ಕೆ.ಆರ್.ಪುರ: ಸೋಮವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ವಿಜಿ ನಾಪುರದಿಂದ ಟಿನ್ ಫ್ಯಾಕ್ಟರಿ ಕಡೆಗೆ ಸಂಪರ್ಕ ಕಲ್ಪಿಸುವ ರೈಲ್ವೇ ಕೆಳ ಸೇತುವೆ ಜಲಾವೃತಗೊಂಡು ವಾಹನ ಸವಾರರು ಪರದಾಡಿದರು.
ರಾತ್ರಿ ಸುರಿದ ಮಳೆಗೆ ಐದು ಅಡಿ ನೀರು ಶೇಖರಣೆಗೊಂಡು ಕೇಳಸೇತುವೆ ಕೆರೆಯಂತೆ ಆಯಿತು. ನೀರು ಹೆಚ್ಚು ಆವರಿಸಿಕೊಂಡ ಕಾರಣ ಸವಾರರು ವಾಹನಗಳನ್ನು ನೀರಲ್ಲೇ ಬಿಟ್ಟು ಪ್ರಾಣ ಉಳಿಸಿಕೊಂಡರು. ಬೈಕ್, ಕಾರು ಮುಳುಗಡೆ ಆಗಿದ್ದವು. ಮಂಗಳವಾರ ಬೆಳಗ್ಗೆಯಿಂದ ಸಂಜೆಯವರೆಗೆ ಅಗ್ನಿ ಶಾಮಕ ದಳದ ಸಿಬ್ಬಂದಿ ಮೋಟಾರ್‌ಪಂಪ್ ಇಟ್ಟು ನೀರು ಹೊರಹಾಕಿದರು.
ಎಷ್ಟು ಹೊತ್ತು ಆದರೂ ನೀರಿನ ಪ್ರಮಾಣ ಕಡಿಮೆ ಆಗದಿರುವುದನ್ನು ಕಂಡು ವಾಹನ ಸವಾರರು ಬೇರೆ ಮಾರ್ಗದ ಮೂಲಕ ತೆರಳಿದರು. ಹತ್ತಾರು ವರ್ಷಗಳಿಂದ ಈ ಸಮಸ್ಯೆ ಇದೆ. ಪ್ರತಿ ಸಾರಿ ಮಳೆ ಬಂದಾಗ ರೈಲ್ವೇ ಸೇತುವೆ ಬಳಿ ನೀರು ಶೇಖರಣೆ ಆಗುತ್ತದೆ. ಶಾಶ್ವತ ಕ್ರಮ ಕೈಗೊಳ್ಳುವ ಬದಲು ಬಿಬಿಎಂಪಿ ಅಧಿಕಾರಿಗಳು ಪ್ರತಿ ಬಾರಿ ನೀರು ತೆರವುಗೊಳಿಸಿ ಕೈತೊಳೆದುಕೊಳ್ಳುತ್ತಿದ್ದಾರೆ. ಕೆಳ ಸೇತುವೆ ಅವೈಜ್ಞಾನಿಕವಾಗಿ ನಿರ್ಮಿಸಿರುವುದೇ ಇದಕ್ಕೆ ಕಾರಣ ಎಂದು ಸ್ಥಳೀಯರು ದೂರಿದ್ದಾರೆ.
ನೀರು ಹರಿಯಲು ಸಮರ್ಪಕ ವ್ಯವಸ್ಥೆ ಇಲ್ಲ: ಮಳೆ ನೀರು ಚರಂಡಿ ಮೂಲಕ ಹರಿದು ಹೋಗಲು ಸಮರ್ಪಕ ವ್ಯವಸ್ಥೆ ಇಲ್ಲ. ಹೀಗಾಗಿ, ಮಳೆ ನೀರು ನಾಲ್ಕು ಅಡಿಗೂ ಹೆಚ್ಚು ಶೇಖರಣೆಗೊಳ್ಳುತ್ತದೆ. ಪ್ರತೀ ಸಲ ಮಳೆ ಬಂದಾಗ ಇದೇ ಪರಿಸ್ಥಿತಿ ಎದುರಿಸಬೇಕಾಗಿದೆ ಎಂದು ವಾಹನ ಸವಾರರು ಆರೋಪಿಸಿದ್ದಾರೆ. ಸಾವಿರಾರು ವಾಹನ ಸವಾರರು ಈ ಕೆಳ ಸೇತುವೆಯನ್ನೇ ನೆಚ್ಚಿಕೊಂಡಿದ್ದಾರೆ. ಮಳೆ ಬಂದಾಗಲೆಲ್ಲ ಜಲವೃತಗೊಂಡು ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ. ಸೋಮವಾರ ರಾತ್ರಿ ಸುರಿದ ಮಳೆಗೆ ವಾಹನ ಸವಾರರು ವಾಹನಗಳನ್ನು ನಡುನೀರಿನಲ್ಲಿ ಬಿಟ್ಟು ಪ್ರಾಣ ಉಳಿಸಿಕೊಳ್ಳಲು ಪರದಾಡಿದ್ದಾರೆ. ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಎಷ್ಟು ಬಾರಿ ಮನವಿ ಮಾಡಿಕೊಂಡರೂ ಶಾಶ್ವತ ಪರಿಹಾರಕ್ಕೆ ಮುಂದಾಗಿಲ್ಲ ಎಂದು ಸ್ಥಳೀಯ ರಮೇಶ್ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.