Advertisement

ಬೆಂಗಳೂರು: 20 ವಾಯುಗುಣಮಟ್ಟ ಮೇಲ್ವಿಚಾರಣ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸೋದು 5 ಮಾತ್ರ

08:28 AM May 10, 2020 | Nagendra Trasi |

ಬೆಂಗಳೂರು:ವಾಯುಮಾಲಿನ್ಯದ ಮೇಲ್ವಿಚಾರಣೆ ಹಾಗೂ ತಡೆಗಟ್ಟುವ ನಿಯಂತ್ರಣ ಕ್ರಮಗಳನ್ನು ಜಾರಿಗೆ ತರುವುದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ (ಕೆಎಸ್‍ಪಿಸಿಬಿ) ಪ್ರಮುಖ ಕಾರ್ಯವಾಗಿದ್ದು, ಇದರ ಅಧೀನದಲ್ಲಿರುವ ಒಟ್ಟು 20 ವಾಯುಗುಣಮಟ್ಟದ ಮೇಲ್ವಿಚಾರಣಾ ಕೇಂದ್ರಗಳಲ್ಲಿ ಕೇವಲ ಐದು ಮಾತ್ರ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ.

Advertisement

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಪ್ರಕಾರ, 8 ವಿಧ ಮಾಲಿನ್ಯಕಾರಕಗಳನ್ನು ಆಧರಿಸಿ ಗಾಳಿಯ ಗುಣಮಟ್ಟವನ್ನು ಅಳೆಯಲಾಗುತ್ತದೆ. ಈ ಮಾಲಿನ್ಯಕಾರಕಗಳಲ್ಲಿ ಪಿಎಂ 10, ಪಿಎಂ 2.5 ಮತ್ತು ಇತರ ಮಾಲಿನ್ಯಕಾರಕಗಳು ಸೇರಿವೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಡಿಯಲ್ಲಿ 13 ಸಾಮಾನ್ಯ ಮೇಲ್ವಿಚಾರಣಾ ಕೇಂದ್ರಗಳಿದ್ದು, ಇವುಗಳಲ್ಲಿ ಎರಡು ಕೇಂದ್ರಗಳಿಂದ ಯಾವುದೇ ದತ್ತಾಂಶಗಳು ದೊರೆಯುತ್ತಿಲ್ಲ. ಪ್ರಮುಖ ಮಾಲಿನ್ಯಕಾರಕವೆಂದು ಪರಿಗಣಿಸಲಾಗಿರುವ ಪಿಎಂ 2.5 ಹೊರತುಪಡಿಸಿ 4 ಮಾಲಿನ್ಯಕಾರಕಗಳ ದತ್ತಾಂಶ (ಡೇಟಾ)ವನ್ನು ಮಾತ್ರವೇ ಉಳಿದ 5 ಕೇಂದ್ರಗಳು ನೀಡುತ್ತಿದೆ. ಇನ್ನುಳಿದ ಕೇಂದ್ರಗಳಲ್ಲಿ ಕೇವಲ 5 ಮಾಲಿನ್ಯಕಾರಕಗಳ ದತ್ತಾಂಶಗಳನ್ನು ಪಡೆಯಲಾಗುತ್ತಿದೆ. ಕೆಎಸ್‍ಪಿಸಿಬಿಯ ಒಟ್ಟು 7 ನಿರಂತರ ವಾಯುಗುಣಮಟ್ಟ ಮೇಲ್ವಿಚಾರಣ ಕೇಂದ್ರಗಳು (ಸಿಎಎಕ್ಯೂಎಮ್‍ಎಸ್) ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅವುಗಳಲ್ಲಿ ಎರಡು ಕೇಂದ್ರಗಳಷ್ಟೇ ಪಿಎಂ 2.5 ಹೊರತುಪಡಿಸಿದ ನಾಲ್ಕು ಮಾಲಿನ್ಯಕಾರಕಗಳ ದತ್ತಾಂಶ ಸಂಗ್ರಹಿಸುತ್ತಿದೆ.

ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ. ಟಿ.ವಿ. ರಾಮಚಂದ್ರ ಅವರ ಪ್ರಕಾರ `ಕೆಎಸ್‍ಪಿಸಿಬಿಯು ಸರಾಸರಿ ದತ್ತಾಂಶವನ್ನು ನೀಡುತ್ತಿದ್ದು, ಇದೊಂದು ತಪ್ಪಾದ ಕ್ರಮ. ಇಲ್ಲಿನ ದತ್ತಾಂಶ ಸಂಗ್ರಹ ವಿಧಾನದಲ್ಲಿ ಅರ್ಧದಷ್ಟು ಮಾಲಿನ್ಯಕಾರಕಗಳ ಮಾಹಿತಿ ಲಭಿಸುವುದಿಲ್ಲ. ಅವರು ನೀಡುವ ದತ್ತಾಂಶವು ಸರಾಸರಿ ವಾಯುಗುಣಮಟ್ಟವನ್ನು ನೀಡುತ್ತಾ ತಪ್ಪುದಾರಿಗೆಳೆಯುವ ಚಿತ್ರಣವನ್ನು ಹೊಂದಿದ್ದು, ಕಡಿಮೆ ವಾಯುಮಾಲಿನ್ಯವಿರುವ ಪ್ರದೇಶಗಳ ವಾಯುಗುಣಮಟ್ಟವನ್ನೂ ಅದೇ ಸಾಲಿನಲ್ಲಿ ಸೇರಿಸುತ್ತವೆ. ಇದು ಹೆಚ್ಚು ವಾಯುಮಾಲಿನ್ಯ ಹೊಂದಿರುವ ಪ್ರದೇಶದ ವ್ಯಾಪ್ತಿಯಲ್ಲಿ ಮಾಲಿನ್ಯದ ಮಟ್ಟವನ್ನು ದತ್ತಾಂಶದಲ್ಲಿ ಕಡಿಮೆಯಾಗಿ ತೋರಿಸುತ್ತದೆ.

Advertisement

ಫೌಂಡೇಶನ್ ಫಾರ್ ಇಕೋಲಾಜಿಕಲ್ ಸೆಕ್ಯೂರಿಟಿ ಆಫ್ ಇಂಡಿಯಾ ಆಡಳಿತ ಮಂಡಳಿ ಸದಸ್ಯರಾಗಿರುವ ಡಾ. ಎಲ್ಲಪ್ಪ ರೆಡ್ಡಿ ಅವರು 101ರಿಪೋರ್ಟರ್ಸ್ ಜೊತೆ ಮಾತನಾಡುತ್ತಾ, ‘ನಾನು ಸರಕಾರದ ದತ್ತಾಂಶಗಳನ್ನು ನಂಬುವುದಿಲ್ಲ. ಏಕೆಂದರೆ ಅವುಗಳು ಸೂಕ್ತವಾದುದಲ್ಲ. ಸರಕಾರ ಪಡೆಯುವ ಮಾಹಿತಿಯು ನಗರದ ವಾರ್ಷಿಕ ವಾಯುಗುಣಮಟ್ಟವನ್ನು ಅಲೆಯಲುತ್ತದೆಯಷ್ಟೇ. ಒಟ್ಟು 20 ಮೇಲ್ವಿಚಾರಣ ಕೇಂದ್ರಗಳಲ್ಲಿ 15 ಕೇಂದ್ರಗಳು ದತ್ತಾಂಶವನ್ನು ಸಂಗ್ರಹಿಸುತ್ತಿಲ್ಲ, ಅಥವಾ ಅವುಗಳು ಅರ್ಧದಷ್ಟು ಮಾತ್ರವೇ ದತ್ತಾಂಶವನ್ನು ಸಂಗ್ರಹಿಸುತ್ತಿವೆ. ಆದ್ದರಿಂದ ನಾವು ಈಗ ಪಡೆಯುತ್ತಿರುವುದು ಭಾಗಶಃ ದತ್ತಾಂಶವಾಗಿದೆ’ ಎಂದರು.

ಮುಂದುವರಿದು ಮಾತನಾಡಿದ ಅವರು `ಪೀಣ್ಯ ಕೈಗಾರಿಕಾ ಪ್ರದೇಶಗಳಂತಹ ನಗರದ ಕೆಲವು ಕಲುಷಿತ ವಾಯುಗುಣಮಟ್ಟವಿರುವ ಪ್ರದೇಶಗಳ ದತ್ತಾಂಶವು ನಿಖರವಾಗಿ ಲಭ್ಯವಿಲ್ಲ’ ಎಂಬುದನ್ನು ಬೊಟ್ಟುಮಾಡಿದರು. `ಸಮಸ್ಯೆಯನ್ನು ಅರ್ಥಮಾಡಿಕೊಳ್ಳುವುದು ಮುಖ್ಯ ಮತ್ತು ಈ ಸಮಸ್ಯೆಯು ಎಷ್ಟೊಂದು ದೊಡ್ಡದಾಗಿದೆ ಎಂಬುದನ್ನೂ ಅರ್ಥೈಯಿಸಿಕೊಳ್ಳಬೇಕು. ಸರಿಯಾದ ದತ್ತಾಂಶಗಳಿಲ್ಲದೆ ಸಮಸ್ಯೆಯ ನಿರ್ಲಕ್ಷ್ಯಕ್ಕೆ ಕಾರಣವಾಗಿದೆ. ಆದ್ದರಿಂದ ಕೆಎಸ್‍ಪಿಸಿಬಿಯು ತನ್ನಲ್ಲಿರುವ 20 ವರ್ಷಗಳಷ್ಟು ಹಳೆಯ ಯಂತ್ರಗಳನ್ನು ಈಗಿನ ಆಧುನಿಕ ಹಾಗೂ ತಂತ್ರಜ್ಞಾನ ಆಧರಿತ ನಿಖರ ದತ್ತಾಂಶಗಳನ್ನು ನೀಡುವ ಯಂತ್ರಗಳಿಗೆ ಬದಲಾಯಿಸಿಕೊಳ್ಳಬೇಕು’ ಎಂದವರು ಪ್ರತಿಕ್ರಿಯಿಸಿದರು.

ಕೆಎಸ್‍ಪಿಸಿಬಿಯ ಮುಖ್ಯ ವೈಜ್ಞಾನಿಕ ಅಧಿಕಾರಿ ಡಾ. ಹೆಚ್. ಲೋಕೇಶ್ವರಿ ಅವರ ಮಾಹಿತಿ ನೀಡುತ್ತಾ, `ಕೆಎಸ್‍ಪಿಸಿಬಿಯ ವಾಯುಗುಣಮಟ್ಟದ ಮೇಲ್ವಿಚಾರಣ ಕೇಂದ್ರಗಳಲ್ಲಿ ಕೆಲವು ನಿರ್ವಹಣೆಯಲ್ಲಿದ್ದು, ಇನ್ನು ಕೆಲವು ಹಳೆಯದಾಗಿವೆ. ಹೀಗಾಗಿ ಅವು ಪಿಎಂ 2.5 ದತ್ತಾಂಶಗಳನ್ನು ಸಂಗ್ರಹಿಸುತ್ತಿಲ್ಲ. ಯಂತ್ರಗಳನ್ನು ಬದಲಾಯಿಸಲು ಅಥವಾ ಸರಿಪಡಿಸಲು ತಯಾರಕರೊಂದಿಗೆ ತಿಳುವಳಿಕೆ ಪತ್ರಕ್ಕೆ ಸಹಿ ಮಾಡಲಾಗಿದ್ದು, ನಂತರ ಸರಿಯಾದ ದತ್ತಾಂಶ ಸಂಗ್ರಹ ಪ್ರಾರಂಭಗೊಳ್ಳುತ್ತದೆ’ ಎನ್ನುತ್ತಾರೆ.

ವರದಿ : 101ರಿಪೋಟರ್ಸ್.ಕಾಮ್(ಕಪಿಲ್ ಕಾಜಲ್)

ಚಿತ್ರಗಳು : ತೇಜಸ್ ದಯಾನಂದ್ ಸಾಗರ್

Advertisement

Udayavani is now on Telegram. Click here to join our channel and stay updated with the latest news.

Next