Advertisement

ತಂಗಿ ಮದುವೆ ಸಾಲ ತೀರಿಸಲು ಯುವಕನ ಅಪಹರಣ : 7 ಗಂಟೆ ಕಾರ್ಯಾಚರಣೆ; ನಾಲ್ವರು ಆರೋಪಿಗಳ ಬಂಧನ

10:26 PM Mar 26, 2021 | Team Udayavani |

ಬೆಂಗಳೂರು: ತಂಗಿಯ ಮದುವೆ ಸಾಲ ತೀರಿಸಲು ಯುವಕನ್ನು ಅಪಹರಣ ಮಾಡಿ ಎರಡು ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪಿ ಸೇರಿದಂತೆ ನಾಲ್ಕು ಆರೋಪಿಗಳನ್ನು ಪೂರ್ವ ವಿಭಾಗದ ಪೊಲೀಸರು ಬಂಧಿಸಿದ್ದಾರೆ ಎಂದು ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ತಿಳಿಸಿದರು.

Advertisement

ಆರೋಪಿಗಳು, ನರ್ಸಿಂಗ್‌ ಕಾಲೇಜು ನಡೆಸುತ್ತಿದ್ದ ಮಾಲೀಕರ ಮಗ ರಬೀಜ್‌ ಅರಾಪತ್‌ನನ್ನು ಮಾ.25ರಂದು ಅಪಹರಿಸಿದ್ದರು. ಅಲ್ಲದೇ, ಎರಡು ಕೋಟಿ ರೂ. ನೀಡುವಂತೆ ಹಣಕ್ಕಾಗಿ ಬೇಡಿಕೆಯಿಟ್ಟಿದ್ದರು. ಈ ಸಂಬಂಧ ಕೆ.ಜಿ. ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಚುರುಕುಗೊಳಿಸಿದ ಪೊಲೀಸರು, ಪ್ರಕರಣದ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಆಯುಕ್ತರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಾಡಗೊಂಡನಹಳ್ಳಿ(ಕೆ.ಜಿ.ಹಳ್ಳಿ)ಯ ನಿವಾಸಿಗಳಾದ ಅಬ್ದುಲ್‌ ಫ‌ಹಾದ್‌, ಸಲ್ಮಾನ್‌, ಝಬೀವುಲ್ಲಾ, ತೌಫಿಕ್‌ ಪಾಷಾ ಬಂಧಿತರು. ಆರೋಪಿಗಳ ಪೈಕಿ ಕಿರಣ್‌, ಗೌತಮ್‌, ಹಾಗೂ ತೌಫಿಕ್‌ ಪಾಷ ಎಂಬುವವರು ಜತೆಗೆ ಸೇರಿ ಅಪಹರಣ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದರು.

ಇದನ್ನೂ ಓದಿ :ಮುಸ್ಲಿಮರನ್ನು ಮತಗಳಾಗಿ ನೋಡುವುದು ಕಾಂಗ್ರೆಸ್‌ನ ಐತಿಹಾಸಿಕ ದುರಭ್ಯಾಸ : HDK

ಮಾ.25ರಂದು ಅಪಹರಣ:
ಕೃತ್ಯದ ಪ್ರಮುಖ ಆರೋಪಿ ಅಬ್ದುಲ್‌ ಫ‌ಹಾದ್‌ ತನ್ನ ತಂಗಿ ಮದುವೆಗಾಗಿ 12 ಲಕ್ಷ ರೂ. ಸಾಲ ಮಾಡಿದ್ದನು. ಹೀಗಾಗಿ ಶ್ರೀಮಂತರ ಮಕ್ಕಳನ್ನು ಅಪಹರಿಸುತ್ತಿದ್ದನು. ಈತನ ವಿರುದ್ಧ 2018ರಲ್ಲಿ ಮಹಿಳೆ ಅಪಹರಣ ಪ್ರಕರಣ ದಾಖಲಾಗಿದೆ. ಮಾ.25 ರಂದು ಮಧ್ಯಾಹ್ನ ನರ್ಸಿಂಗ್‌ ಕಾಲೇಜಿನ ಮಾಲೀಕರ ಹರಾಫ‌ತ್‌ (22) ದ್ವಿಚಕ್ರ ವಾಹನದಲ್ಲಿ ಮನೆಯಿಂದ ಹೊರಹೋಗಿದ್ದನು. ಈ ವೇಳೆ ಆರೋಪಿಗಳು ಓಎಲೆಕ್ಸ್‌ನಲ್ಲಿ ಖರೀದಿಸಿದ್ದ ಕಾರಿನಲ್ಲಿ ಯುವಕನನ್ನು ಅಪಹರಿಸಿದ್ದಾರೆ. ಇದನ್ನು ಕಂಡ ಪರಿಚಯಸ್ಥರು ಯುವಕನ ತಂದೆಗೆ ಮಾಹಿತಿ ನೀಡಿದ್ದರು.

Advertisement

ಏಳು ಗಂಟೆ ಕಾರ್ಯಾಚರಣೆ:
ತಕ್ಷಣ ಮಗನಿಗೆ ಕರೆ ಮಾಡಿದರೂ ಸಂಪರ್ಕ ಸಾಧ್ಯವಾಗಿಲ್ಲ. ಮಗನ ಸ್ನೇಹಿತರು, ಸಂಬಂಧಿಕರ ಮನೆಗಳಲ್ಲಿ ವಿಚಾರಿಸಿದಾಗ ಅಲ್ಲಯೂ ಮಾಹಿತಿ ಸಿಕ್ಕಿರಲಿಲ್ಲ. ಅಪಹರಣವಾದ ಎರಡು ಗಂಟೆ ನಂತರ ಅಪರಿಚಿತ ವ್ಯಕ್ತಿಗಳು ಕರೆ ಮಾಡಿ, ನಿಮ್ಮ ಮಗನನ್ನು ಅಪಹರಣವಾಗಿದೆ. ಎರಡು ಕೋಟಿ ರೂ. ಹಣ ನೀಡಿದರೆ ಬಿಡುತ್ತೇವೆ. ಇಲ್ಲವಾದರೆ, ನಿಮ್ಮ ಮಗನ ಕೈ ಹಾಗೂ ಕಾಲುಗಳನ್ನು ಕತ್ತರಿಸುತ್ತೇವೆ ಎಂದು ಬೆದರಿಸಿದ್ದರು. ಈ ಬಗ್ಗೆ ಕೆ.ಜಿ.ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಡಿಸಿಪಿ ಡಾ.ಶರಣಪ್ಪ ಅವರ ನೇತೃತ್ವದಲ್ಲಿ ತಂಡ ರಚನೆಯಾಗಿತ್ತು. ಈ ತಂಡ ಏಳು ಗಂಟೆ ಕಾರ್ಯಾಚರಣೆ ನಡೆಸಿ ಯುವಕರನ್ನು ರಕ್ಷಿಸಿ, ನಾಲ್ವರನ್ನು ಬಂಧಿಸಿದೆ.

ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ತಂಡಕ್ಕೆ ಕಮಲ್‌ ಪಂತ್‌ 40 ಸಾವಿರ ರೂ. ಬಹುಮಾನ ಘೋಷಿಸಿದ್ದಾರೆ.

ಆರೋಪಿಗಳು ಹೆಚ್ಚು ಸಾಲ ಮಾಡಿಕೊಂಡಿದ್ದರಿಂದ ಮಾ.25ರಂದು ಹರಾಫ‌ತ್‌ನನ್ನು ಸ್ನೇಹಿತನ ಮೂಲಕ ಕರೆಸಿಕೊಂಡು ಅಪಹರಿಸಿದ್ದರು. ಯುವಕನ ತಂದೆಗೆ ಎರಡು ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ತನಿಖೆ ಚುರುಕುಗೊಳಿಸಿದ ಪೂರ್ವ ವಿಭಾಗದ ಪೊಲೀಸರು ಏಳು ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.
-ಕಮಲ್‌ ಪಂತ್‌, ನಗರ ಪೊಲೀಸ್‌ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next