪಾಲಿಕೆ ಅಧಿಕಾರಿಗಳು ಸರ್ವೇ ನಡೆಸಿದ್ದರು. ಬೆಳಗ್ಗೆ 3 ಗಂಟೆಗೆ ಕೆ.ಆರ್‌. ಮಾರುಕಟ್ಟೆ ಮತ್ತು ಕಲಾಸಿಪಾಳ್ಯ ಮಾರುಕಟ್ಟೆ ಆರಂಭವಾಗುತ್ತೆ. ಸಂಜೆ ಬಳಿಕ ಚಾಟ್ಸ್‌ ಅಂಗಡಿಗಳು ಆರಂಭವಾಗುತ್ತದೆ. ಆದರೆ ಇವರನ್ನು ಸರ್ವೇಯಲ್ಲಿ ಲೆಕ್ಕಕ್ಕೆ ತೆಗೆದುಕೊಂಡಿಲ್ಲ ಎಂದು ಬೆಂಗಳೂರು ಜಿಲ್ಲಾ ಬೀದಿ ವ್ಯಾಪಾರಿಗಳ ಸಂಘಟನೆಗಳ ಒಕ್ಕೂಟದ ಕಾನೂನು ಸಲಹೆಗಾರ ವಿನಯ್‌ ಶ್ರೀನಿವಾಸ್‌ ದೂರುತ್ತಾರೆ.

Advertisement

ತಳ್ಳುವ ಗಾಡಿ ಅಷ್ಟೇ ಅಲ್ಲ. ಬೆಳಗಿನ ಜಾವ ಮತ್ತು ಸಂಜೆ ವೇಳೆ ವ್ಯಾಪಾರ ಮಾಡುವವರು ರಾಜಧಾನಿಯಲ್ಲಿ ಇದ್ದಾರೆ. ಇವರಲ್ಲಿ ಹಲವು ಮಂದಿ ಸರ್ವೇಯಿಂದ ದೂರ ಉಳಿದಿದ್ದಾರೆ. ಆ ಹಿನ್ನೆಲೆಯಲ್ಲಿ ವ್ಯಾಪಾರ ನಿಯಂತ್ರಣ ಕಾಯ್ದೆ 2014ರ ನಿಯಮದ ಅಡಿಯಲ್ಲಿ ಹೊಸದಾಗಿ ಸರ್ವೇ ನಡೆಸಬೇಕು ಎಂದು ಒತ್ತಾಯಿಸುತ್ತಾರೆ.

63 ಸಾವಿರ ಪೈಕಿ 26 ಸಾವಿರ ಮಂದಿಗೆ ಮಾತ್ರ ಗುರುತಿನ ಚೀಟಿ

2017-18ರಲ್ಲಿ ರಾಜ್ಯವ್ಯಾಪಿ ಬೀದಿಬದಿ ವ್ಯಾಪಾರಿಗಳ ಸಮೀಕ್ಷೆ ನಡೆದಿತ್ತು. ಆಗ ರಾಜ್ಯವ್ಯಾಪಿ ಸುಮಾರು 2.5ಲಕ್ಷ ಜನರು ತಮ್ಮ ಹೆಸರು ನೋಂದಣಿ ಮಾಡಿಕೊಂಡಿದ್ದರು. ಅದರಲ್ಲಿ ಸರ್ಕಾರ 1.21 ಲಕ್ಷ ಮಂದಿಗೆ ಗುರುತಿನ ಚೀಟಿ ನೀಡಿತ್ತು. ಹಾಗೆಯೇ ಬೆಂಗಳೂರಿನಲ್ಲಿ 63 ಸಾವಿರ ಮಂದಿ ತಮ್ಮ ಹೆಸರನ್ನು ನೋಂದಣಿ ಮಾಡಿಕೊಂಡಿದ್ದು, ಕೇವಲ 25 ಸಾವಿರ ಮಂದಿಗೆ ಗುರುತಿನ ಚೀಟಿ ನೀಡಿತ್ತು ಎಂದು ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ರಂಗಸ್ವಾಮಿ ಹೇಳುತ್ತಾರೆ. ಸರ್ಕಾರ ಗುರುತಿನ ಚೀಟಿ ನೀಡದ ಹಿನ್ನೆಲೆಯಲ್ಲಿ ಕೋವಿಡ್‌ ಸಂದರ್ಭದಲ್ಲಿ ಹಲವು ಮಂದಿ ಬೀದಿ ಬದಿ ವ್ಯಾಪಾರಿಗಳ ಸರ್ಕಾರದ ಸವಲತ್ತುಗಳಿಂದ ವಂಚಿತರಾದರು. ಕೋವಿಡ್‌ ನಂತರ ಹಲವು ಮಂದಿ ವ್ಯಾಪಾರಿಗಳು ಊರು ಸೇರಿದ್ದಾರೆ. ಇನ್ನೂ ಕೆಲವು ಮಂದಿ ಹೊಸದಾಗಿ ವ್ಯಾಪಾರ ಆರಂಭಿಸಿದ್ದಾರೆ. ಹೀಗಾಗಿ ಹೊಸದಾಗಿ ಸರ್ಕಾರ ಮತ್ತೂಂದು ಸರ್ವೇ ನಡೆಸಿ ಬೀದಿಬದಿ ವ್ಯಾಪಾರಿಗಳ ನೆರವಿಗೆ ಬರಬೇಕಾಗಿದೆ ಎಂದು ಒತ್ತಾಯಿಸುತ್ತಾರೆ.

ಸಿದ್ದರಾಮಯ್ಯ ನೇತೃತ್ವದ ಹೊಸ ಸರ್ಕಾರ ಬೀದಿ ಬದಿ ವ್ಯಾಪಾರಿಗಳ ಸರ್ವೇ ನಡೆಸಬೇಕು. ಯಾವುದೇ ಕಾರಣಕ್ಕೂ ಟೆಂಡರ್‌ ಕರೆದು ಖಾಸಗಿ ಸಂಸ್ಥೆಗಳಿಗೆ ನೀಡಬಾರದು. ಖಾಸಗಿಯವರಿಗೆ ನೀಡಿದರೆ ಚಿಲುಮೆ ಪ್ರಕರಣದ ರೀತಿಯಲ್ಲೇ ಬೀದಿ ಬದಿ ವ್ಯಾಪಾರಿಗಳ ಖಾಸಗಿ ಮಾಹಿತಿಗಳು ಕೂಡ ಲೀಕ್‌ ಆಗುವ ಸಾಧ್ಯತೆ ಇದೆ. ಹೀಗಾಗಿ ಪಾಲಿಕೆ ಅಧಿಕಾರಿಗಳಿಗೆ ಸರ್ವೇ ಕಾರ್ಯ ನಡೆಸಲು ಸೂಚಿಸಬೇಕು. ●ವಿನಯ್‌ ಶ್ರೀನಿವಾಸ್‌, ಕಾನೂನು ಸಲಹೆಗಾರರು, ಬೆಂಗಳೂರು ಜಿಲ್ಲಾ ಬೀದಿ ವ್ಯಾಪಾರಿಗಳ ಸಂಘಟನೆಗಳ ಒಕ್ಕೂಟ.

ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next