Advertisement
ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂದೇ ತೇಜಸ್ವಿನಿ ಅನಂತ ಕುಮಾರ್ ಬಿಂಬಿತವಾಗಿದ್ದರು. ಆದರೆ ಮೊದಲ ಎರಡು ಅಭ್ಯರ್ಥಿಗಳ ಪಟ್ಟಿಯಲ್ಲಿ ಆ ಕ್ಷೇತ್ರದ ಅಭ್ಯರ್ಥಿ ಹೆಸರು ಘೋಷಣೆಯಾಗಿಲ್ಲ. ಈ ನಡುವೆ ಪ್ರಧಾನಿ ನರೇಂದ್ರ ಮೋದಿಯವರೇ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ತೀವ್ರ ಕುತೂಹಲ ಮೂಡಿಸಿದೆ.
Related Articles
Advertisement
ಅಧಿಕೃತವಾಗಿ ಅಭ್ಯರ್ಥಿ ಹೆಸರು ಘೋಷಣೆ ಮೊದಲೇ ಕಚೇರಿ ಆರಂಭಿಸಿದ್ದು, ಪ್ರಚಾರ ನಡೆಸಿದ್ದು ಕೆಲವರ ಅಸಮಾಧಾನಕ್ಕೆ ಕಾರಣವಾಗಿರಬಹುದು ಎಂಬ ಮಾತುಗಳೂ ಇವೆ. ಆ ಹಿನ್ನೆಲೆಯಲ್ಲಿ ಮೊದಲೆರಡು ಪಟ್ಟಿಯಲ್ಲಿ ಹೆಸರು ಘೋಷಣೆಯಾಗದಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಅಚ್ಚರಿಯ ಅಭ್ಯರ್ಥಿ ಕಣಕ್ಕಿಳಿಯುವರೇ ಎಂಬ ಬಗ್ಗೆ ಪಕ್ಷದ ನಾಯಕರಲ್ಲೇ ಚರ್ಚೆ ನಡೆದಿದೆ. ಯಾರೂ ನಿರೀಕ್ಷಿಸದ ಹೊಸಮುಖ ಪರಿಚಯಿಸುವ ಸಂಭವವನ್ನೂ ತಳ್ಳಿ ಹಾಕುವಂತಿಲ್ಲ ಎಂಬ ಮಾತುಗಳಿವೆ.
ಪ್ರಚಾರ ಮುಂದುವರಿಕೆ: ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕುರಿತು ನಾನಾ ಸುದ್ದಿ, ವದಂತಿಗಳು ಕೇಳಿಬರುತ್ತಿದ್ದರೂ ತೇಜಸ್ವಿನಿ ಅನಂತ ಕುಮಾರ್ ಅವರು ಪ್ರಮುಖರ ಭೇಟಿ, ಸಭೆ ಕಾರ್ಯಕ್ರಮಗಳನ್ನು ಮುಂದುವರಿಸಿದ್ದಾರೆ.
ಒಂದೊಮ್ಮೆ ಪ್ರಧಾನಿಯವರು ಅಭ್ಯರ್ಥಿಯಾಗಿ ಸ್ಪರ್ಧಿಸಿದರೂ ಪ್ರಚಾರ ನಡೆಸಬೇಕಾಗುತ್ತದೆ. ಹಾಗಾಗಿ ಜನ ಸಂಪರ್ಕ, ಪ್ರಚಾರ ಸಭೆಗಳನ್ನು ಸ್ಥಗಿತಗೊಳಿಸದೆ ಮುಂದುವರಿಸಿರುವ ಸಾಧ್ಯತೆ ಇದೆ ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ.
ನಾಯಕರ ಸಭೆಯಲ್ಲೂ ಚರ್ಚೆ: ರಾಜ್ಯ ಬಿಜೆಪಿ ಕಚೇರಿಯಲ್ಲಿ ರಾಜ್ಯ ಚುನಾವಣಾ ಪ್ರಭಾರಿ ಮುರಳೀಧರರಾವ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲೂ ಬೆಂಗಳೂರು ದಕ್ಷಿಣ ಕ್ಷೇತ್ರ ಕುರಿತು ಚರ್ಚೆ ನಡೆಯಿತು. ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಲೋಕಸಭಾ ಕ್ಷೇತ್ರ ಚುನಾವಣಾ ಸಂಚಾಲಕ ಸುಬ್ಬನರಸಿಂಹ ಅವರು ಸಭೆಯಲ್ಲಿದ್ದ ಕಾರಣ ವಿಚಾರ ಪ್ರಸ್ತಾಪವಾಯಿತು.
ರಾಜ್ಯದಿಂದ ಒಬ್ಬರೇ ಸಂಭಾವ್ಯ ಅಭ್ಯರ್ಥಿ ಹೆಸರನ್ನು ಕೇಂದ್ರ ಚುನಾವಣಾ ಸಮಿತಿಗೆ ಶಿಫಾರಸು ಮಾಡಲಾಗಿತ್ತು. ತೇಜಸ್ವಿನಿ ಅನಂತ ಕುಮಾರ್ ಅವರೇ ಅಭ್ಯರ್ಥಿಯಾಗುವ ಸಾಧ್ಯತೆ ಹೆಚ್ಚಾಗಿದ್ದು, ಸದ್ಯ ನಡೆಯುತ್ತಿರುವ ಪ್ರಚಾರ ಕಾರ್ಯ ಮುಂದುವರಿಯಲಿ ಎಂದು ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.