ಬೆಂಗಳೂರು: ಪ್ರಧಾನಮಂತ್ರಿ ಲೋಕಾರ್ಪಣೆ ಮಾಡಿದ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿಯ ಸರ್ವೀಸ್ ರಸ್ತೆ ನಿರ್ಮಾಣವೂ ಸೇರಿ ಬಾಕಿ ಕಾಮಗಾರಿ ಮುಗಿಯುವ ತನಕ ಟೋಲ್ ಸಂಗ್ರಹ ಮಾಡಬಾರದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು ಎಕ್ಸ್‌ಪ್ರೆಸ್ ಹೆಮ್ಮಾರಿ ಎಂಬ ಹ್ಯಾಷ್ ಟ್ಯಾಗ್ ಹಾಕಿ, ಮಳೆ ಬಂದರೆ ಅಂಡರ್ ಪಾಸ್‌ಗಳಲ್ಲಿ ನೀರು ನಿಲ್ಲದಂತೆ ಮಾಡುವ ಕೆಲಸ ತುರ್ತಾಗಿ ಆಗಬೇಕು. ಇಡೀ ರಸ್ತೆಯ ಕಾಮಗಾರಿಗಳು ಮುಗಿಯುವ ತನಕ ಜನರು ಕೂಡ ಟೋಲ್ ಕಟ್ಟುವ ಅಗತ್ಯ ಇಲ್ಲ ಎಂದಿದ್ದಾರೆ.
ಎಕ್ಸ್‌ಪ್ರೆಸ್ ಹೆದ್ದಾರಿ ಬೆಳಗಿನ ಜಾವದ ಸಣ್ಣ ಮಳೆಗೂ ತತ್ತರಿಸಿ ಹೋಗಿದೆ. ಅವೈಜ್ಞಾನಿಕವಾಗಿ ನಿರ್ಮಾಣಗೊಂಡ ಈ ಎಕ್ಸ್‌ಪ್ರೆಸ್ ಹೆಮ್ಮಾರಿ ಈಗ ಜನರ ಪಾಲಿಗೆ ಸಂಕಷ್ಟಗಳ ಸರಮಾಲೆಯನ್ನೇ ಸೃಷ್ಟಿ ಮಾಡುತ್ತಿದೆ. ಇದು ಎಕ್ಸ್‌ಪ್ರೆಸ್ ಹೆದ್ದಾರಿಯೋ, ಎಕ್ಸ್‌ಪ್ರೆಸ್ ಹೆಮ್ಮಾರಿಯೋ ಎಂದು ಕಿಡಿಕಾರಿದ್ದಾರೆ.
ಸಣ್ಣ ಮಳೆಯಿಂದಲೇ ಹೆದ್ದಾರಿಯ ಅಂಡರ್ ಪಾಸ್‌ಗಳು ಜಲಾವೃತವಾಗಿವೆ. ವಾಹನಗಳು ಸಿಕ್ಕಸಿಕ್ಕಲ್ಲಿ ನೀರಿನಲ್ಲಿ ಮುಳುಗಿವೆ. ಸರಣಿ ಅಪಘಾತಗಳಾಗಿ ವಾಹನ ಸವಾರರು ಹೈರಾಣಾಗಿದ್ದಾರೆ. ಅವೈಜ್ಞಾನಿಕ ಕಾಮಗಾರಿಯಿಂದಲೇ ಈ ಅವಾಂತರ ಸೃಷ್ಟಿ ಆಗಿದೆ. ಇದಕ್ಕೆ ರಾಜ್ಯ, ಕೇಂದ್ರ ಸರಕಾರಗಳು, ಹೆದ್ದಾರಿ ಪ್ರಾಧಿಕಾರ ಹಾಗೂ ಗುತ್ತಿಗೆದಾರರೇ ನೇರ ಹೊಣೆ ಎಂದು ದೂರಿದ್ದಾರೆ.