ರಾಮನಗರ: ಬೆಂಗಳೂರು ಮತ್ತು ಮೈಸೂರು ನಡುವಿನ ವಾಹನ ಸಂಚಾರ ದಟ್ಟಣೆ ನಿವಾರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ರಾಷ್ಟ್ರೀಯ ಹೆದ್ದಾರಿ (275)ನ್ನು 10 ಮಾರ್ಗಗಳಿಗೆ ವಿಸ್ತರಿಸುವ ಯೋಜನೆ ಯನ್ನು ಹಮ್ಮಿಕೊಂಡಿದೆ. ಬೆಂಗಳೂರಿನಿಂದ ಮದ್ದೂರಿನ ನಿಡಘಟ್ಟ ಗ್ರಾಮದವರೆಗೆ ಶೇ.10ರಷ್ಟು ಕಾಮಗಾರಿಯೂ ಪೂರ್ಣಗೊಂಡಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು ಮತ್ತು ಮೈಸೂರು ನಡುವಿನ ಸಂಚಾರ ದಟ್ಟಣೆ ದಿನೇ ದಿನೇ ಏರಿಕೆಯಾಗುತ್ತಲೇ ಇದೆ. ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಬೆಂಗಳೂರು ಮತ್ತು ಮೈಸೂರು ನಡುವಿನ ರಸ್ತೆಯನ್ನು ನಾಲ್ಕು ಪಥಗಳ ಹೆದ್ದಾರಿ ರಸ್ತೆಯನ್ನಾಗಿ ಪರಿವರ್ತಿಸಲಾಗಿತ್ತು. ಮಂಗಳೂರಿನ ಬಂಟ್ವಾಳದವರೆಗೂ, ರಸ್ತೆ ಅಭಿವೃದ್ಧಿಯಾಗಿ ವಾಹನ ದಟ್ಟಣೆ ಕೂಡ ಗಣನೀಯವಾಗಿ ಏರಿಕೆಯಾಯಿತು. 2014ರಲ್ಲಿ ಕೇಂದ್ರ ಸರ್ಕಾರ ಈ ರಸ್ತೆಯನ್ನು 8 ಪಥದ ರಸ್ತೆ ನಿರ್ಮಿಸಲು ಮುಂದಾಗಿ ನಂತರದ ದಿನಗಳಲ್ಲಿ 10 ಪಥಗಳ ರಸ್ತೆಯನ್ನಾಗಿ ಪರಿವರ್ತಿಸಲು ನಿರ್ಧರಿಸಲಾಯಿತು. ಇದೀಗ ಬೆಂಗಳೂರು ನಗರದಿಂದ 18 ಕಿಮೀ ದೂರ ಇರುವ ನೈಸ್ ಜಂಕ್ಷನ್ ಬಳಿಯಿಂದ ವಿಸ್ತರಣೆ ಕಾರ್ಯ ಪ್ರಗತಿಯಲ್ಲಿದೆ.
ಎಲ್ಲಿಂದ ಎಲ್ಲಿಯವರೆಗೆ ವಿಸ್ತರಣೆ: ಬೆಂಗಳೂರಿನ ಕೆಂಗೇರಿ ಹೊರ ವಲಯದ ನೈಸ್ ಜಂಕ್ಷನ್ ಬಳಿಯ ಪಂಚಮುಖೀ ದೇವಾಲಯದಿಂದ ಬೆಂಗಳೂರು ದಕ್ಷಿಣ ತಾಲೂಕು ಕುಂಬಳಗೂಡು, ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣದ ಮೂಲಕ ಮೈಸೂರು ಹೊರ ವಲಯದ ಕೊಲಂಬಿಯಾ ಏಷಿಯಾ ಆಸ್ಪತ್ರೆಯವರೆಗೆ 117.30 ಕಿ.ಮೀ ರಸ್ತೆಯನ್ನು 10 ಪಥಗಳ ರಸ್ತೆಯನ್ನಾಗಿ ಪರಿವರ್ತಿಸಲಾಗುತ್ತಿದೆ.
ರಸ್ತೆ ವಿಸ್ತರಣೆ ಕಾರ್ಯ ಎರಡು ಹಂತಗಳು ನಿಡಘಟ್ಟ ಪ್ಯಾಕೇಜ್ 1 ಮತ್ತು ಮೈಸೂರು ಪ್ಯಾಕೇಜ್ 2 ಹೆಸರಿನಲ್ಲಿ ಕಾಮಗಾರಿಗಳು ನಡೆಯಬೇಕಾಗಿದೆ. ನಿಡಘಟ್ಟ ಪ್ಯಾಕೇಜ್ 1ರಲ್ಲಿ ಕಾಮಗಾರಿ ಆರಂಭವಾಗಿದ್ದು, ಸುಮಾರು ಶೇ.10ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಪ್ಯಾಕೇಜ್ 2ರ ಕಾಮಗಾರಿ ಇನ್ನೊಂದು ತಿಂಗಳಲ್ಲಿ ಆರಂಭವಾಗಬೇಕಾಗಿದೆ.
49 ಅಂಡರ್‌ಪಾಸ್ 13 ಓವರ್ ಪಾಸ್‌ಗಳು: ರಾಷ್ಟ್ರೀಯ ಹೆದ್ದಾರಿ 475 ವಿಸ್ತರಣೆಯ ನಂತರ ವಾಹನ ಸಂಚಾರ ಸುಗಮವಾಗಿ ಸಾಗಲಿದೆ. ರಸ್ತೆಯ ಎರಡೂ ಕಡೆ ಬ್ಯಾರಿಕೇಡ್‌ಗಳು ಇರಲಿವೆ. ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣ ನಗರಗಳಿಗೆ ಬೈಪಾಸ್ ರಸ್ತೆ ನಿರ್ಮಾಣವಾಗಲಿದ್ದು, ಹಾಗೂ ಹೆದ್ದಾರಿ ರಸ್ತೆಯಲ್ಲಿ ಬರುವ ಗ್ರಾಮ, ಪಟ್ಟಣ, ನಗರಗಳ ವ್ಯಾಪ್ತಿಯಲ್ಲಿ ಸರ್ವಿಸ್ ರಸ್ತೆ ಇರುತ್ತದೆ. ಅಲ್ಲದೇ ಪ್ರತಿ ಗ್ರಾಮಕ್ಕೂ ಅಂಡರ್‌ಪಾಸ್ ಅಥವಾ ಓವರ್ ಪಾಸ್‌ಗಳು ಇರುವುದರಿಂದ ಅಲ್ಲಿನ ನಾಗರಿಕರಿಗೆ ತೊಂದರೆ ಆಗುವುದಿಲ್ಲ. 49 ಅಂಡರ್ ಪಾಸ್ ಗಳು ಮತ್ತು 13 ಕಡೆ ಓವರ್ ಪಾಸ್‌ಗಳು ನಿರ್ಮಾಣವಾಗುವುದರಿಂದ ಹೆದ್ದಾರಿ ಹಾಗೂ ಗ್ರಾಮೀಣ ವಾಹನಗಳ ಸಂಚಾರಕ್ಕೆ ತೊಂದರೆ ಆಗುವುದಿಲ್ಲ. ಹೆದ್ದಾರಿ ರಸ್ತೆಯಲ್ಲಿ 69 (ಪ್ಯಾಕೇಜ್ 1ರಲ್ಲಿ 27, ಪ್ಯಾಕೇಜ್ 2ರಲ್ಲಿ 42) ಬಸ್ ಶೆಲ್ಟರ್‌ಗಳು ಹಾಗೂ 56ನೇ ಕಿಮಿ ಬಳಿ ಒಂದು ಕಡೆ ವಿಶ್ರಾಂತಿ ಪ್ರದೇಶ (ರೆಸ್ಟ್ ಏರಿಯಾ) ನಿರ್ಮಾಣವಾಗಲಿದೆ.
ಸೇತುವೆಗಳು ಎಷ್ಟು?: ಶ್ರೀರಂಗಪಟ್ಟಣದಲ್ಲಿ ಎಲಿವೇಟೆಡ್ ರಸ್ತೆಯನ್ನು ನಿರ್ಮಿಸುವ ಉದ್ದೇಶವಿದ್ದು, ಇದು ಸುಮಾರು 8 ಕಿಮೀ ಉದ್ದವಿರಲಿದೆ. ಬೆಂಗಳೂರು ಮತ್ತು ನಿಡಘಟ್ಟ ನಡುವೆ 4 ಪ್ರಮುಖ (ಮೇಜರ್) ಸೇತುವೆಗಳು ಮತ್ತು 11 ಸಣ್ಣ ಸೇತುವೆಗಳು (ಮೈನರ್) ಮತ್ತು ರೈಲು ರಸ್ತೆಯ ಮೇಲೆ 2 ಕಡೆ ಮೇಲ್ಸೆತುವೆಗಳು ನಿರ್ಮಾಣವಾಗಲಿದೆ.
ಪ್ಯಾಕೇಜ್ 2 ಮೈಸೂರು ಮತ್ತು ನಿಡಘಟ್ಟ ನಡುವೆ 5 ಪ್ರಮುಖ ಸೇತುವೆಗಳು (ಮದ್ದೂರು ಬಳಿಯ ಕೆರೆ, ಮಂಡ್ಯ ಬಳಿ ಕೆನಾಲ್, ಲೋಕಪಾವನಿ ನದಿ, ಉತ್ತರ ಕಾವೇರಿ ನದಿ ಮತ್ತು ದಕ್ಷಿಣ ಕಾವೇರಿ ನದಿ) ಮತ್ತು 11 ಕಿರಿಯ ಸೇತುವೆಗಳನ್ನು ನಿರ್ಮಿಸಬೇಕಾಗಿದೆ.
● ಬಿ.ವಿ.ಸೂರ್ಯ ಪ್ರಕಾಶ್